ಸಾರಾಂಶ
ಉಡುಪಿ : ಸನಾತನ ಧರ್ಮ ನಿರ್ಮೂಲನೆ ಮಾಡಬೇಕೆಂದು ಹೇಳಿಕೆ ನೀಡುವ ಮೂಲಕ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರರೂ ಆಗಿರುವ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಬಿಜೆಪಿ ಸೇರಿದಂತೆ ದೇಶಾದ್ಯಂತ ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ವಿಷಯ ಇನ್ನೂ ಹಸಿರಾಗಿರುವಾಗಲೆ ಇತ್ತ ಅವರ ತಾಯಿ ರಾಜಕೀಯ ಕಿತ್ತಾಟಗಳಿಗೆ ಗಮನ ಕೊಡದೆ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ - ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ.
ಎಂ.ಕೆ. ಸ್ಟಾಲಿನ್ ಪತ್ನಿ ಹಾಗೂ ಉದಯನಿಧಿ ಸ್ಟಾಲಿನ್ ಅವರ ತಾಯಿ ದುರ್ಗಾ ಅವರು ಶುಕ್ರವಾರ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಾತ್ರವಲ್ಲದೆ ತಾಯಿ ಮೂಕಾಂಬಿಕೆಗೆ ಚಿನ್ನದ ಕಿರೀಟವನ್ನೂ ಒಪ್ಪಿಸುವ ಮೂಲಕ ಸನಾತನ ಧರ್ಮದ ಆಚರಣೆ ಮುಂದುವರಿಸಿದರು.
ತಮಿಳುನಾಡಿನ ಸಾಕಷ್ಟು ಮಂದಿಯಂತೆ ದುರ್ಗಾ ಅವರು ಕೂಡ ಕೊಲ್ಲೂರು ಮೂಕಾಂಬಿಕೆಯ ವಿಶೇಷ ಭಕ್ತೆಯಾಗಿದ್ದಾರೆ. ಹೀಗಾಗಿ ಅವರು ತಮ್ಮ ಕೆಲವು ಸ್ನೇಹಿತೆಯರೊಂದಿಗೆ ಕೊಲ್ಲೂರು ದೇವಾಲಯಕ್ಕೆ ಭೇಟಿ ನೀಡಿದ್ದರು. ಅವರನ್ನು ದೇವಾಲಯದ ವತಿಯಿಂದ ಬರ ಮಾಡಿಕೊಂಡು ಗೌರವಿಸಲಾಯಿತು.ಸನಾತನ ಧರ್ಮವು, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ.
ಇದು ಕೊರೋನಾ, ಡೆಂಘೀ, ಮಲೇರಿಯಾಕ್ಕೆ ಸಮನಾದುದು. ಇದನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿ ಉದಯನಿಧಿ ಸ್ಟಾಲಿನ್ ವಿವಾದಕ್ಕೀಡಾಗಿದ್ದರು. ಆದರೆ ಭಿನ್ನ ವಿಚಾರಧಾರೆಯನ್ನು ಹೊಂದಿರುವ ದುರ್ಗಾ, ದಕ್ಷಿಣ ಭಾರತದ ವಿವಿಧ ದೇಗುಲಗಳಿಗೆ ಭೇಟಿ ನೀಡಿ ಕೊಡುಗೆಗಳನ್ನು ನೀಡುತ್ತಿದ್ದಾರೆ. ಅದರಂತೆ ತೀರಾ ಖಾಸಗಿಯಾಗಿ ಕೊಲ್ಲೂರಿಗೆ ಬಂದ ಅವರು ಮೂಕಾಂಬಿಕಾ ದೇವಿಗೆ ಚಿನ್ನದ ಕಿರೀಟವನ್ನೂ ಸಮರ್ಪಿಸಿರುವುದು ಅಚ್ಚರಿ ಮೂಡಿಸಿದೆ.