ಶಿವರಾಜ ತಂಗಡಗಿ ಕನಕಗಿರಿ ಕ್ಷೇತ್ರದಿಂದ ಗೆದ್ದು ಸಚಿವರಾಗಿ ಎಂಟತ್ತು ವರ್ಷದಲ್ಲಿ ಕೆರೆ ತುಂಬಿಸಿದ್ದೀನಿ ಎಂಂದು ಹೇಳುವುದನ್ನು ಬಿಟ್ಟರೇ ಅಭಿವೃದ್ಧಿ ಶೂನ್ಯ
ಕನಕಗಿರಿ: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರೈತ ಹಾಗೂ ಕರವೇ ಸಂಘಟನೆಗಳಿಂದ ಮಂಗಳವಾರ ಕರೆ ನೀಡಿದ್ದ ಕನಕಗಿರಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಸರ್ಕಾರಿ ಆಸ್ಪತ್ರೆಯ ಹೇಮರೆಡ್ಡಿ ಮಲ್ಲಮ್ಮ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕರವೇ ಕಾರ್ಯಕರ್ತರು ಭಾಗಿಯಾಗಿದ್ದರು. ತೆಗ್ಗಿನಮನಿ ಓಣಿಯಿಂದ ಸಾಗಿದ ಹೋರಾಟ ಮೆಲುಗಡೆ ಅಗಸಿ ಹನುಮಪ್ಪ ದೇಗುಲದಿಂದ ರಾಜಬೀದಿಯ ಮಾರ್ಗವಾಗಿ ಹಳೇ ಪೊಲೀಸ್ ಠಾಣೆ, ಬಸ್ ನಿಲ್ದಾಣ ಮಾರ್ಗವಾಗಿ ವಾಲ್ಮೀಕಿ ವೃತ್ತದವರೆಗೆ ನಡೆಯಿತು.ರೈತ ಮುಖಂಡ ಗಣೇಶರೆಡ್ಡಿ ಮಾತನಾಡಿ ಶಿವರಾಜ ತಂಗಡಗಿ ಕನಕಗಿರಿ ಕ್ಷೇತ್ರದಿಂದ ಗೆದ್ದು ಸಚಿವರಾಗಿ ಎಂಟತ್ತು ವರ್ಷದಲ್ಲಿ ಕೆರೆ ತುಂಬಿಸಿದ್ದೀನಿ ಎಂಂದು ಹೇಳುವುದನ್ನು ಬಿಟ್ಟರೇ ಅಭಿವೃದ್ಧಿ ಶೂನ್ಯ. ಬೈಪಾಸ್ ಚರಂಡಿ ನಿರ್ಮಿಸಿ ತ್ರಿವೇಣಿ ಸಂಗಮ ಶುಚಿಗೊಳಿಸಬೇಕು. ಕನಕಗಿರಿ ಅಭಿವೃದ್ಧಿ ಪ್ರಾಧಿಕಾರ ಘೋಷಿಸಬೇಕು. ಪೂಜೆಗೆ ಸೀಮಿತವಾದ ತೋಟಗಾರಿಕೆ ಪಾರ್ಕ್ ನ್ನು ಅನುಷ್ಠಾಗೊಳಿಸುವುದು, ಪಪಂ ಹಾಗೂ ಗ್ರಾಪಂ ಕಚೇರಿಯಲ್ಲಿ ಫಾರಂ-3 ದಂಧೆಯನ್ನಾಗಿಸಿಕೊಂಡ ಅಧಿಕಾರಿ, ಸಿಬ್ಬಂದಿಯವರ ಮೇಲೆ ಕಾನೂನು ಕ್ರಮವಹಿಸುವುದು, ಹೆಚ್ಚಾಗುತ್ತಿರುವ ಕಳ್ಳತನದ ಪ್ರಕರಣ ನಿಯಂತ್ರಿಸುವುದು, ಪಟ್ಟಣದ ಸರ್ವೇ 3ರಲ್ಲಿ ಆಶ್ರಯ ಮನೆ ಯೋಜನೆಗಾಗಿ ಮೀಸಲಿಟ್ಟ ಜಾಗವು ಒತ್ತುವರಿಯಾಗಿದ್ದು, ಹಕ್ಕಪತ್ರ ನೀಡಿದ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು. ಅಕ್ರಮ ಮದ್ಯದಂಗಡಿ ತೆರವುಗೊಳಿಸುವುದು, ಗ್ರಾಮೀಣ ಭಾಗದ ರಸ್ತೆ ದುರಸ್ಥಿಯಾಗಿದ್ದು, ಡಾಂಬರೀಕರಣಕ್ಕೆ ಮುಂದಾಗಬೇಕು. ಬಾಗಲಕೋಟೆ-ದರೋಜಿ ರೈಲು ಮಾರ್ಗ ಸರ್ವೇಗೆ ಸೀಮಿತವಾಗಿದ್ದು, ತ್ವರಿತವಾಗಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕಿರಾಣಿ, ಹಾರ್ಡ್ ವೇರ್, ಪಾನಶಾಪ್, ದಲಾಲಿ ಅಂಗಡಿ, ಬೇಕರಿ ಸೇರಿದಂತೆ ನಾನಾ ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ಮುಚ್ಚುವ ಮೂಲಕ ಬಂದ್ ಗೆ ಬೆಂಬಲ ನೀಡಿದರು. ಮಧ್ಯಾಹ್ನ 4 ಗಂಟೆಯ ನಂತರದ ಎಲ್ಲ ಅಂಗಡಿಗಳು ಆರಂಭಗೊಂಡವು.ಪ್ರಮುಖರಾದ ದುರ್ಗಾದಾಸ ಯಾದವ, ವಿರೇಶ ಬಿ, ಲಾಲಸಾಬ್ ಜೂಲಿಕೇರಿ, ಬಸವರಾಜ ದೇಸಾಯಿ, ಮುದಿಯಪ್ಪ ಕುರುಬರ, ಪರಶುರಾಮ, ಸಣ್ಣ ಹನುಮನಗೌಡ, ಪಂಪಣ್ಣ ನಾಯಕ, ಸಗರಪ್ಪ ಕಂಪ್ಲಿ, ಪಲ್ಲವಿ ಶರಣಪ್ಪ, ಹರೀಶ ಪೂಜಾರ, ಬಸವರಾಜ ಕೋರಿ, ವೀರಭದ್ರಪ್ಪ ಗುಗ್ಗಳಶೆಟ್ರ, ಮರಿಯಪ್ಪ ಹುಗ್ಗಿ, ಮಮ್ಮದರಫಿ, ನಾಗರಾಜ ಕಿನ್ನಾಳ, ಮಲ್ಲಮ್ಮ ಹೂಗಾರ, ದೇವಮ್ಮ ಹುಲಿಹೈದರ, ಸಿಂದೂ ಬಲ್ಲಾಳ್ ಸೇರಿ ಇತರರಿದ್ದರು.
6 ತಿಂಗಳ ಗಡುವು: ಕನಕಗಿರಿ ತಾಲೂಕಿನ ನೀರಾವರಿ ಸೇರಿದಂತೆ ವಿವಿಧ ಬೇಡಿಕೆಗಳು ಆರು ತಿಂಗಳೊಳಗಾಗಿ ಈಡೇರಬೇಕು. ಇಲ್ಲವಾದರೆ ಮತ್ತೊಮ್ಮೆ ಕನಕಗಿರಿ ಬಂದ್ ಕರೆ ನೀಡಲಾಗುವುದು. ಸಚಿವರು, ಜಿಲ್ಲಾಧಿಕಾರಿಗಳು ನಮ್ಮ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಇಲ್ಲವಾದರೆ ಹೋರಾಟಗಳು ನಿಲ್ಲುವುದಿಲ್ಲ ಎಂದು ರೈತರು, ಕರವೇ ಕಾರ್ಯಕರ್ತರು ತಮ್ಮ ಭಾಷಣದಲ್ಲಿ ಎಚ್ಚರಿಕೆ ನೀಡಿದರು.