ಹಾಸನಾಂಬೆಯ ದರ್ಶನ ಪಡೆದ ಶಾಸಕ ಅರವಿಂದ್ ಬೆಲ್ಲದ್

| Published : Oct 12 2025, 01:00 AM IST

ಸಾರಾಂಶ

ಶಾಸಕ ಅರವಿಂದ್ ಬೆಲ್ಲದ್ ಅವರು ಶನಿವಾರ ತಮ್ಮ ಕುಟುಂಬ ಸಮೇತರಾಗಿ ಶ್ರೀ ಹಾಸನಾಂಬ ದೇವಿಯ ದರ್ಶನ ಪಡೆದರು. ದರ್ಶನದ ಬಳಿಕ ಮಾತನಾಡಿದ ಅವರು, ಹಾಸನಾಂಬೆಯ ಜಾತ್ರಾ ಉತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಬಾರಿ ಜಿಲ್ಲಾಡಳಿತ ವಿವೇಕದಿಂದ ಕಾರ್ಯನಿರ್ವಹಿಸಿ, ವಿವಿಐಪಿಗಳಿಗೆ ಸರ್ಕಾರಿ ವಾಹನ ವ್ಯವಸ್ಥೆ ಮಾಡಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು. ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇವಿಯ ದರ್ಶನ ಪಡೆದು ನಾವು ಪುನೀತರಾಗಿದ್ದೇವೆ ಎಂದು ಅವರು ಭಕ್ತಿಭಾವದಿಂದ ಹೇಳಿದರು.

ಹಾಸನ: ಶಾಸಕ ಅರವಿಂದ್ ಬೆಲ್ಲದ್ ಅವರು ಶನಿವಾರ ತಮ್ಮ ಕುಟುಂಬ ಸಮೇತರಾಗಿ ಶ್ರೀ ಹಾಸನಾಂಬ ದೇವಿಯ ದರ್ಶನ ಪಡೆದರು. ದರ್ಶನದ ಬಳಿಕ ಮಾತನಾಡಿದ ಅವರು, ಹಾಸನಾಂಬೆಯ ಜಾತ್ರಾ ಉತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ವೇಳೆ ಮಾಧ್ಯಮದೊಂದಿಗೆ ಶಾಸಕರು ಮಾತನಾಡಿ, ಹಾಸನಾಂಬೆಯ ಉತ್ಸವ ಅತ್ಯಂತ ಸಾಂಸ್ಕೃತಿಕವಾಗಿ, ಶ್ರದ್ಧಾ ಭಕ್ತಿಯೊಂದಿಗೆ ನಡೆಯುತ್ತಿದೆ. ಜಿಲ್ಲಾಡಳಿತವು ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಿದೆ ಎಂದು ಹೇಳಿದರು. ವಿವಿಐಪಿಗಳು ಎಲ್ಲರೂ ತಮ್ಮ ವಾಹನಗಳಲ್ಲಿ ದೇವಾಲಯದ ಮುಂದೆ ಬರುವುದರಿಂದ ವಾಹನ ದಟ್ಟಣೆ ಉಂಟಾಗುತ್ತಿತ್ತು. ಈ ಬಾರಿ ಜಿಲ್ಲಾಡಳಿತ ವಿವೇಕದಿಂದ ಕಾರ್ಯನಿರ್ವಹಿಸಿ, ವಿವಿಐಪಿಗಳಿಗೆ ಸರ್ಕಾರಿ ವಾಹನ ವ್ಯವಸ್ಥೆ ಮಾಡಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು. ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇವಿಯ ದರ್ಶನ ಪಡೆದು ನಾವು ಪುನೀತರಾಗಿದ್ದೇವೆ ಎಂದು ಅವರು ಭಕ್ತಿಭಾವದಿಂದ ಹೇಳಿದರು.ಈ ಬಾರಿ ರಾಜ್ಯಾದ್ಯಂತ ವ್ಯಾಪಕ ಮಳೆ ಆಗಿದೆ. ಹಲವು ಜಿಲ್ಲೆಗಳಲ್ಲಿ ಬೆಳೆಹಾನಿ ಸಂಭವಿಸಿದೆ. ನಮ್ಮ ಭಾಗದಲ್ಲಿಯೂ ತೂಗರಿ ಹಾಗೂ ಇತರೆ ಬೆಳೆಗಳಿಗೆ ಹಾನಿಯಾಗಿದೆ. ರಸ್ತೆ ಹಾನಿಯೂ ಕೂಡ ತೀವ್ರವಾಗಿದೆ ಎಂದು ಅವರು ವಿವರಿಸಿದರು. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ರೈತರಿಗೆ ಸೂಕ್ತ ಪರಿಹಾರ ನೀಡಬೇಕಾದ ಕೆಲಸ ಇನ್ನೂ ಆಗಿಲ್ಲ. ಆಯಾ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕೂಡ ಈ ಸಮಸ್ಯೆಯನ್ನು ಸರಿಯಾಗಿ ಸರ್ಕಾರದ ಗಮನಕ್ಕೆ ತರುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ ಕಳೆದ ಎರಡೂವರೆ ವರ್ಷಗಳಿಂದ ಅಲ್ಪ ಪ್ರಮಾಣದ ಅನುದಾನ ಹೊರತುಪಡಿಸಿ ದೊಡ್ಡ ಮಟ್ಟದ ಅನುದಾನ ನೀಡುತ್ತಿಲ್ಲ. ಇತ್ತೀಚೆಗೆ ಸರ್ಕಾರ ಇಪ್ಪತ್ತೈದು ಕೋಟಿ ಘೋಷಣೆ ಮಾಡಿದೆ, ಆದರೆ ಅದರ ನಿಜವಾದ ಪ್ರಯೋಜನ ಬರುವ ಹೊತ್ತಿಗೆ ಚುನಾವಣೆಯ ಸಮಯ ಬರುತ್ತದೆ ಎಂದು ಶಾಸಕ ಅರವಿಂದ್ ಬೆಲ್ಲದ್ ವ್ಯಂಗ್ಯವಾಡಿದರು.