ಸಾರಾಂಶ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಹೋಬಳಿಯ ಸಂತೆ ಶಿವರ ಏತ ನೀರಾವರಿ ಯೋಜನೆ ಸಾಕಾರಗೊಳ್ಳಲು ಸಾಹಿತಿ ಎಸ್. ಎಲ್. ಭೈರಪ್ಪನವರೇ ಕಾರಣ. ಅವರ ಪರಿಶ್ರಮದಿಂದ ಯೋಜನೆಗೆ ಅನುದಾನ ದೊರೆತಿದೆ. ಶಾಶ್ವತವಾಗಿ ಅವರ ಹೆಸರು ಉಳಿಯಲಿ ಎಂದು ಈ ಯೋಜನೆಗೆ ಡಾ. ಎಸ್. ಎಲ್. ಭೈರಪ್ಪ ಏತ ನೀರಾವರಿ ಯೋಜನೆ ಎಂದು ಹೆಸರಿಟ್ಟಿರುವುದಾಗಿ ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಕಾರೇಹಳ್ಳಿ ಸಮೀಪದ ಜಾಬ್ ಘಟ್ಟ ಗ್ರಾಮದ ಬಳಿ ಇರುವ ನಾಗಮಂಗಲ ವಿಭಾಗದ ಹೇಮಾವತಿ ನಾಲೆಯ ಜಾಕ್ ವೆಲ್ ನಲ್ಲಿ ನೀರೆತ್ತುವ ಮೋಟರ್ ಗೆ ಚಾಲನೆ ನೀಡಿ ಮಾತನಾಡಿದರು.
ಎಸ್. ಎಲ್. ಭೈರಪ್ಪನವರು ತಮ್ಮ ಹುಟ್ಟೂರಾದ ಸಂತೆ ಶಿವರ ಗ್ರಾಮದ ರೈತರಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಗ್ರಾಮದ ಕೆರೆ ಶಾಶ್ವತವಾಗಿ ತುಂಬಿಸುವ ಉದ್ದೇಶದಿಂದ, ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 20 ಕೋಟಿಗೂ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಿಸಿದ್ದರು. ಕಳೆದ ವರ್ಷ ಯೋಜನೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿ, ಯೋಜನೆಯ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಲಾಗಿದೆ. ಯೋಜನೆ ಸಾಕಾರಗೊಳ್ಳಲು ಶ್ರಮಿಸಿದ ಅವರಿಗೆ ಗೌರವ ಸೂಚಿಸುವ ಸಲುವಾಗಿ ಯೋಜನೆಗೆ ಡಾ. ಎಸ್ ಎಲ್ ಭೈರಪ್ಪ ಯೋಜನೆಯಂದು ಹೆಸರಿಡಲಾಗಿದೆ ಎಂದರು.ತೋಟಿ ಏತ ನೀರಾವರಿ ಯೋಜನೆ ಶೀಘ್ರ ಪೂರ್ಣ:ನುಗ್ಗೇಹಳ್ಳಿ ಹಾಗೂ ಹಿರೀಸಾವೆ ಭಾಗದ ಸುಮಾರು 20ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಉದ್ದೇಶದಿಂದ ಈ ಯೋಜನೆಗೆ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಚ್. ಡಿ. ಕುಮಾರಸ್ವಾಮಿ ಅವರು ಭೂಮಿ ಪೂಜೆ ನೆರವೇರಿಸಿದರು. ಈಗಾಗಲೇ ಶೇ. 