ಚನ್ನರಾಯಪಟ್ಟಣದಲ್ಲಿ ನ್ಯಾಯಾಲಯಗಳ ಸಂಕೀರ್ಣದ ಕಾಮಗಾರಿ ಪರಿಶೀಲನೆ ನಡೆಸಿದ ಶಾಸಕ ಬಾಲಕೃಷ್ಣ

| Published : Oct 13 2024, 01:09 AM IST

ಚನ್ನರಾಯಪಟ್ಟಣದಲ್ಲಿ ನ್ಯಾಯಾಲಯಗಳ ಸಂಕೀರ್ಣದ ಕಾಮಗಾರಿ ಪರಿಶೀಲನೆ ನಡೆಸಿದ ಶಾಸಕ ಬಾಲಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ನೂತನವಾಗಿ ನಿರ್ಮಾಣವಾಗುತ್ತಿರುವ ನ್ಯಾಯಾಲಯಗಳ ಸಂಕೀರ್ಣದ ಕಾಮಗಾರಿಯು ೨೦೨೫ರ ಫೆಬ್ರವರಿಯೊಳಗೆ ಮುಗಿದು, ನ್ಯಾಯಾಧೀಶರು, ವಕೀಲರು ಹಾಗೂ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು. ಚನ್ನರಾಯಪಟ್ಟಣದಲ್ಲಿ ಕಾಮಗಾರಿಗೆ ಪುನಃ ಚಾಲನೆ ನೀಡಿ ಅಧಿಕಾರಿಗಳೊಂದಿಗೆ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಿದರು.

ಕಟ್ಟಡದ ಗುಣಮಟ್ಟ ವೀಕ್ಷಿಸಿದ ಶಾಸಕ । ₹10 ಕೋಟಿ ವೆಚ್ಚ

ಚನ್ನರಾಯಪಟ್ಟಣ: ಸುಮಾರು ೧೦ ಕೋಟಿ ರು. ವೆಚ್ಚದಲ್ಲಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ನ್ಯಾಯಾಲಯಗಳ ಸಂಕೀರ್ಣದ ಕಾಮಗಾರಿಯು ೨೦೨೫ರ ಫೆಬ್ರವರಿಯೊಳಗೆ ಮುಗಿದು, ನ್ಯಾಯಾಧೀಶರು, ವಕೀಲರು ಹಾಗೂ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಪಟ್ಟಣದ ಹಳೆ ನ್ಯಾಯಾಲಯಗಳ ಸಂಕೀರ್ಣದ ಸ್ಥಗಿತಗೊಂಡಿದ್ದ ಕಾಮಗಾರಿಗೆ ಪುನಃ ಚಾಲನೆ ನೀಡಿ ಅಧಿಕಾರಿಗಳೊಂದಿಗೆ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಶೇ.೭೦ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಶೇ.೩೦ರಷ್ಟು ಬಾಕಿ ಉಳಿದಿದ್ದು, ಕಾರಣಾಂತರದಿಂದ ವಿಳಂಬವಾಗಿತ್ತು. ಆದರೆ ಈಗ ನ್ಯಾಯಾಲಯಗಳ ಕಲಾಪಕ್ಕೆ ತೊಂದರೆಯಾಗುತ್ತಿರುವ ಕಾರಣ ೨-೩ ಬಾರಿ ವೀಕ್ಷಣೆ ಮಾಡಿ ಬೇಗ ಮುಗಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.

ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ನ್ಯಾಯಾಲಯಗಳ ಸಂಕೀರ್ಣದಲ್ಲಿ ಕಕ್ಷಿದಾರರು ಹಾಗೂ ವಕೀಲರ ವಾಹನ ನಿಲುಗಡೆಗೂ ಸ್ಥಳಾವಕಾಶ ಕಲ್ಪಿಸಲಾಗುವುದು, ಈ ಪ್ರಸಕ್ತ ನಿರ್ಮಾಣವಾಗುತ್ತಿರುವ ೧೦ ಕೋಟಿ ರು. ವೆಚ್ಚದ ನ್ಯಾಯಾಲಯ ಸಂಕೀರ್ಣವಲ್ಲದೇ ಮೇಲಂತಸ್ತಿನಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ೮ ಕೋಟಿ ರು.ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಮುಖ್ಯ ಕಾರ್ಯದರ್ಶಿಯವರ ಹಂತದಲ್ಲಿ ಅನುಮೋದನೆಗೆ ಕ್ರಮ ಕೈಗೊಳ್ಳಲಾಗುವುದು. ಪಟ್ಟಣದಲ್ಲಿನ ವಿವಿಧ ಕೋರ್ಟ್‌ಗಳಲ್ಲಿ ೧೩.೫೦೦ ಪ್ರಕರಣಗಳು ಬಾಕಿ ಇರುವ ಬಗ್ಗೆ ಮಾಹಿತಿ ದೊರೆತಿದ್ದು ಹೆಚ್ಚುವರಿ ನ್ಯಾಯಾಲಯ ಸ್ಥಾಪಿತವಾದರೆ ಪೂರ್ಣ ಪ್ರಮಾಣದ ನ್ಯಾಯಾಂಗ ವ್ಯವಸ್ಥೆಗೆ ಸುಲಲಿತವಾದ ರಚನಾತ್ಮಕವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ನ್ಯಾಯಾಂಗ ಇಲಾಖೆ ಅನುಮತಿ ನೀಡಿದರೆ ಪುರಸಭಾ ವತಿಯಿಂದ ಪ್ರತ್ಯೇಕವಾಗಿ ನ್ಯಾಯಾಲಗಳ ಸಂಕೀರ್ಣದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುವುದೆಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುಂದರ್‌ರಾಜ್, ಉಪಾಧ್ಯಕ್ಷ ಎ. ಡಿ. ಕುಮಾರ್, ಕಾರ್ಯದರ್ಶಿ ಬಸವರಾಜ್, ಖಜಾಂಚಿ ಮಂಜೇಶ್, ಹಿರಿಯ ವಕೀಲ ಬೋರೇಗೌಡ, ನಿಂಗರಾಜು, ಎಇಇ ರುಕ್ಮಿಣಿ, ಗುತ್ತಿಗೆದಾರ ಸೋಮಶೇಖರ್, ನ್ಯಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು.