ತೀರ್ಥಹಳ್ಳಿ ತಾಲೂಕು ತೂದೂರು ಗ್ರಾಪಂ ವ್ಯಾಪ್ತಿಯ ಮುಂಡಳ್ಳಿ ಮರಳು ಕ್ವಾರಿಗೆ ಸೋಮವಾರ ದಿಡೀರ್ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ ಮರಳು ಸ್ಟಾಕ್‍ಯಾರ್ಡಿನಲ್ಲಿ ಯಾವುದೇ ದಾಖಲೆಗಳು ಕ್ರಮವಾಗಿಲ್ಲದಿರುವುದನ್ನು ಗಮನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ತೀರ್ಥಹಳ್ಳಿ ತಾಲೂಕು ತೂದೂರು ಗ್ರಾಪಂ ವ್ಯಾಪ್ತಿಯ ಮುಂಡಳ್ಳಿ ಮರಳು ಕ್ವಾರಿಗೆ ಸೋಮವಾರ ದಿಡೀರ್ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ ಮರಳು ಸ್ಟಾಕ್‍ಯಾರ್ಡಿನಲ್ಲಿ ಯಾವುದೇ ದಾಖಲೆಗಳು ಕ್ರಮವಾಗಿಲ್ಲದಿರುವುದನ್ನು ಗಮನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರು. ಆದಾಯ ತರುವ ತಾಲೂಕಿನ ದಬ್ಬಣಗದ್ದೆ ಮತ್ತು ಮುಂಡಳ್ಳಿ ಮರಳು ಕ್ವಾರಿಯಿಂದ ಪರ್ಮಿಟ್ ಇಲ್ಲದೇ ನೂರಾರು ಲೋಡು ಅಕ್ರಮ ಮರಳು ಸಾಗಣೆಯಾಗಿದ್ದು, ಇದಕ್ಕೆ ಬೆಂಬಲವಾಗಿ ನಿಂತ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕು. ಮೇ 6 ರಂದು ಒಂದೇ ದಿನ ದಬ್ಬಣಗದ್ದೆ ಕ್ವಾರಿಯಿಂದ 200 ಲೋಡು ಮರಳು ಅಕ್ರಮವಾಗಿ ಸಾಗಿಸಲಾಗಿದೆ. ಈ ವಿಚಾರದಲ್ಲಿ ಜಿಲ್ಲಾಡಳಿತ ಸತ್ತು ಮಲಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ದ ಕೆಂಡಾಮಂಡಲವಾದ ಆರಗ ಜ್ಞಾನೇಂದ್ರ, ಅಕ್ರಮ ಮರಳು ಸಾಗಾಣಿಕೆಗೆ ಬೆಂಬಲವಾಗಿ ನಿಂತಿರುವ ನಿಮ್ಮಂಥವರ ವಿರುದ್ದವೇ ಕ್ರಮ ಜರುಗಿಸಬೇಕಿದೆ. ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಲಾಗದ ನಿಮ್ಮ ಸೇವೆಯ ಅಗತ್ಯವಿಲ್ಲ. ನೀವು ಇಲ್ಲಿಂದ ಹೊರಟು ಹೋಗೋದೇ ಸೂಕ್ತ ಎಂದು ಗದರಿದರು.ಮುಂಡಳ್ಳಿ ಕ್ವಾರಿಯಿಂದ ಸಾಗಿಸುತ್ತಿರುವ ಮರಳಿಗೆ ಜಿಎಸ್‍ಟಿ ಕೂಡ ಪಾವತಿಸಿಲ್ಲ. ಈ ಬಗ್ಗೆ ಗುತ್ತಿಗೆದಾರರ ಕಡೆಯಿಂದ ಸರಿಯಾದ ಮಾಹಿತಿಯೂ ಇಲ್ಲ. ಮರಳು ಲೂಟಿ ಹೊಡೆಯುವುದರಲ್ಲಿ ತಾಲೂಕಿನ ತಹಸೀಲ್ದಾರ್, ಜಿಲ್ಲೆಯ ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ಪೊಲೀಸರು ಶಾಮೀಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ರಾಜ್ಯ ಭೂ ಮತ್ತು ಗಣಿ ಇಲಾಖೆ ಹಿರಿಯ ನಿರ್ದೆಶಕರಿಗೆ ದೂರವಾಣಿಯ ಮೂಲಕ ಒತ್ತಾಯಿಸಿದರು.
