ಕನ್ನಡಪ್ರಭ ವಾರ್ತೆ ಮಂಡ್ಯ
ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯುಸೆಕ್ ನೀರನ್ನು 15 ದಿನಗಳ ಕಾಲ ಬಿಡುವಂತೆ ನೀಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರದ ಆದೇಶವನ್ನು ಖಂಡಿಸಿ ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಮಂಡ್ಯ ನಗರದಲ್ಲಿ ಮಧ್ಯಾಹ್ನದವರೆಗೆ ಭಾಗಶಃ ಯಶಸ್ವಿಯಾಗಿದ್ದು, ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ವಿವಿಧ ಕನ್ನಡ ಸಂಘಟನೆಗಳು ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ನಗರದ ಬಹುತೇಕ ಪ್ರಮುಖ ರಸ್ತೆಗಳ ಅಂಗಡಿಗಳನ್ನು ಮಾಲೀಕರು, ವರ್ತಕರು ಮುಚ್ಚಿ ಬೆಂಬಲ ಸೂಚಿಸಿದರು.
ಪೇಟೆ ಬೀದಿ, ವಿವಿ ರಸ್ತೆ, ಗುತ್ತಲು ರಸ್ತೆ, ನೂರಡಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ವಿವಿಧೆಡೆ ಅಂಗಡಿ ಮುಂಗಟ್ಟುಗಳು ಮಧ್ಯಾಹ್ನ 2 ಗಂಟೆವರೆಗೆ ಮುಚ್ಚಲಾಗಿತ್ತು. ಅಲ್ಲಲ್ಲಿ ತೆರೆದಿದ್ದ ಅಂಗಡಿಗಳನ್ನು ಕನ್ನಡಪರ ಹೋರಾಟಗಾರರು ಮನವೊಲಿಸಿ ಮುಚ್ಚಿಸಿದರಾದರೂ ಅತ್ತ ಹೋರಾಟಗಾರರು ತೆರಳುತ್ತಿದ್ದಂತೆ ಮತ್ತೆ ಬಾಗಿಲು ತೆರೆದು ವ್ಯಾಪಾರ ವಹಿವಾಟಿನಲ್ಲಿ ನಿರತರಾದರು.ಆದರೆ, ಎಂದಿನಂತೆ ಸರ್ಕಾರಿ ಕಚೇರಿಗಳು, ಪೆಟ್ರೋಲ್ ಬಂಕ್‌ಗಳು, ಸಾರಿಗೆ ಬಸ್‌ಗಳ ಸಂಚಾರವಿತ್ತು. ಶಾಲಾ ಕಾಲೇಜುಗಳಲ್ಲಿ ಪಾಠ ಪ್ರವಚನಗಳು ನಡೆದವು. ವಿವಿಧ ಸಂಘಟನೆಗಳ ಮುಖಂಡರು ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಗಮನ ಸೆಳೆದರು.
ಗುಲಾಬಿ ಹೂ, ಸಿಹಿ ನೀಡಿ ವರ್ತಕತರ ಮನವೊಲಿಕೆ:
ಅಂಗಡಿ ಬಾಗಿಲು ತೆರೆದಿದ್ದ ಮಾಲೀಕರಿಗೆ ಪ್ರತಿಭಟನಾಕಾರರು ಗುಲಾಬಿ ಹೂ ಹಾಗೂ ಸಿಹಿ ನೀಡಿ ಕರ್ನಾಟಕ ಬಂದ್‌ಗೆ ಸಹಕರಿಸವಂತೆ ಮನವಿ ಮಾಡಿದರು. ಬಂದ್ ಹಿನ್ನೆಲೆಯಲ್ಲಿ ವರ್ತಕರು ಸೇರಿದಂತೆ ಎಲ್ಲರೂ ತಮ್ಮ ಅಂಗಡಿಗಳನ್ನು ಮುಚ್ಚಿ ಬೆಂಬಲ ನೀಡುವಂತೆ ಕೋರಲಾಗಿತ್ತು.
