ಸಾರಾಂಶ
ಮಾಗಡಿ: ಶಾಸಕ ಎಚ್.ಸಿ.ಬಾಲಕೃಷ್ಣ ಭವಿಷ್ಯದ ನಾಯಕ ಆಗ್ತಾರೆ, ಇದನ್ನ ನಾನು ಹೇಳುತ್ತಿಲ್ಲ, ತಾಯಿ ಮುಳ್ಳುಕಟ್ಟಮ್ಮ ಹೇಳಿಸಿದ್ದಾಳೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ತಾಲೂಕಿನ ತಿಪ್ಪಸಂದ್ರ ಹೋಬಳಿಯ ಹೆಬ್ಬಳಲು ಗ್ರಾಮದ ಶ್ರೀ ಮುಳ್ಕಟ್ಟಮ್ಮದೇವಿ ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರೋಕ್ಷವಾಗಿ ಬಾಲಕೃಷ್ಣಗೆ ಸಚಿವ ಸ್ಥಾನ ಕೊಡುವ ಬಗ್ಗೆ ಸುಳಿವು ನೀಡಿದರು. ಹಿಂದೆ ಸಿದ್ದಗಂಗಾ ಮಠದಲ್ಲಿ ಬಿ.ವೈ.ವಿಜಯೇಂದ್ರ ಭವಿಷ್ಯದ ನಾಯಕ ಆಗ್ತಾರೆ ಅಂತ ಹೇಳಿದ್ದೆ, ಈಗ ಅವರು ಬಿಜೆಪಿ ರಾಜ್ಯಾಧ್ಯಕ್ಷ ಆಗಿದ್ದಾರೆ. ಹಾಗೆಯೇ ಎಚ್.ಸಿ.ಬಾಲಕೃಷ್ಣ ಕೂಡಾ ಭವಿಷ್ಯದ ನಾಯಕರಾಗ್ತಾರೆ. ಮುಂದೆ ಅವರಿಗೆ ಒಳ್ಳೆಯದಾಗುತ್ತೆ. ನಾನು ಅವರ ಜೊತೆ ಇದ್ದೇನೆ ಅವರು ನನ್ನ ಜೊತೆ ಇದ್ದಾರೆ ಎಂದು ಹೇಳಿದರು.1993ರಲ್ಲಿ ರೇಷ್ಮೆ ಖಾತೆ ಸಚಿವರಾಗಿದ್ದಾಗ ನಾನು ಮಾಗಡಿಗೆ ಭೇಟಿ ಕೊಟ್ಟು ನೂರಾರು ಕೋಟಿ ಅನುದಾನವನ್ನು ರೇಷ್ಮೆ ಇಲಾಖೆಗೆ ನೀಡಿದ್ದೆ. ಎಚ್.ಎಂ.ರೇವಣ್ಣ ಆಗ ಶಾಸಕರಾಗಿದ್ದರು. ವರ್ಲ್ವ್ ಬ್ಯಾಂಕ್ ನಿಂದ ನಮಗೆ ಸಾಲ ಸಿಗುತ್ತಿತ್ತು. ಸರ್ಕಾರ ಬಡವರ ಪರವಾಗಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದು ಗ್ರಾಮೀಣ ಭಾಗದಲ್ಲಿ ಕೂಲಿ ಸಿಗದ ಮಹಿಳೆಯರಿಗಾಗಿ ಪ್ರತಿ ತಿಂಗಳು ₹ 2 ಸಾವಿರ ಹಣ ನೀಡಲಾಗುತ್ತಿದ್ದು ಇದನ್ನು ವಿರೋಧ ಪಕ್ಷದವರು ಟೀಕಿಸುತ್ತಾರೆ. ಬಡವರಿಗೆ ಹಣ ನೀಡುತ್ತಿರುವ ಆತ್ಮತೃಪ್ತಿ ನಮಗಿದೆ ಎಂದು ಹೇಳಿದರು.
