ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಈಗಾಗಲೇ ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ್ದಾರೆ, ಯಾರು ಏನೇ ಮಾತನಾಡಬೇಕಾದರೂ ತಿಳಿದು ಮಾತನಾಡುವುದು ಸೂಕ್ತ ಎಂದು ಮಾಜಿ ಶಾಸಕ ಎನ್. ಮಹೇಶ್ ಅವರ ಹೆಸರೇಳದೆ ಟಾಂಗ್ ನೀಡಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪೊಲೀಸ್ ಇಲಾಖೆ ಹಾಗೂ ಮಧುಮಗನಿಗೆ ಹಲ್ಲೆ ಪ್ರಕರಣದಲ್ಲಿ ಯಾರೇ ಮಾತನಾಡಿದರೂ ಸಹ ತಿಳಿದು ಮಾತನಾಡುವುದು ಸೂಕ್ತ ಎಂದು ಮಾಜಿ ಸಚಿವ ಎನ್. ಮಹೇಶ್ ಅವರಿಗೆ ಶಾಸಕ ಎ. ಆರ್. ಕೃಷ್ಣಮೂರ್ತಿ ಟಾಂಗ್ ನೀಡಿದರು.ತಾಲೂಕಿನ ಕುಣಗಳ್ಳಿಯಲ್ಲಿ ಜ.30ರಂದು ಚಾಕುವಿನಿಂದ ಇರಿತಕ್ಕೊಳಗಾಗಿ ಚೇತರಿಸಿಕೊಳ್ಳುತ್ತಿರುವ ರವೀಶ್ ಮನೆಗೆ ಶಾಸಕ ಎ .ಆರ್. ಕೃಷ್ಣಮೂರ್ತಿ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು. ಇದೇ ವೇಳೆ ಕುಟುಂಬಸ್ಥರಲ್ಲೂ ಶಾಸಕರು ಈ ಕುರಿತು ಚರ್ಚಿಸಿ ನ್ಯಾಯ ಕಲ್ಪಿಸುವ ಭರವಸೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಈಗಾಗಲೇ ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ್ದಾರೆ, ಯಾರು ಏನೇ ಮಾತನಾಡಬೇಕಾದರೂ ತಿಳಿದು ಮಾತನಾಡುವುದು ಸೂಕ್ತ ಎಂದು ಮಾಜಿ ಶಾಸಕ ಎನ್. ಮಹೇಶ್ ಅವರ ಹೆಸರೇಳದೆ ಟಾಂಗ್ ನೀಡಿದರು.ಚಾಕು ಇರಿತ ಪ್ರಕರಣ ನಡೆಯಬಾರದಿತ್ತು, ಅದೃಷ್ಟವಶಾತ್ ಮಧುಮಗ ಪ್ರಾಣಾಪಾಯದಿಂದ ಪಾರಾಗಿರುವುದು ಸಂತಸದ ವಿಚಾರ. ಈ ಪ್ರಕರಣದಲ್ಲಿ ಪೊಲೀಸರು ಗೌರವಯುತವಾಗಿ ಕೆಲಸ ಮಾಡುತ್ತಾರೆ, ಒಬ್ಬ ಪೇದೆಯಿಂದ ಹಿಡಿದು ಅಧಿಕಾರಿ ತನಕ ಅವರು ಹಗಲು, ರಾತ್ರಿ ಎನ್ನದೆ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ. ಪೊಲೀಸರ ಸೇವೆ, ರಜೆ ನೀಡುವ ಕುರಿತು ವಿಧಾನಸಭೆಯಲ್ಲಿ ವಿಚಾರ ಪ್ರಸ್ತಾಪಿಸಿ, ಅವರಿಗೂ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು, ಇದಕ್ಕೆ ಹಿರಿಯ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದರು.ಈ ವೇಳೆ ಯಳಂದೂರು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಭು ಪ್ರಸಾದ್, ಕೊಳ್ಳೇಗಾಲ ಗ್ಯಾರಂಟಿ ಸಮಿತಿ ಸದಸ್ಯ ಶ್ರೀನಿವಾಸ್ ಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ರಮೇಶ್, ಮಾಜಿ ಸದಸ್ಯರುಗಳಾದ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕುಣಗಳ್ಳಿ ಮಾಜಿ ಗ್ರಾಪಂ ಸದಸ್ಯ ಚಂದ್ರಶೇಖರ್, ಯಜಮಾನರಾದ ನಂಜುಂಡಸ್ವಾಮಿ, ಕುಮಾರ, ಹೊಂಗನೂರು ಚೇತನ್ ಇನ್ನಿತರಿದ್ದರು.