ಆದರೆ, ಪೇಟೆ ಬೀದಿ ಸೇರಿದಂತೆ ಪ್ರಮುಖ ರಸ್ತೆಗಳ ಅಂಗಡಿಗಳ ವರ್ತಕರು ಅಂಗಡಿಗಳನ್ನು ತೆರೆದು ವ್ಯಾಪಾರದಲ್ಲಿ ತೊಡಗಿದ್ದರು. ವಿಷಯ ತಿಳಿದ ಪ್ರತಿಭಟನಾಕಾರರು ಅಂಗಡಿಗಳ ಮಾಲೀಕರಿಗೆ ಗುಲಾಬಿ ಹೂ, ಸಹಿ ನೀಡಿ ನೀವು ಸಹಕ ಕಾವೇರಿ ನೀರು ಕುಡಿಯುತ್ತೀರಿ. ನಿಮಗೆ ರೈತರು ಬದುಕೋದು ಬೇಡವೇ?, ಅಂಗಡಿ ಬಾಗಿಲು ಮುಚ್ಚಿ ಹೋರಾಟಕ್ಕೆ ಬೆಂಬಲ ನೀಡುವಂತೆ ಕೋರಲಾಗಿ ವರ್ತಕರು ಅಂಗಡಿಗಳನ್ನು ಮುಚ್ಚಿ ಬೆಂಬಲ ನೀಡಿದರು.ಬಂದ್ ಹಿನ್ನೆಲೆಯಲ್ಲಿ ಎಲ್ಲ ಅಂಗಡಿಗಳ ವರ್ತಕರು ಬಾಗಿಲು ಮುಚ್ಚಿ ಬೆಂಬಲ ನೀಡಿದರೆ ಎಂದಿನಂತೆ ಮೆಡಿಕಲ್ ಸ್ಟೋರ್ಸ್ ಹಾಗೂ ಹೋಟೆಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಖಾಲಿ ಮಡಿಕೆ ಹೊತ್ತು ವಿನೂತನ ಪ್ರತಿಭಟನೆ:ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಾಗೂ ಕನ್ನಡ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸೇರಿದ ನಂತರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಧರಣಿ ಕುಳಿತು ಖಾಲಿ ಮಡಿಕೆ ಹೊತ್ತು ವಿನೂತನ ಹೋರಾಟ ನಡೆಸಿದರು.
ರಾಜ್ಯ ಸರ್ಕಾರ, ನೀರು ಬಿಡುವಂತೆ ಆದೇಶಿಸಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರಿಗಳ ವಿರುದ್ಧ ಕರ್ನಾಟಕಕ್ಕೆ ಖಾಲಿ ಕೊಡ ಕೊಟ್ಟಿದೆ ಎಂದು ವ್ಯಂಗ್ಯ ಮಾಡಿದರು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿದರು.ಬಾಯಿ ಬಡಿದುಕೊಂಡು ಪ್ರತಿಭಟನೆ:
ರಾಜ್ಯ ಸರ್ಕಾರ, ಸಿಡಬ್ಲ್ಯೂಆರ್‌ಸಿ, ಸಿಡಬ್ಲ್ಯೂಎಂಎ ಕರ್ನಾಟಕಕ್ಕೆ ಉರುಳಿಕಾಳು ಭಾಗ್ಯ ಕೊಟ್ಟಿವೆ ಎಂದು ಖಾಲಿ ಮಡಿಕೆ, ಉರುಳಿ ಕಾಳನ್ನು ತೋರಿಸಿ ತಮಿಳುನಾಡಿಗೆ ನೀರು ಬಿಟ್ಟರು ಎಂದು ಬಾಯಿ ಬಡಿದುಕೊಂಡು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಸಾರ್ವಜನಿಕರಿಗೆ ಲಾಲಿಪಪ್:
ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಡಿ.ಕೆ.ಶಿವಕುಮಾರ್ ಅವರು ಮಂಡ್ಯ ಜಿಲ್ಲೆಯ ಜನ ನನಗೂ ಒಂದು ಬಾರಿ ಅವಕಾಶ ಕೊಡಿ ಪೆನ್ನು-ಪೇಪರ್ ನನ್ನ ಕೈಗೂ ಕೊಡಿ ಎಂದು ಕೇಳಿದರು. ಆದರೆ, ಅವರು ಮಂಡ್ಯ ರೈತರಿಗೆ ಲಾಲಿಪಪ್ ಕೊಡುತ್ತಿದ್ದಾರೆ ಎಂದು ಸಾರ್ವಜನಿಕರಿಗೆ ಲಾಲಿಪಪ್ ನೀಡಿ ಹೋರಾಟಗಾರರು ಆಕ್ರೊಶ ವ್ಯಕ್ತಪಡಿಸಿದರು.ಬಂದ್ ಬೆಂಬಲಿಸಿ ಬೈಕ್ ಜಾಥಾ:
ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಒತ್ತಾಯಿಸಿ ಕನ್ನಡ ಸೇನೆ ಕಾರ್ಯಕರ್ತರು ನಗರದಲ್ಲಿ ಬೈಕ್ ರ್‍ಯಾಲಿ ನಡೆಸಿದರು. ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಅಂಗಡಿ ಮಾಲೀಕರಿಗೆ ಬಾಗಿಲು ಮುಚ್ಚುವಂತೆ ಮನವೊಲಿಸಿ ಬಂದ್‌ಗೆ ಸಹಕಾರ ನೀಡುವಂತೆ ಕೋರಿದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಧರಣಿ ಕುಳಿತು, ರಸ್ತೆಯಲ್ಲೇ ಬೈಕ್‌ಗಳನ್ನು ನಿಲ್ಲಿಸಿ ತಮಿಳುನಾಡು ಹಾಗೂ ಕಾವೇರಿ ನೀರು ಪ್ರಾಧಿಕಾರದ ವಿರುದ್ಧ ಧಿಕ್ಕಾರ ಕೂಗಿದರು.ಶಾಂತಿಯುತ ಪ್ರತಿಭಟನೆ ರೈತರಿಗೆ ಡೀಸಿ ಮನವಿ:
ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಜಿಲ್ಲಾಕಾರಿ ಡಾ.ಕುಮಾರ ಅವರು ಹೋರಾಟಗಾರರ ಜೊತೆಗೆ ಮಾತುಕತೆ ನಡೆಸಿ ಶಾಂತಿಯುತವಾಗಿ ಪ್ರತಿಭಟನೆ ಮಾಡುವಂತೆ ಮನವಿ ಮಾಡಿದರು. ಸಿಎಂ ಡಿ.ಕೆ.ಶಿವಕುಮಾರ್ ಅವರು ಕಾನೂನು ಸುವ್ಯವಸ್ಥೆಗೆ ಭಂಗವಾಗದಂತೆ ಹಾಗೂ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡುವಂತೆ ಸೂಚಿಸಿದ್ದಾರೆ. ಯಾರಿಗೂ ತೊಂದರೆಯಾಗದಂತೆ ಪ್ರತಿಭಟನೆ ನಡೆಸುವಂತೆ ಹೋರಾಟಗಾರರಲ್ಲಿ ಕೋರಿದರು.ಸದ್ಯ ಕೊಡಗಿನಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಈ ವಾರ ಮಳೆ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ. ಮಳೆ ಬಂದರೆ ಯಾವುದೇ ತೊಂದರೆಯಾಗಲ್ಲ. ಜನ-ಜಾನುವಾರುಗಳಿಗೆ ಕುಡಿಯುವ ನೀರನ್ನು ಇಟ್ಟುಕೊಳ್ಳಬೇಕಿದೆ. ಆಗಸ್ಟ್ ತಿಂಗಳಾದರೂ ಮಳೆ ಇಲ್ಲದ ಕಾರಣ ಕೃಷಿ ಚಟುವಟಿಕೆ ಜಿಲ್ಲೆಯಲ್ಲಿ ಪ್ರಾರಂಭವಾಗಿಲ್ಲ.
