ಸಾರಾಂಶ
ಹಾವೇರಿ: ಸಂಗೂರು ಸಕ್ಕರೆ ಕಾರ್ಖಾನೆ ಗುತ್ತಿಗೆದಾರರು ಕಬ್ಬು ಸಾಗಿಸಿದ ರೈತರಿಗೆ ಎಫ್‌ಆರ್‌ಪಿ ದರದಲ್ಲಿ ಬಾಕಿ ಉಳಿಸಿಕೊಂಡಿರುವ ಹಣ ಪಾವತಿಗೆ ಆಗ್ರಹಿಸಿ ಕಳೆದ 20 ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಸೋಮವಾರ ಭೇಟಿ ನೀಡಿ ರೈತರ ಅಹವಾಲು ಆಲಿಸಿದರು.
ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, 20 ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೂ ಕಾರ್ಖಾನೆ ಗುತ್ತಿಗೆದಾರರು ಮಾತುಕತೆಗೆ ಬಾರದೇ, ಈಗ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಶೋಷಣೆಗೆ ಮುಂದಾಗಿದ್ದಾರೆ. ಕಳೆದ 8 ದಿನಗಳಿಂದ ಸಕ್ಕರೆ ಕಾರ್ಖಾನೆಯ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿದ್ದರು. ಕಾರ್ಮಿಕರೆಲ್ಲ ಗುತ್ತಿಗೆದಾರ ಬಳಿ ಹೋಗಿ ರೈತರು ಕೀಲಿ ಹಾಕಿದರೆ ಕಾರ್ಮಿಕರಿಗೇಕೆ ಶಿಕ್ಷೆ ಎಂದು ವಿನಂತಿ ಮಾಡಿಕೊಂಡಾಗ ಮತ್ತೆ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡು ನಾಲ್ಕು ದಿನ ಕಾರ್ಖಾನೆ ನಡೆಸಿದಂತೆ ಮಾಡಿ ಭಾನುವಾರದಿಂದ ಮತ್ತೆ ಕಾರ್ಖಾನೆಯ ಗೇಟ್‌ಗೆ ಕಾರ್ಖಾನೆ ಬಂದ್ ಎಂಬ ಬೋರ್ಡ್ ಹಾಕಿ ಸ್ಥಗಿತಗೊಳಿಸಿದ್ದಾರೆ. ಇದರಿಂದ ಕಾರ್ಮಿಕರ ಸ್ಥಿತಿ ಕಷ್ಟಕರವಾಗಿದ್ದು, ಅವರ ಬಳಿ ಮಕ್ಕಳ ಶಾಲಾ ಶುಲ್ಕ ತುಂಬಲೂ ಹಣವಿಲ್ಲ. ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದರು.ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರು, ರೈತರು ಮತ್ತು ಕಾರ್ಮಿಕರ ಅಹವಾಲು ಆಲಿಸಿ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಮತ್ತು ಗುತ್ತಿಗೆದಾರರ ಜತೆಗೆ ಮಾತನಾಡಿ ಕಾರ್ಮಿಕರ ಹಾಗೂ ರೈತರ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು. ಈ ವೇಳೆ ಮುಖಂಡರಾದ ವೀರೇಶ ಮತ್ತಿಹಳ್ಳಿ, ಸುರೇಶಗೌಡ ಪಾಟೀಲ, ರಾಮಣ್ಣ ಮಾದಪ್ಪನವರ, ಕಾರ್ಖಾನೆ ಕಾರ್ಮಿಕರ ಯುನಿಯನ್ ಮುಖಂಡ ಬಿ.ವಿ. ಹುಲ್ಲಾಳ, ಎ.ಜೆ. ಮಿಠಾಯಿಗಾರ, ಎಸ್.ಟಿ. ಹಾದಿಮನಿ, ಸುರೇಶ್ ಶಿಗೀಹಳ್ಳಿ, ಬಿ.ಪಿ. ವರ್ದಿ ಸೇರಿದಂತೆ ಹಲವರು ಇದ್ದರು.ಇಂದು ಅಭಿನಂದನಾ ಸಮಾರಂಭ
ಹಾವೇರಿ: ಬೆಂಗಳೂರಿನ ಎಚ್‌ಕೆಬಿಕೆ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಜಿಲ್ಲೆಯ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 300 ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವು ಜೂ. 24ರಂದು ನಗರದ ಶ್ರೀ ಗುರು ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.ಕಾರ್ಯಕ್ರಮದ ಸಾನ್ನಿಧ್ಯವನ್ನು ಸವಣೂರಿನ ಚೆನ್ನಬಸವ ಸ್ವಾಮಿಗಳು, ಹಾವೇರಿಯ ಬಸವ ಶಾಂತಲಿಂಗ ಸ್ವಾಮಿಗಳು, ಸವಣೂರಿನ ಸಯ್ಯದ ಶಂಶುಲಹಖ ಸಾಹೇಬ್ ಅವರು ವಹಿಸಲಿದ್ದಾರೆ.ಡಿಡಿಪಿಐ ಸುರೇಶ್ ಹುಗ್ಗಿ ಉದ್ಘಾಟಿಸುವರು. ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ, ಕಲಬುರಗಿಯ ನೀಟ್ ಮತ್ತು ಕೆಸಿಇಟಿ ರಾಜ್ಯ ಸಂಪನ್ಮೂಲ ವ್ಯಕ್ತಿದ ಜಾಹೀದ್ ಅಹ್ಮದ್ ಎನ್. ಜಾಗೀರದಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ವಿಧಾನಸಭಾ ಉಪ ಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ, ಶಾಸಕರಾದ ಯಾಸಿರ್ ಅಹ್ಮದ್‌ಖಾನ್ ಪಠಾಣ್, ಶ್ರೀನಿವಾಸ ಮಾನೆ, ಬಿ.ಎನ್. ಶಿವಣ್ಣನವರ, ಪ್ರಕಾಶ ಕೋಳಿವಾಡ, ಯು.ಬಿ. ಬಣಕಾರ, ಹೆಸ್ಕಾಂ ಅಧ್ಯಕ್ಷ ಸೈಯದ್ ಅಝಂಪೀರ್ ಖಾದ್ರಿ ಇತರರು ಪಾಲ್ಗೊಳ್ಳುವರು ಎಂದು ಎಚ್‌ಕೆಬಿಕೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಮಹಮ್ಮದ್ ರಿಯಾಝ್ ಅಹ್ಮದ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
;Resize=(128,128))
;Resize=(128,128))
;Resize=(128,128))