ಸಾರಾಂಶ
ಬೆಂಗಳೂರು/ನವದೆಹಲಿ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ನೇರಾನೇರ ಹೋರಾಟಕ್ಕಿಳಿದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಮುಖಂಡರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೆ ಅವಕಾಶ ಸಿಗದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬುಧವಾರ ತಡರಾತ್ರಿ ಬೆಂಗಳೂರಿಗೆ ವಾಪಸಾಗಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಅಂದರೆ, ಫೆ.9ರ ನಂತರ ಯತ್ನಾಳ್ ಬಣದ ಮುಖಂಡರು ಮತ್ತೊಮ್ಮೆ ದೆಹಲಿ ಯಾತ್ರೆ ಕೈಗೊಳ್ಳಲಿದ್ದಾರೆ. ಆಗ ವರಿಷ್ಠರನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಫೆ.10ರಂದು ರೇಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಸರ್ಕಾರಿ ನಿವಾಸದಲ್ಲಿ ಪೂಜಾ ಕಾರ್ಯಕ್ರಮವಿದ್ದು, ಇದೇ ನೆಪದಲ್ಲಿ 9ರಂದೇ ದೆಹಲಿಗೆ ತೆರಳಿ ಲಿಂಗಾಯತ ಮುಖಂಡರ ಸಭೆ ನಡೆಸಲು ಭಿನ್ನಮತೀಯ ನಾಯಕರು ಸಿದ್ಧತೆ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಲಿಂಗಾಯತ ಸಮುದಾಯದ ಬೆಂಬಲ ಇಲ್ಲ ಎಂಬುದನ್ನು ರಾಷ್ಟ್ರೀಯ ನಾಯಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಇದಾಗಿದೆ ಎನ್ನಲಾಗಿದೆ.
ಬೊಮ್ಮಾಯಿ ನೇತೃತ್ವದಲ್ಲಿ ಸಭೆ:
ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದು ಪಕ್ಷದ ವರಿಷ್ಠರಿಗೆ ದೂರು ನೀಡಲು ದೆಹಲಿಗೆ ಭೇಟಿ ನೀಡಿದ್ದ ಯತ್ನಾಳ್ ಬಣದ ಮುಖಂಡರು ಬುಧವಾರವೂ ಬಿರುಸಿನ ಚಟುವಟಿಕೆ ನಡೆಸಿದರು.
ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಗೌಪ್ಯ ಸಭೆ ನಡೆಸಿದರು. ಸಭೆಯಲ್ಲಿ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ್, ಎನ್.ಆರ್.ಸಂತೋಷ್ ಅವರು ಭಾಗಿಯಾಗಿದ್ದರು. ಇದೇ ವೇಳೆ ಬೊಮ್ಮಾಯಿ ಅವರು ಕುಮಾರ್ ಬಂಗಾರಪ್ಪ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಎಂ.ಸಿದ್ದೇಶ್ವರ್, ಪಕ್ಷದ ರಾಷ್ಟ್ರ ನಾಯಕರು ಒಳ್ಳೆ ಸುದ್ದಿ ಕೊಡುತ್ತಾರೆ. ನಮ್ಮ ಹೋರಾಟಕ್ಕೆ ಜಯ ಸಿಗುತ್ತದೆ. ಫೆ.10ರ ಬಳಿಕ ಒಳ್ಳೆಯ ಸುದ್ದಿ ಕೊಡುತ್ತೇವೆ ಎಂದು ತಿಳಿಸಿದರು.ಮಂಗಳವಾರವಷ್ಟೇ ಯತ್ನಾಳ್ ಬಣದ ಮುಖಂಡರು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದಾಗಿ ರಮೇಶ್ ಜಾರಕಿಹೊಳಿ ಅವರು ಹೇಳಿದ್ದರು.
