ವಿವಿಧ ಕಾಮಗಾರಿಗೆ ಶಾಸಕಿ ಭೂಮಿಪೂಜೆ

| Published : Jul 19 2025, 01:00 AM IST

ವಿವಿಧ ಕಾಮಗಾರಿಗೆ ಶಾಸಕಿ ಭೂಮಿಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕಿ ಈ. ಅನ್ನಪೂರ್ಣಾ ತುಕಾರಾಂ ಸಂಡೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರಲ್ಲದೆ, ಕೆಲ ಕಾಮಗಾರಿ ಉದ್ಘಾಟಿಸಿದರು. ಈ ವೇಳೆ ರೈತರ ಮನವಿಗೆ ಸ್ಪಂದಿಸಿದರು.

ಸಂಡೂರು: ಶಾಸಕಿ ಈ. ಅನ್ನಪೂರ್ಣಾ ತುಕಾರಾಂ ಗುರುವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರಲ್ಲದೆ, ಕೆಲ ಕಾಮಗಾರಿ ಉದ್ಘಾಟಿಸಿದರು.

ಉದ್ಘಾಟನೆಯಾದ ಕಾಮಗಾರಿ ವಿವರ: ಹೊಸ ದರೋಜಿ ಗ್ರಾಮದ ಎಪಿಎಂಸಿ ಮಾರುಕಟ್ಟೆಯಲ್ಲಿ ಡಿಎಂಎಫ್ ಅನುದಾನ ₹೩೫ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸಿಸಿ ರಸ್ತೆ, ₹ 1ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸ.ಹಿ. ಪ್ರಾಥಮಿಕ ಶಾಲೆಯ 4 ಹಾಗೂ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೩ ಕೊಠಡಿ ಹಾಗೂ ಭುಜಂಗನಗರದಲ್ಲಿ ಕೆಕೆಆರ್‌ಡಿಬಿ ಅನುದಾನ ₹೧೯ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡ.

ಭೂಮಿಪೂಜೆ ನೆರವೇರಿಸಲಾದ ಕಾಮಗಾರಿಗಳ ವಿವರ: ಹೊಸ ದರೋಜಿ ಗ್ರಾಮದ ಅಯ್ಯಪ್ಪಸ್ವಾಮಿ ವಾರ್ಡಿನಲ್ಲಿ ಎಸ್‌ಸಿಪಿ ಯೋಜನೆ ಅಡಿಯಲ್ಲಿ ₹೭೫ ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ, ಹಳೆ ದರೋಜಿ ಗ್ರಾಮದಲ್ಲಿ ಕೆಪಿಟಿಸಿಎಲ್ ಸಿಎಸ್‌ಆರ್ ಯೋಜನೆಯಡಿ ₹೪೦ ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣ, ಕೆಕೆಆರ್‌ಡಿಬಿ ಅನುದಾನ ₹೪೯.೫೦ ಲಕ್ಷ ವೆಚ್ಚದಲ್ಲಿ ಸ.ಹಿ. ಪ್ರಾಥಮಿಕ ಶಾಲೆಯಲ್ಲಿ ೩ ಕೊಠಡಿಗಳ ನಿರ್ಮಾಣ, ₹೭೫ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ, ವಡ್ಡು ಗ್ರಾಮದಲ್ಲಿ ಕೆಕೆಆರ್‌ಡಿಬಿ ಅನುದಾನ ₹೫೦ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ, ತಾರಾನಗರ ಗ್ರಾಮದ ಆಶ್ರಯ ಸ.ಹಿ.ಪ್ರಾ. ಶಾಲೆಯಲ್ಲಿ ಕೆಕೆಆರ್‌ಡಿಬಿ ಯೋಜನೆ ಅನುದಾನ ₹೩೩ ಲಕ್ಷ ವೆಚ್ಚದಲ್ಲಿ ಎರಡು ಕೊಠಡಿಗಳ ನಿರ್ಮಾಣ ಹಾಗೂ ಕೆಕೆಆರ್‌ಡಿಬಿ ಅನುದಾನ ₹೩೩ ಲಕ್ಷ ವೆಚ್ಚದಲ್ಲಿ ಭುಜಂಗನಗರ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ ೨ ಕೊಠಡಿಗಳ ನಿರ್ಮಾಣ.

