ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಚಲಿಸುತ್ತಿದ್ದ ಬಸ್ಸಿನ ಬಾಗಿಲು ಆಕಸ್ಮಿಕವಾಗಿ ತೆರೆದಿದ್ದರಿಂದ ಬಸ್‌ನಲ್ಲಿದ್ದ ಮಹಿಳೆ ಬಿದ್ದು ತೀವ್ರ ಗಾಯವಾದ ಮಹಿಳೆಯ ತಮ್ಮ ವಾಹನದಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ತಾಲೂಕಿನ ಹದಡಿ-ಆರನೇ ಮೈಲಿಕಲ್ಲು ಗ್ರಾಮದ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ.ತಾಲೂಕಿನ ಕುಕ್ಕವಾಡ ಗ್ರಾಮದ ಹಾಲಮ್ಮ(55 ವರ್ಷ) ತೀವ್ರ ಗಾಯಗೊಂಡಿದ್ದ ಮಹಿಳೆ. ಕುಕ್ಕವಾಡ ಗ್ರಾಮದಿಂದ ಹಾಲಮ್ಮ ದಾವಣಗೆರೆಯಲ್ಲಿ ತಮ್ಮ ಸಂಬಂಧಿ ಮನೆಯಲ್ಲಿ ತೊಟ್ಟಿಲು ಶಾಸ್ತ್ರದ ಕಾರ್ಯಕ್ಕೆಂದು ಸರ್ಕಾರಿ ಬಸ್ ಹತ್ತಿದ್ದರು. ಬಸ್‌ನಲ್ಲಿ ಆಸನವಿಲ್ಲದ್ದರಿಂದ ಬಾಗಿಲು ಬಳಿ ನಿಂತಿದ್ದ ಹಾಲಮ್ಮ ಬಸ್ ಆರನೇ ಮೈಲಿಕಲ್ಲು-ಹದಡಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ವೇಳೆ ಬಾಗಿಲು ಆಕಸ್ಮಿಕವಾಗಿ ತೆರೆದಿದ್ದರಿಂದ ರಸ್ತೆಗೆ ಬಿದ್ದು ತೀವ್ರ ಗಾಯಗೊಂಡಿದ್ದರು.
ತಕ್ಷಣವೇ ಗಾಯಾಳು ಮಹಿಳೆಯ ಆಸ್ಪತ್ರೆಗೆ ಕರೆದೊಯ್ಯಲು ಆ ಮಾರ್ಗದಲ್ಲಿ ಸಾಗುತ್ತಿದ್ದ ಯಾವುದೇ ವಾಹನಗಳನ್ನ ನಿಲ್ಲಿಸಲಿಲ್ಲ. ಅಂಬ್ಯುಲೆನ್ಸ್ ಗೆ ಕರೆ ಮಾಡಿದರೂ ಸಮಯಕ್ಕೆ ಸರಿಯಾಗಿ ಬರಲಿಲ್ಲ. ಇತ್ತ ತೀವ್ರ ಗಾಯದಿಂದ ಒದ್ದಾಡುತ್ತಿದ್ದ ಹಾಲಮ್ಮನನ್ನು ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಮ್ಮ ವಾಹನ ನಿಲ್ಲಿಸಿ, ಮಹಿಳೆಯ ನೆರವಿಗೆ ಧಾವಿಸಿದ್ದಾರೆ.ಚನ್ನಗಿರಿ ತಾಲೂಕು ಕಾರಿಗನೂರು ಗ್ರಾಮದ ಸಮಾರಂಭಕ್ಕೆ ತೆರಳುತ್ತಿದ್ದ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಾವು ಹೊರಟಿದ್ದ ಕಾರ್ಯಕ್ರಮದ ಬದಲು, ಮಹಿಳೆಯ ನೆರವಿಗೆ ಮುಂದಾದರು. ತಮ್ಮದೇ ವಾಹನದಲ್ಲಿ ದಾವಣಗೆರೆ ಎಸ್ಸೆಸ್ ಹೈಟೆಕ್ ಆಸ್ಪತ್ರೆಗೆ ಗಾಯಾಳು ಹಾಲಮ್ಮನನ್ನು ಕರೆ ತಂದು, ದಾಖಲಿಸಿದರು. ಬಡ ಮಹಿಳೆಯ ಕುಟುಂಬ ಸದಸ್ಯರಿಗೆ ವೈಯಕ್ತಿಕ ಧನ ಸಹಾಯ ಮಾಡುವ ಮೂಲಕ ಶಾಸಕ ಬಸವಂತಪ್ಪ ಮಾನವೀಯತೆ ಮೆರೆದು, ಜನ ಮೆಚ್ಚುಗೆಗೆ ಪಾತ್ರರಾದರು. ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಯಕೊಂಡ ಶಾಸಕ ಮೊದಲಿನಿಂದಲೂ ಕೆ.ಎಸ್.ಬಸವಂತಪ್ಪ ಇಂತಹ ಮಾನವೀಯ ಕಾರ್ಯಗಳಿಂದಲೇ ಜನರ ಮನ ಗೆದ್ದು ಮೆಚ್ಚುಗೆಗೆ ಪಾತ್ರವಾಗಿದ್ದಾರೆ.