ಹರಾಜಿನಲ್ಲಿ ಅಲಾಟ್ ಆದ ನಿಯಮದಂತೆ ಸೂಕ್ತ ಸಮಯದಲ್ಲಿ ಮರಳು ಸಾಗಿಸದಿದ್ದಲ್ಲಿ ಅದಕ್ಕೆ ಸಂಬಂಧಿಸಿ ಸರ್ಕಾರಕ್ಕೆ ದಂಡ ಕಟ್ಟಬೇಕು. ದಬ್ಬಣಗದ್ದೆ ಮರಳು ಕ್ವಾರಿಯಲ್ಲಿ ಕಳೆದ ವರ್ಷ ಅಲಾಟ್ ಆಗಿದ್ದ 28000 ಟನ್ ಬದಲಿಗೆ ಕೇವಲ 57 ಸಾವಿರ ಟನ್ ಮರಳು ಮಾತ್ರ ಸಾಗಿಸಲಾಗಿದೆ. ಈ ಬಗ್ಗೆ ಗುತ್ತಿಗೆದಾರರಿಗೆ 1.08 ಕೋಟಿ ರು. ಪೆನಾಲ್ಟಿ ಹಾಕಿದ್ದು, ಈ ಹಣ ಈವರೆಗೆ ಪಾವತಿಯಾಗಿಲ್ಲ. ಈ ಗುತ್ತಿಗೆದಾರರನ್ನು ಬ್ಲಾಕ್ ಲೀಸ್ಟಿಗೆ ಸೇರಿಸುವ ಬದಲಿಗೆ ಯಾಕೆ ಅವಕಾಶ ನೀಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.ಈ ಬಗ್ಗೆ ಸಮಜಾಯಿಷಿ ಹೇಳಲು ಬಂದ ಗುತ್ತಿಗೆದಾರರ ಕಡೆಯವರಿಗೆ ನಿಯಮದಂತೆ ನಿರ್ವಹಣೆ ಮಾಡಲು ಅಸಾಧ್ಯವಾದಲ್ಲಿ ಲೀಸ್ ಸರಂಡರ್ ಮಾಡಿ ಎಂದರಲ್ಲದೇ ನಿಯಮಬಾಹಿರವಾಗಿ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಇದರ ಹಿಂದೆ ಕೆಲ ರಾಜಕಾರಣಿಗಳ ಕುತಂತ್ರ ಇದ್ದು, ಅವರ ಮುಖವಾಡ ಕಳಚಬೇಕಿದೆ ಎಂದು ಹೇಳಿದರು.
ಹಣ ಕಟ್ಟಿದ ಬಗ್ಗೆ ನೀಡುವ ರಶೀದಿಯಲ್ಲಿ ಜಿಎಸ್‍ಟಿ ತೆರಿಗೆ ಕಾಲಂ ಖಾಲಿ ಇರುವ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ ಜ್ಞಾನೇಂದ್ರ, ಸರ್ಕಾರಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡುವ ಉದ್ದೇಶದಿಂದಲೇ ಅಧಿಕಾರಿಗಳು ಇಲ್ಲದ ನೆವ ಹೇಳುತ್ತಿದ್ದೀರಿ. ಸ್ಟಾಕ್‍ಯಾರ್ಡಿನಲ್ಲಿ ಕ್ರಮಬದ್ದವಾಗಿ ಸಿಸಿಟಿವಿ ಇಲ್ಲ. ಅಧಿಕಾರಿಗಳು ಕೂರುತ್ತಿಲ್ಲ. ವ್ಯವಸ್ಥಿತವಾಗಿ ಈ ದಂಧೆ ನಡೆಯುತ್ತಿದೆ. ಇದನ್ನು ನೋಡಿ ಕಣ್ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರವೀಣ್, ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಬೇಗುವಳ್ಳಿ ಸತೀಶ್, ಕವಿರಾಜ್ ಬೇಗುವಳ್ಳಿ, ಮಧುರಾಜ್ ಹೆಗ್ಡೆ ಇದ್ದರು.
------ತೀರ್ಥಹಳ್ಳಿ ತಾಲೂಕಿನ ಮುಂಡಳ್ಳಿ ಮರಳು ಕ್ವಾರಿಯಿಂದ ನಿಯಮವನ್ನು ಉಲ್ಲಂಘಿಸಿ ಮರಳು ಸಾಗಿಸಲಾಗುತ್ತಿದೆ ಎಂಬ ಆರೋಪದ ಮೇಲೆ ಶಾಸಕ ಆರಗ ಜ್ಞಾನೇಂದ್ರ ಸೋಮವಾರ ದಿಡೀರ್ ದಾಳಿ ನಡೆಸಿ ನದಿ ದಂಡೆಯಲ್ಲಿ ಗಡಿ ಪ್ರದೇಶದ ಬಗ್ಗೆ ಪರಿಶೀಲನೆ ನಡೆಸಿದರು.