ಯೂರಿಯಾ ಗೊಬ್ಬರದ ಕೊರತೆ: ಹೊಸ ದರೋಜಿ ಗ್ರಾಮದ ರೈತರು ಗ್ರಾಮದಲ್ಲಿ ಯೂರಿಯಾ ಗೊಬ್ಬರದ ಕೊರತೆ ಇದೆ. ಅಲ್ಲದೆ ಯೂರಿಯಾ ಗೊಬ್ಬರದ ಜತೆಗೆ ಪೊಟಾಷ್ ಗೊಬ್ಬರವನ್ನೂ ತೆಗೆದುಕೊಳ್ಳಲು ಒತ್ತಾಯಿಸಲಾಗುತ್ತಿದೆ. ಯೂರಿಯಾ ಗೊಬ್ಬರದ ಪೂರೈಕೆಗೆ ಹಾಗೂ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು ಕ್ರಮಕೈಗೊಳ್ಳುವಂತೆ ಶಾಸಕರಲ್ಲಿ ಮನವಿ ಮಾಡಿದರು.

ರೈತರ ಬೇಡಿಕೆಗೆ ಪ್ರತಿಕ್ರಿಯಿಸಿದ ಶಾಸಕರು, ಯೂರಿಯಾ ಗೊಬ್ಬರದ ಕೊರತೆ ಕುರಿತು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ರೈಲ್ವೆ ಇಲಾಖೆಯಲ್ಲಿನ ತಾಂತ್ರಿಕ ಸಮಸ್ಯೆಯಿಂದ ಸ್ವಲ್ಪ ಸಮಸ್ಯೆಯಾಗಿದೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಯೂರಿಯಾ ಸಮಸ್ಯೆಯನ್ನು ಶೀಘ್ರ ಬಗೆಹರಿಸಲು ನಾನು ಮತ್ತು ಸಂಸದರು ಕ್ರಮಕೈಗೊಳ್ಳುವೆವು ಎಂದು ಭರವಸೆ ನೀಡಿದರು.

ಶಿಕ್ಷಕರ ಕೊರತೆ ಶಾಸಕರು ಪ್ರತಿಕ್ರಿಯಿಸಿ, ಈಗಾಗಲೇ ಸರ್ಕಾರದ ಅನುಮತಿ ಮತ್ತು ಸಿಎಸ್‌ಆರ್ ಅಡಿಯಲ್ಲಿ ಹಲವು ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಇತ್ತೀಚೆಗೆ ನಡೆದ ಸಭೆಯಲ್ಲೂ ಈ ಸಮಸ್ಯೆ ಕುರಿತು ಗಂಭೀರವಾಗಿ ಚರ್ಚಿಸಿದ್ದೇವೆ. ಅಧಿವೇಶನದಲ್ಲಿಯೂ ಶಿಕ್ಷಕರ ಕೊರತೆಯ ಕುರಿತು ಸರ್ಕಾರದ ಗಮನ ಸೆಳೆದು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವೆ ಎಂದರು.

ದರೋಜಿ ಗ್ರಾಪಂ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಗೌರಮ್ಮ, ವಡ್ಡು ಗ್ರಾಪಂ ಅಧ್ಯಕ್ಷೆ ನಿಂಗಮ್ಮ, ಉಪಾಧ್ಯಕ್ಷೆ ಪಾರ್ವತಿ, ಸದಸ್ಯರು, ತಾಪಂ ಇಒ ಮಡಗಿನ ಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಜಿಪಂ ಎಂಜಿನಿಯರಿಂಗ್ ವಿಭಾಗದ ಎಇಇ ಪ್ರಕಾಶ ನಾಯ್ಕ, ಮುಖಂಡರಾದ ಜನಾರ್ದನ, ಮಾರೆಪ್ಪ ಮುಂತಾದವರಿದ್ದರು.