ಬಿಎಸ್‌ವೈ ಕುಟುಂಬ ವಿರುದ್ಧ ವಾಗ್ದಾಳಿ:
ರಾಜ್ಯದಲ್ಲಿ ಎಲ್ಲ ಲಿಂಗಾಯತರು ಯಡಿಯೂರಪ್ಪ ಪರವಾಗಿ ಇಲ್ಲ. ಯಡಿಯೂರಪ್ಪ ಅವರು ಆ ಗೌರವ ಉಳಿಸಿಕೊಂಡಿಲ್ಲ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿಯುವುದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಇಬ್ಬರು ಮೂವರು ಪೇಮೆಂಟ್ ಸ್ವಾಮಿಗಳು ಯಡಿಯೂರಪ್ಪ ಜೊತೆಗಿದ್ದಾರಷ್ಟೇ. ವಿಜಯೇಂದ್ರ ಕರ್ಮಕಾಂಡ ಬಹಳ ಇದೆ. ಬಸವರಾಜ್ ಪಾಟೀಲ್ ಸೇಡಂ, ಬಿ.ವಿ.ಶಿವಪ್ಪ, ಸಿದ್ದೇಶ್ವರ್, ಮಲ್ಲಿಕಾರ್ಜುನಯ್ಯ ಸೇರಿ ಬಹಳಷ್ಟು ಲಿಂಗಾಯತ ನಾಯಕರನ್ನು ಮುಗಿಸಿದ್ದಾರೆ. ನನ್ನನ್ನು ಸತತವಾಗಿ ಮುಗಿಸುವ ಪ್ರಯತ್ನ ಮಾಡಿದರು. ರಮೇಶ್ ಜಾರಕಿಹೊಳಿ ರಸ್ತೆಗೆ ಬರಲು ಬಿಡಲ್ಲ ಎನ್ನುತ್ತಿದ್ದಾರೆ. ಏನು ಗೂಂಡಾಗಿರಿ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.ಭ್ರಷ್ಟಾಚಾರ, ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಬೇಕು ಎಂಬುದು ಸೇರಿ ಮೂರು ಅಂಶಗಳನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ. ಹಿಂದೂಗಳ ಹತ್ಯೆ ಆಯಿತು, ಆಗ ಯಡಿಯೂರಪ್ಪ ಏನು ಮಾಡಿದರು? ಶಿವಮೊಗ್ಗದಲ್ಲಿ ಔರಂಗಜೇಬನ ಫೋಟೋ ಹಾಕಿದರು. ಏನು ಕ್ರಮ ಕೈಗೊಂಡರು? ಎಲ್ಲ ಜಮೀರ್ ಅಹಮದ್ ಖಾನ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಯತ್ನಾಳ್ ಆಪಾದಿಸಿದರು.
ಮುಂದಿನದು ಮುಂದೆ ಹೇಳುತ್ತೇನೆ:
ಶ್ರೀರಾಮುಲು ನಿಮ್ಮ ಜೊತೆಗಿದ್ದೇನೆ ಎಂದು ಹೇಳಿದ್ದಾರೆ. ಹೈಕಮಾಂಡ್ ನಿರ್ಧಾರ ಬದಲಾವಣೆ ಮಾಡದಿದ್ದರೆ ಏನು ಮಾಡುತ್ತೇವೆ ಎಂಬುದನ್ನು ಮುಂದೆ ಹೇಳುತ್ತೇನೆ. ದುಡ್ಡಿನ ಅಹಂಕಾರದಿಂದ ಎಲ್ಲರನ್ನು ಖರೀದಿ ಮಾಡಬಹುದು ಅಂದುಕೊಂಡಿದ್ದಾರೆ. ಆದರೆ ಕೆಲವರನ್ನು ಕೆಲ ಕಾಲ ಮೋಸ ಮಾಡಬಹುದು. ಕೆಲವರನ್ನು ಎಲ್ಲಾ ಸಮಯದಲ್ಲಿ ಮೋಸ ಮಾಡಬಹುದು. ಆದರೆ ಎಲ್ಲರನ್ನೂ ಎಲ್ಲಾ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ಅವರ ಬಳಿ ದುಡ್ಡು ಇರಬಹುದು, ಚಾರಿತ್ರ್ಯ ಇಲ್ಲ ಎಂದು ಟೀಕಿಸಿದರು.