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಗುತ್ತಿಗೆದಾರರ ಸಮಸ್ಯೆಯಿಂದ ವಿಳಂಬವಾಗಿದೆ. ಈ ಬಗ್ಗೆ ನೀರಾವರಿ ಸಚಿವರ ಗಮನಕ್ಕೂ ತರಲಾಗಿದೆ. ಶೀಘ್ರ ಬಾಕಿ 900 ಮೀಟರ್ ಪೈಪ್ ಲೈನ್ ಕಾಮಗಾರಿ ಜಾಕ್ ವೆಲ್ ನಲ್ಲಿ ವಿದ್ಯುತ್ ಸಂಪರ್ಕ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಆದರೆ ಗುತ್ತಿಗೆದಾರರು ನೀರಾವರಿ ಇಲಾಖೆಯಿಂದ ಎನ್ ಒ ಸಿ ಗೋಸ್ಕರ ಕಾಯುತ್ತಿದ್ದಾರೆ. ಈ ವಿಳಂಬದಿಂದ ರೈತರಿಗೆ ಸಮಸ್ಯೆಯಾಗುತ್ತದೆ, ರೈತರ ಹಿತ ದೃಷ್ಟಿಯಿಂದ ಯೋಜನೆ ಪೂರ್ಣಗೊಂಡರೆ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ಈ ವರ್ಷದ ಹಂಗಾಮಿನಲ್ಲೆ ನೀರು ಹರಿಸಬಹುದಾಗಿದೆ. ನವಿಲೆ, ಬಾಗೂರು, ಹಿರೀಸಾವೆ, ಆಲಗೊಂಡನಹಳ್ಳಿ ಏತ ನೀರಾವರಿ ಯೋಜನೆಗಳಿಂದ ಕೆರೆಗಳಿಗೆ ನೀರು ಹರಿಸಲು ಸೋಮವಾರ ನೀರೆತ್ತುವ ಮೋಟಾರ್ ಗೆ ಚಾಲನೆ ನೀಡಲಾಗುವುದು ಎಂದರು.
ಎಸ್. ಎಲ್. ಬೈರಪ್ಪನವರ ಪರಿಶ್ರಮದಿಂದ ಸಂತೆ ಶಿವರ ಅಗ್ರಹಾರ ಬೆಳಗುಲಿ ಹಾಗೂ ದುಗ್ಗೇನಹಳ್ಳಿ, ಯಾಚನಘಟ್ಟ ಗ್ರಾಮಗಳ ಕೆರೆಗಳು ಈ ಯೋಜನೆಯಿಂದ ತುಂಬುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.ಕಾರೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ. ಎ. ಸತೀಶ್, ತಾಲೂಕು ಟಿಎಪಿಎಂಎಸ್ ನಿರ್ದೇಶಕ ಎಸ್ ಚಿರಂಜೀವಿ, ನಿವೃತ್ತ ರೇಷ್ಮೆ ಅಧಿಕಾರಿ ಕೃಷ್ಣಪ್ರಸಾದ್, ಕೃಷಿ ಪತ್ತಿನ ಮಾಜಿ ಅಧ್ಯಕ್ಷರು ಸಿಡಿ ರೇವಣ್ಣ, ಹುಲಿಕೆರೆ ಸಂಪತ್ ಕುಮಾರ್, ನಟೇಶ್, ಮಾಜಿ ಗ್ರಾಪಂ ಅಧ್ಯಕ್ಷ ಕೆಂಪೇಗೌಡ, ಸಿಜೆ ಕುಮಾರ್, ತಾಲೂಕು ಜೆಡಿಎಸ್ ಯುವ ಮುಖಂಡ, ಉದ್ಯಮಿ ಭೂನಹಳ್ಳಿ ಯೋಗೇಶ್, ಮುಖಂಡರಾದ ಎಸ್. ಬಿ. ವೀರೇಶ್, ಕೃಷ್ಣೇಗೌಡ, ಬೆಳಗೀಹಳ್ಳಿ ಪುಟ್ಟಸ್ವಾಮಿ, ಬ್ಯಾಂಕ್ ಚಂದ್ರಣ್ಣ, ಉದ್ಯಮಿ ಚಿಪ್ಪಿನ ಚಂದ್ರು, ದ್ಯಾವಲಾಪುರ ಪ್ರಕಾಶ್, ದೊಡಗನ್ನಿ ಸತೀಶ್ ಇದ್ದರು.