ಹೊನ್ನಿಕೇರಿ ಸಿದ್ದೇಶ್ವರ ದೇವಸ್ಥಾನಕ್ಕೆ ಶಾಸಕ ಬೆಲ್ದಾಳೆ ಭೇಟಿ, ಪರಿಶೀಲನೆ

| Published : Feb 27 2024, 01:33 AM IST

ಹೊನ್ನಿಕೇರಿ ಸಿದ್ದೇಶ್ವರ ದೇವಸ್ಥಾನಕ್ಕೆ ಶಾಸಕ ಬೆಲ್ದಾಳೆ ಭೇಟಿ, ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಹೊನ್ನಿಕೇರಿ ಗ್ರಾಮದಲ್ಲಿ ಬೆಟ್ಟದ ನಡುವೆ ಹೊನ್ನಿಕೇರಿ ಸಿದ್ದೇಶ್ವರ ದೇಗುಲವಿದೆ

ಕನ್ನಡಪ್ರ‍ಭ ವಾರ್ತೆ ಬೀದರ್‌

ಮುಜರಾಯಿ ಇಲಾಖೆ ಅಡಿಯಲ್ಲಿರುವ ಹೊನ್ನಿಕೇರಿ ಸಿದ್ದೇಶ್ವರ ದೇವಸ್ಥಾನ ಹುಂಡಿಗೆ ಸಾಕಷ್ಟು ಹಣ ಬರುತ್ತಿದೆ. ಹುಂಡಿ ಹಣ ದೇವಸ್ಥಾನದ ಅಭಿವೃದ್ಧಿಗೆ ಭಕ್ತರ ಮೂಲ ಸೌಕರ್ಯಕ್ಕೆ ಬಳಸಿ ಭಕ್ತರಿಗೆ ಮೂಲ ಸೌಕರ್ಯ ಕೊರತೆಯಾಗದಂತೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಸೂಚಿಸಿದರು.

ಅವರು ದಕ್ಷಿಣ ಕ್ಷೇತ್ರದ ಹೊನ್ನಿಕೇರಿ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿರುವ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿ ಭಕ್ತರ ಕುಂದು ಕೊರತೆಯ ಅಹವಾಲು ಸ್ವೀಕರಿಸಿ, ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಹೊನ್ನಿಕೇರಿ ಗ್ರಾಮದಲ್ಲಿ ಬೆಟ್ಟದ ನಡುವೆ ಹೊನ್ನಿಕೇರಿ ಸಿದ್ದೇಶ್ವರ ದೇಗುಲವಿದೆ. ಶತಮಾನದಷ್ಟು ಪುರಾತನವಾದ ಈ ದೇವಾಲಯ, ಹಲವು ವಿಭಿನ್ನ ವಿಸ್ಮಯಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ. ಈ ದೇವಸ್ಥಾನದ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಜಿಲ್ಲೆಯ ಧಾರ್ಮಿಕ ಕೇಂದ್ರಗಳಲ್ಲಿ ಹೊನ್ನಿಕೇರಿ ಸಿದ್ದೇಶ್ವರ ದೇವಸ್ಥಾನವು ಕೂಡ ಒಂದು. ಹೀಗಾಗಿ ಈ ಮಂದಿರಕ್ಕೆ ಜಿಲ್ಲೆಯಲ್ಲದೆ ಆಂಧ್ರ, ಮಹಾರಾಷ್ಟ್ರ ರಾಜ್ಯಗಳಿಂದ ಬರುವ ಭಕ್ತರಿಗೆ ಇಲ್ಲಿ ಯಾವುದೇ ಮೂಲ ಸೌಕರ್ಯದ ಕೊರತೆಯಾಗಬಾರದು. ದೇವಸ್ಥಾನದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಮತ್ತು ಭಕ್ತರಿಗೆ ಅವಶ್ಯಕತೆ ಇರುವ ಕುಡಿಯುವ ನೀರು, ಶೌಚಾಲಯ, ಅಡುಗೆ ಕೋಣೆ, ಸ್ನಾನದ ಕೋಣೆ ವ್ಯವಸ್ಥೆ, ದರ್ಶನ ಪಡೆಯುವ ಸಾಲಿನಲ್ಲಿ ವೃದ್ಧರಿಗೆ ವಿಶೇಷ ವ್ಯವಸ್ಥೆ ಸೇರಿ ಇನ್ನಿತರ ಮೂಲಸೌಕರ್ಯದಲ್ಲಿ ಯಾವುದೇ ರೀತಿಯ ತೊಂದರೆ ಯಾಗಬಾರದು. ಭಕ್ತರಿಗೆ ಸಮಸ್ಯೆ ಕಂಡುಬಂದಲ್ಲಿ ಇಲ್ಲಿನ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿ, ಇಲ್ಲಿರುವ ಗೋಶಾಲೆಯಲ್ಲಿ ಬಹಳ ಹಸುಗಳಿವೆ. ಹಸುವಿಗೆ ಮೇವು, ನೀರು ಸಮಯಕ್ಕೆ ಸರಿಯಾಗಿ ವ್ಯವಸ್ಥೆ ಮಾಡಬೇಕು ಎಂದರು.

ಈ ವೇಳೆ ಕಪಲಾಪುರ ಗ್ರಾಪಂ ಉಪಾಧ್ಯಕ್ಷ ಸಂಜುಕುಮಾರ ಅತಿವಾಳ, ಮುಖಂಡರಾದ ಹಣಮಂತರಾವ್‌ ಮೈಲಾರೆ, ಸಂತೋಷ ರೆಡ್ಡಿ ಆಣದೂರ, ಸಿದ್ದಯ್ಯ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.