ಶಾಸಕ ಎ. ಮಂಜು ಕೀಳುಮಟ್ಟದ ರಾಜಕಾರಣಿ

| Published : Aug 19 2025, 01:00 AM IST

ಸಾರಾಂಶ

ಅಭಿವೃದ್ಧಿ ಕುರಿತು ಪ್ರಶ್ನಿಸಿದರೆ ನನ್ನ ವೈಯುಕ್ತಿಕ ಬದುಕಿನ ಕುರಿತು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಶಾಸಕ ಎ. ಮಂಜು ಕೀಳುಮಟ್ಟದ ರಾಜಕೀಯ ಮೆರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ಅಭಿವೃದ್ಧಿ ಕುರಿತು ಪ್ರಶ್ನಿಸಿದರೆ ನನ್ನ ವೈಯುಕ್ತಿಕ ಬದುಕಿನ ಕುರಿತು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಶಾಸಕ ಎ. ಮಂಜು ಕೀಳುಮಟ್ಟದ ರಾಜಕೀಯ ಮೆರೆದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ. ಶ್ರೀಧರ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ರೂಪಿಸಿರುವ ಮಾಸ್ಟರ್ ಪ್ಲಾನ್ 2041 ರಲ್ಲಿ 200 ಎಕರೆ ಪ್ರದೇಶವನ್ನು ಕೈಗಾರಿಕೆ ಪ್ರದೇಶಕ್ಕೆ ಮೀಸಲಿರಿಸುವಂತೆ ಕೋರಿ ನಗರಾಭಿವೃದ್ಧಿ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ಇದನ್ನು ಸಹಿಸದೆ ಶಾಸಕರು ನನ್ನನ್ನೆ ಗುರಿಯಾಗಿಸಿಕೊಂಡು ಸಲ್ಲದ ಆರೋಪ ಮಾಡಿದ್ದರು.

ಇದರ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದ್ದಲ್ಲದೆ ತಾಲೂಕಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶ್ನಿಸಿದ್ದೆ. ಇವರ ವೈಯುಕ್ತಿಕ ಬದುಕಿನ ಕುರಿತು ಮಾತನಾಡಿಲ್ಲ, ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಶ್ನಿಸಿದ್ದಕ್ಕೆ ವಿಚಲಿತಗೊಂಡ ಇವರು ನನ್ನ ವೈಯುಕ್ತಿಕ ಬದುಕಿನ ಕುರಿತು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ನನ್ನ ತೇಜೋವಧೆಗೆ ಪ್ರಯತ್ನಿಸಿರುವುದು ಹಿರಿಯ ರಾಜಕಾರಣಿಯಾದ ಇವರಿಗೆ ಶೋಭೆ ತರುವ ಕಾರ್ಯವಲ್ಲ ಎಂದರು. ಇವರ ವೈಯುಕ್ತಿಕ ಬದುಕಿನ ಕುರಿತು ಸಾಕಷ್ಟು ವಿಚಾರಗಳಿದ್ದು ಅದರ ಬಗ್ಗೆ ನಾನೂ ಕೂಡ ಹೇಳಬಹುದು. ಆದರೆ ನಾನು ಇವರಂತೆ ಕೆಳಮಟ್ಟಕ್ಕೆ ಇಳಿಯಲಾರೆ. ಶಾಸಕರಾದ ಇವರು ಆಡಳಿತ ಪಕ್ಷವಿದ್ದಂತೆ, ಆಡಳಿತ ಪಕ್ಷದವರಾದರೂ ನಾವು ಇಲ್ಲಿ ವಿರೋಧ ಪಕ್ಷವಿದ್ದಂತೆ. ಪ್ರಜಾಪ್ರಭೂತ್ವದ ಕಾವಲುಗಾರನಂತೆ ಕ್ಷೇತ್ರದ ಅಭಿವೃದ್ಧಿ ಕುರಿತು ಪ್ರಶ್ನಿಸುವುದು ನಮ್ಮ ಕರ್ತವ್ಯ. ಇದನ್ನು ಸಹಿಸದೆ ಎದುರಾಳಿಗಳ ವಿರುದ್ಧ ಸಲ್ಲದ ಆರೋಪಗಳನ್ನು ಮಾಡುವ ಮೂಲಕ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ತಮ್ಮನ್ನು ಪ್ರಶ್ನಿಸುವ ಎದುರಾಳಿಗಳನ್ನು ಮಣಿಸಲು ಈ ರೀತಿ ಕೀಳುಮಟ್ಟಕ್ಕೆ ಇಳಿಯುತ್ತಾರೆ, ಅವರ ಬಾಯಿಂದ ಇಂತಹ ಪದಗಳನ್ನು ನಿರೀಕ್ಷಿಸಿರಲಿಲ್ಲ. ಅವರು ನಡೆದುಬಂದ ದಾರಿಯ ಕುರಿತು ಹೇಳಿಕೊಂಡು ತಮ್ಮ ಬದುಕನ್ನು ತಾವೆ ತೆರೆದಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರೇ ಈ ಕುರಿತು ತೀರ್ಮಾನಿಸುತ್ತಾರೆ ಎಂದರು.