ಮುಳ್ಕಟ್ಟಮ್ಮ ತಾಯಿ ನಮ್ಮ ಮನೆದೇವರಾಗಿದ್ದು ನಾನು ಚಿಕ್ಕ ವಯಸ್ಸಿನಿಂದಲೂ ಕುಟುಂಬ ಸಮೇತ ಇಲ್ಲಿಗೆ ಬರುತ್ತಿದ್ದೇನೆ ತಾಯಿಯ ಆಶೀರ್ವಾದ ನಮ್ಮ ಮೇಲಿದೆ. ಸಿದ್ದಾರ್ಥ ಸಂಸ್ಥೆ ಪ್ರಖ್ಯಾತಿ ಪಡೆಯಲು ದೇವಿಯೇ ಕಾರಣ. ರಾಜ್ಯದ ಗೃಹ ಸಚಿವರಾಗಿ ಅಧಿಕಾರ ಪಡೆಯಲು ತಾಯಿಯ ಆಶೀರ್ವಾದವೇ ಪ್ರಮುಖ ಕಾರಣ. ದೇವಸ್ಥಾನ ದಿನದಿಂದ ದಿನಕ್ಕೆ ಸಾಕಷ್ಟು ಅಭಿವೃದ್ಧಿ ಆಗುತ್ತಿದೆ. ಬೆಸ್ಕಾಂ ನಿವೃತ್ತ ನಿರ್ದೇಶಕ ಬಿ.ವಿ.ಜಯರಾಂ ಶ್ರಮ ಸಾಕಷ್ಟು ಇದ್ದು ಅವರ ತಂಡ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ದೇವಸ್ಥಾನಕ್ಕೆ ಹೊಸ ರಥ, ಕಾಂಕ್ರೀಟ್ ರಸ್ತೆ, ಉಯ್ಯಾಲೆ ಕಂಬ, ಗರಡಗಂಬ ಸೇರಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ದೇವಸ್ಥಾನದಲ್ಲಿ ನಡೆದಿವೆ. ವರ್ಷದಿಂದ ವರ್ಷಕ್ಕೆ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಬೇಡಿ ಬಂದ ಭಕ್ತರ ಆಶಯಗಳನ್ನು ದೇವಿ ಈಡೇರಿಸುತ್ತಿದ್ದು ಪ್ರತಿಯೊಬ್ಬರೂ ತಾಯಿಯ ಆಶೀರ್ವಾದ ಪಡೆದುಕೊಳ್ಳಿ ಎಂದು ತಿಳಿಸಿದರು.ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಪರಮೇಶ್ವರ್ ಅವರು ಕೊರಟಗೆರೆ ಕ್ಷೇತ್ರದ ಶಾಸಕರಾಗಿದ್ದರೂ, ನಮ್ಮ ಮಾಗಡಿ ತಾಲೂಕಿಗೆ ಕೂಡ ಸೇರಿದವರು. ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಒತ್ತನ್ನು ಕೊಟ್ಟಿದ್ದು ಮುಂದೆ ಕೂಡ ಅವರ ಸಹಕಾರ ಬೇಕಾಗಿದೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಕೊಡಬೇಕು. ಶಕ್ತಿ ದೇವತೆ ಮುಳ್ಕಟ್ಟಮ್ಮ ತಾಯಿ ಪರಮೇಶ್ವರ್ ಅವರ ಕುಟುಂಬಕ್ಕೆ ಒಳಿತನ್ನು ಮಾಡಲಿ. ಪ್ರತಿ ವರ್ಷವೂ ವಿಜೃಂಭಣೆಯಿಂದ ಬಿ.ವಿ.ಜಯರಾಂ ಬ್ರಹ್ಮ ರಥೋತ್ಸವ ನಡೆಸುತ್ತಿದ್ದು ದೇವಿಯ ಕೃಪೆ ಎಲ್ಲರ ಮೇಲಿರಲಿ ಎಂದು ಹಾರೈಸಿದರು.
ಬೆಳ್ಳಿ ಕಡಗ ನೀಡಿ ಸನ್ಮಾನ:ಗೃಹ ಸಚಿವ ಜಿ.ಪರಮೇಶ್ವರ್ ಮನೆ ದೇವವರಾದ ಮುಳ್ಕಟ್ಟಮ್ಮ ದೇವಸ್ಥಾನದ ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ಪರಮೇಶ್ವರ್ ಅವರಿಗೆ ಬೆಸ್ಕಾಂ ಮಾಜಿ ನಿರ್ದೇಶಕ ಬಿ.ವಿ. ಜಯರಾಮ್ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಿದರು. ಜೊತೆಗೆ ಹೊಸ ರಥ ನಿರ್ಮಾಣ ಮಾಡಿದ ಶಿಲ್ಪಿ ಬಸವರಾಜ ಎಸ್.ಬಡಿಗೇರ್ ಅವರಿಗೂ ಬೆಳ್ಳಿ ಗದೆ ನೀಡಿ ಸನ್ಮಾನಿಸಲಾಯಿತು.
ಅದ್ಧೂರಿ ಬ್ರಹ್ಮರಥೋತ್ಸವ:ಮುಳ್ಕಟ್ಟಮ್ಮ ದೇವಿಯ ಬ್ರಹ್ಮರಥೋತ್ಸವ ಬುಧವಾರ ರಾತ್ರಿ ಅದ್ಧೂರಿಯಾಗಿ ನೆರವೇರಿತು. ನೂತನ ರಥದಲ್ಲಿ ಅಮ್ಮನವರನ್ನು ಕೂರಿಸಿ ತೇರು ಎಳೆಯಲಾಯಿತು. ಮುತ್ತಿನ ಪಲ್ಲಕ್ಕಿ ಉತ್ಸವ, ಡೊಳ್ಳು ಕುಣಿತ, ಹೂವಿನ ಅಲಂಕಾರ, ವಿದ್ಯುತ್ ಅಲಂಕಾರ, ಕೀಲು ಕುದುರೆ, ಕರಡಿ ವಾದ್ಯ, ಬಾಣಬಿರಿಸು, ಸಿಡಿಮದ್ದು ಮೂಲಕ ರಥೋತ್ಸವಕ್ಕೆ ಅದ್ಧೂರಿ ಮೆರುಗು ನೀಡಲಾಯಿತು. ದೇವಿ ಬೆಳ್ಳಿ ಕವಚ ಅಲಂಕಾರದಲ್ಲಿ ಕಂಗೊಳಿಸುತ್ತಿತ್ತು.
ರಸಮಂಜರಿ:ರಥೋತ್ಸವದ ಅಂಗವಾಗಿ ರಸಮಂಜರಿ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಮಜಾ ಭಾರತ ಜಗ್ಗಪ್ಪ, ಸುಸ್ಮಿತ, ಗಿಚ್ಚಿ ಗಿಲಿ ಗಿಲಿ ಹುಲಿ ಕಾರ್ತಿಕ್, ಸರಿಗಮಪ ಕಂಬದ ರಂಗಯ್ಯ, ದಿಯಾ ಹೆಗಡೆ ಸೇರಿದಂತೆ ಅನೇಕ ಕಲಾವಿದರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಜಿ.ಪರಮೇಶ್ವರವರ ಪತ್ನಿ ಕನ್ನಿಕಾಪರಮೇಶ್ವರಿ, ಬೆಸ್ಕಾಂ ಮಾಜಿ ನಿರ್ದೇಶಕ ಬಿ.ವಿ.ಜಯರಾಂ, ತುಮಕೂರು ಜಿಪಂ ಸಿಇಒ ಪ್ರಭು, ಎಸ್ಪಿ ಶ್ರೀನಿವಾಸ್ ಗೌಡ, ಲಕ್ಷ್ಮಿಪತಿ, ಶಿವರಾಜು ಇತರರು ಭಾಗವಹಿಸಿದ್ದರು.ಕೋಟ್...........
ಮಾಗಡಿಗೆ ಹೇಮಾವತಿ ನೀರು ಬರಬೇಕೆಂಬ ಮನವಿ ಇದೆ. ಇದನ್ನು ಸರ್ಕಾರ ಪರಿಗಣಿಸಿದ್ದು ನೀರು ಎಲ್ಲಾ ಜಾತಿ ಧರ್ಮವನ್ನು ಮೀರಿದ್ದು, ನೀರಿಗೆ ಕಿತ್ತಾಡುವುದು ಬೇಡ. ಸರ್ಕಾರ ಯಾವ ರೀತಿ ಹೇಮಾವತಿ ಯೋಜನೆ ರೂಪಿಸಬೇಕು. ಆ ರೀತಿ ರೂಪಿಸುತ್ತದೆ. ಮಾಗಡಿಗೂ ಹೇಮಾವತಿ ನೀರು ಬರಬೇಕು.-ಡಾ.ಜಿ.ಪರಮೇಶ್ವರ್, ಗೃಹ ಸಚಿವರು
(ಫೋಟೊ ಕ್ಯಾಫ್ಷನ್)ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯ ಹೆಬ್ಬಳಲು ಗ್ರಾಮದ ಶ್ರೀ ಮುಳ್ಕಟ್ಟಮ್ಮ ದೇವಿ ಬ್ರಹ್ಮರಥೋತ್ಸವದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಬೆಸ್ಕಾಂ ನಿವೃತ್ತ ನಿರ್ದೇಶಕ ಬಿ.ವಿ.ಜಯರಾಮ್ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಿದರು. ಶಾಸಕ ಬಾಲಕೃಷ್ಣ ಇತರರಿದ್ದರು.