ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಸರಗೂರು ಮತ್ತು ಎಚ್.ಡಿ. ಕೋಟೆ ತಾಲೂಕಿನಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದ ಮಹಾತ್ಮಗಾಂಧಿ ಸಭಾಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ,
ಪಟ್ಟಣದಲ್ಲಿನ ಕಾರು ಚಾಲಕರು, ಆಟೋ ಚಾಲಕರ ಸಂಘದ ಸದಸ್ಯರೊಂದಿಗೆ ಮತ್ತೊಂದು ಸಭೆ ಕರೆದು ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಲಾಗುವುದು, ಅಲ್ಲದೇ ಸ್ತಬ್ಧಚಿತ್ರ ನಿರ್ಮಿಸಿ ಭಾಗವಹಿಸಲು ಸಹ ಸೂಚಿಸಲಾಗುವುದು ಎಂದರು.ಸರಗೂರು ಪಟ್ಟಣದಲ್ಲಿ ಬಾಲ್ ಮೈದಾನ ಮತ್ತು ಎಚ್.ಡಿ. ಕೋಟೆ ಪಟ್ಟಣದಲ್ಲಿ ಹಳೇ ಆಸ್ಪತ್ರೆ ಆವರಣದಲ್ಲಿ ರಾಜ್ಯೋತ್ಸವವನ್ನು ಆಚರಿಸಲಾಗುವುದು'''''''''''''''' ಎಂದುತಿಳಿಸಿದರು.
ಕನ್ನಡದಲ್ಲಿ ನಾಮಫಲಕ ಇಲ್ಲದ ಅಂಗಡಿಗಳಿಗೆ ರಾಜ್ಯೋತ್ಸವದಂದು ತೆರಳಿ ಅವರಿಗೆ ನೋಟಿಸ್ ನೀಡಿ ಕನ್ನಡ ನಾಮಫಲಕ ಅಳವಡಿಸುವಂತೆ ಸೂಚಿಸಲಾಗುವುದು ಎಂದರು.ಅಲ್ಲದೇ ರಾಜ್ಯೋತ್ಸವದಂದು ವರ್ತಕರು ತಮ್ಮ ಅಂಗಡಿಗಳಲ್ಲಿ ಕನ್ನಡ ಬಾವುಟಗಳನ್ನು ಹಾರಿಸಬೇಕು, ಜೊತೆಗೆ ಉತ್ತಮವಾಗಿ ಮತ್ತು ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ವರ್ತಕರಿಗೆ ಬಹುಮಾನ ನೀಡಲಾಗುವುದು, ಪ್ರಥಮ ಬಹುಮಾನವಾಗಿ 10 ಸಾವಿರ, ದ್ವಿತೀಯ ಬಹುಮಾನವಾಗಿ 5 ಸಾವಿರ ಹಾಗೂ ತೃತೀಯ ಬಹುಮಾನವಾಗಿ 3 ಸಾವಿರ ಹಣ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಬಾರಿ ವಿಶೇಷವಾಗಿ ರಾಜ್ಯೋತ್ಸವಕ್ಕೆ ಆನೆಯನ್ನು ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ ಸಾಧ್ಯವಾದರೆ ಕರೆತರಲು ಪ್ರಯತ್ನಿಸಲಾಗುವುದು ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ ಮಾತನಾಡಿ, ತಾಲೂಕು ಕೇರಳ ಗಡಿ ಭಾಗದಲ್ಲಿ ಇರುವುದರಿಂದ ಕೇರಳದಿಂದ ಜೀವನೋಪಾಯಕ್ಕೆ ತಾಲೂಕಿನಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರದಿದ್ದು, ನಾಮಫಲಕಗಳನ್ನು ಸಂಪೂರ್ಣವಾಗಿ ಮಲಯಾಳಂನಲ್ಲಿ ಪಟ್ಟಣ ಪ್ರದೇಶಗಳಲ್ಲಿ ಆಂಗ್ಲ ಭಾಷೆಯಲ್ಲಿ ಅಳವಡಿಸಿರುತ್ತಾರೆ, ಅಂತಹ ಅಂಗಡಿಗಳಿಗೆ ತೆರಳಿ ಕನ್ನಡದ ಜಾಗೃತಿ ಮೂಡಿಸುವುದರ ಜೊತೆಗೆ ನಾಮಫಲಕಗಳನ್ನು ಕನ್ನಡಮಯ ಮಾಡಬೇಕು ಎಂದು ಕೋರಿದರು.
ಅಲ್ಲದೇ ರಾಜ್ಯೋತ್ಸವದಂದು ಆಟೋ ಚಾಲಕರು, ಕಾಲು ಚಾಲಕರ ಸಂಘಗಳು ಮತ್ತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಾಡು ನುಡಿಗೆ ಗೌರವ ಸಲ್ಲಿಸುವಂತಹ ಸ್ತಬ್ಧ ಚಿತ್ರಗಳನ್ನು ನಿರ್ಮಿಸಿ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಸೂಚಿಸಲು ತಹಸೀಲ್ದಾರ್ ಅವರಿಗೆ ಮನವಿ ಮಾಡಿದರು.ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ ತಾಲೂಕು ಆಡಳಿತದಿಂದ ಎಲ್ಲ ಇಲಾಖೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಸಂದೇಶ ಸಾರುವ ರೀತಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಅಲ್ಲದೇ ಈ ಬಾರಿ ಐದು ಮಂದಿ ಸಾಧಕರನ್ನು ಗುರುತಿಸಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.ಮೋಹನ್ ಕುಮಾರ್, ಇಓ ಧರಣೇಶ್, ಇನ್ಸ್ಪೆಕ್ಟರ್ ಗಂಗಾಧರ್, ಕಿರಣ್, ವೈ.ಡಿ. ರಾಜಣ್ಣ, ಕೆಂಡಗಣ್ಣೇಗೌಡ, ಸೌಮ್ಯ, ಪ್ರಕಾಶ್, ಅಶೋಕ್, ಮಂಜುನಾಥ್, ನಟಶೇಖರಮೂರ್ತಿ, ಚೌಡಳ್ಳಿ ಜವರಯ್ಯ, ರಮೇಶ್, ಗಣೇಶ್ ಇದ್ದರು.