ಕೇವಲ ಶೇ.25 ರಷ್ಟು ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಸಹಜವಾಗಿ ರೈತರು ನೀರು ಕೊಡುವಂತೆ ಕೇಳುತ್ತಿದ್ದಾರೆ. ಆದರೆ, ಕಡಿಮೆ ನೀರು ಬಳಸಿ ಬೆಳೆ ಬೆಳೆಯುವಂತೆ ಅಥವಾ ಪರ್ಯಾಯ ಬೆಳೆ ಬೆಳೆಯುಂತೆ ರೈತರಿಗೆ ಮನವಿ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಶಾಂತಿಯುತವಾಗಿ ಚಳವಳಿ ನಡೆಸಲು ಎಲ್ಲರಿಗೂ ಹಕ್ಕಿದೆ. ಆದರೆ, ಪ್ರತಿಭಟನೆ ನೆಪದಲ್ಲಿ ರಸ್ತೆ ತಡೆ ಮಾಡುವುದು, ಸಾರ್ವಜನಿಕರಿಗೆ ಅನಗತ್ಯ ತೊಂದರೆ ಕೊಟ್ಟರೆ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ:ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ಅವರು ಜಿಲ್ಲಾದ್ಯಂತ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ಸೂಕ್ತ ಬಂದೋಬಸ್ತ್ ಮಾಡಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಟ್ಟು ನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ಭದ್ರತೆಗಾಗಿ ಇಬ್ಬರು ಎಎಸ್ಪಿ, 9 ಡಿವೈಎಸ್ಪಿ, 25 ಇನ್ಸ್ ಪೆಕ್ಟರ್ , 52 ಸಬ್ ಇನ್ಸ್ ಪೆಕ್ಟರ್ , 95 ಎಎಸ್‌ಐ, 800 ಪೊಲೀಸ್ ಕಾನ್‌ಸ್ಟೇಬಲ್, 8 ಡಿಆರ್, 8 ಕೆಎಸ್‌ಆರ್‌ಪಿ, ಒಂದು ಆರ್‌ಎಎಫ್ ತುಕಡಿ ಸೇರಿದಂತೆ ಜಿಲ್ಲೆಯಾದ್ಯಂತ 2 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು.ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ರ್‍ಯಾಪಿಡ್ ಆಕ್ಷನ್ ಫೋರ್ಸ್ ಹಾಗೂ ಸಿಆರ್‌ಪಿಎಫ್ ಒಂದೊಂದು ತುಕಡಿಗಳು ಬೀಡು ಬಿಟ್ಟಿದ್ದವು.ಮೂರು ತಾಲೂಕುಗಳಲ್ಲಿ ಎಂದಿನಂತೆ ವಹಿವಾಟು
ಮಂಡ್ಯ ಜಿಲ್ಲೆಯ ಮಳವಳ್ಳಿ, ಕೆ.ಆರ್.ಪೇಟೆ, ನಾಗಮಂಗಲ ತಾಲೂಕುಗಳಲ್ಲಿ ಕರ್ನಾಟಕ ಬಂದ್‌ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಮೂರು ತಾಲೂಕುಗಳಲ್ಲಿ ಎಂದಿನಂತೆ ಅಂಗಡಿಗಳನ್ನು ತೆರೆದು ವ್ಯಾಪಾರಸ್ಥರು ವಹಿವಾಟು ನಡೆಸಿದರು. ಜನಸಂದಣಿ ಕೂಡ ಎಂದಿನಂತೆ ಇತ್ತು. ಯಾವುದೇ ಸಂಘಟನೆಗಳು ಪ್ರತಿಭಟನೆ ನಡೆಸಲಿಲ್ಲ. ಹೀಗಾಗಿ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತವಾಗಲಿಲ್ಲ.