ಪೈಪ್ ಅಳವಡಿಸಲು ಅಗೆದ ರಸ್ತೆ ದುರಸ್ತಿ ಮಾಡಲು ಶಾಸಕ ಭೀಮಣ್ಣ ನಾಯ್ಕ ಸೂಚನೆ

| Published : Jan 02 2025, 12:34 AM IST

ಪೈಪ್ ಅಳವಡಿಸಲು ಅಗೆದ ರಸ್ತೆ ದುರಸ್ತಿ ಮಾಡಲು ಶಾಸಕ ಭೀಮಣ್ಣ ನಾಯ್ಕ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಒಂದೊಂದು ವಾರ್ಡ್‌ನಲ್ಲಿ ಸಂಪೂರ್ಣ ಕಾಮಗಾರಿ ನಡೆಸಬೇಕು. ಬೇಕಾಬಿಟ್ಟಿಯಾಗಿ ಕೆಲಸ ಮಾಡುವುದರಿಂದ ಜನಸಾಮಾನ್ಯರು ಹೈರಾಣಾಗಿದ್ದು, ಸದಸ್ಯರಲ್ಲಿ ತಪ್ಪು ಸಂದೇಶ ಹೋಗಬಾರದು.

ಶಿರಸಿ: ಪೈಪ್ ಅಳವಡಿಕೆಯು ಪ್ರತಿ ವಾರ್ಡ್‌ನಲ್ಲಿ ಶಿಸ್ತುಬದ್ಧವಾಗಿ ಕೆಲಸ ನಡೆಯಬೇಕು. ಅಗೆದ ರಸ್ತೆಯನ್ನು ಸಂಪೂರ್ಣ ದುರಸ್ತಿ ಮಾಡಬೇಕು. ಬೇಜವಾಬ್ದಾರಿಯನ್ನು ಎಂದಿಗೂ ಸಹಿಸುವುದಿಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ಎಚ್ಚರಿಸಿದರು.ನಗರದ ಅಟಲ್ ಜೀ ಸಭಾಭವನದಲ್ಲಿ ನಗರೋತ್ಥಾನ, ಕುಡಿಯುವ ನೀರು ಹಾಗೂ ಇತರೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಒಂದೊಂದು ವಾರ್ಡ್‌ನಲ್ಲಿ ಸಂಪೂರ್ಣ ಕಾಮಗಾರಿ ನಡೆಸಬೇಕು. ಬೇಕಾಬಿಟ್ಟಿಯಾಗಿ ಕೆಲಸ ಮಾಡುವುದರಿಂದ ಜನಸಾಮಾನ್ಯರು ಹೈರಾಣಾಗಿದ್ದು, ಸದಸ್ಯರಲ್ಲಿ ತಪ್ಪು ಸಂದೇಶ ಹೋಗಬಾರದು. ಅನುಮಾನಕ್ಕೆ ಆಸ್ಪದ ನೀಡಬಾರದು. ರಸ್ತೆ ಅಗೆದಿರುವುದಲ್ಲಿ ಪೈಪ್ ಅಳವಡಿಸಿ, ಶೀಘ್ರ ರಸ್ತೆ ಮಾಡಲು ಸೂಚಿಸಿದ್ದೇನೆ. ವಾಟರ್ ಬೋರ್ಡ್‌ನಿಂದ ಕಚೇರಿ ಆರಂಭಿಸಬೇಕು. ಒಂದೊಂದು ಕಡೆಯಿಂದ ಒಂದೊಂದು ಝೋನ್‌ನಿಂದ ಆರಂಭಿಸಿ, ಅಗೆದ ರಸ್ತೆಯನ್ನು ಸಂಪೂರ್ಣ ದುರಸ್ತಿ ಮಾಡಬೇಕು. ವಾರ್ಡ್ ಸದಸ್ಯರಿಗೆ ಕಡ್ಡಾಯ ಮಾಹಿತಿ ನೀಡಬೇಕು. ಬೇಜವಾಬ್ದಾರಿಯ ಕಾಮಗಾರಿಯನ್ನು ಎಂದಿಗೂ ಸಹಿಸುವುದಿಲ್ಲ ಎಂದರು.ಕಳೆದ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗಿ ನಗರ ವ್ಯಾಪ್ತಿಯಲ್ಲಿ ಕಳೆದ ೧೬ ಕೊಳವೆ ಬಾವಿ ಕೊರೆಯಲಾಗಿದ್ದು, ಶಿರಸಿ ನಗರವು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುವುದರಿಂದ ಜನಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಕೆಂಗ್ರೆ ಹಾಗೂ ಮಾರಿಗದ್ದೆ ನೀರಿನ ಮೂಲ ಸಾಲುವುದಿಲ್ಲ. ಭವಿಷ್ಯದ ದೃಷ್ಟಿಯಿಂದ ಹೊಸ ನೀರಿನ ಮೂಲ ಅಗತ್ಯವಿದೆ. ಈ ಬಗ್ಗೆ ಪರಿಶೀಲನೆ ನಡೆಸಲು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿದ್ದೇನೆ. ನಗರೋತ್ಥಾನ ಕಾಮಗಾರಿಯಲ್ಲಿ ಶಿರಸಿ ನಗರಸಭೆಗೆ ₹೯ ಕೋಟಿ ಮಂಜೂರಾಗಿದ್ದು, ಸಚಿವರಿಂದ ಭೂಮಿಪೂಜೆ ನೆರವೇರಿಸಲಾಗುತ್ತದೆ ಎಂದರು.ಸದಸ್ಯ ಗಣಪತಿ ನಾಯ್ಕ ಮಾತನಾಡಿ, ಪೈಪ್‌ಲೈನ್ ಅಳವಡಿಸುವ ಕಾಮಗಾರಿಗೆ ರಸ್ತೆಯನ್ನು ಬೇಕಾಬಿಟ್ಟಿಯಾಗಿ ಅಗೆದು ಕೆಲಸ ಮಾಡುತ್ತಿದ್ದಾರೆ. ಈಗಿರುವ ಕುಡಿಯುವ ನೀರು ಪೂರೈಕೆ ಪೈಪ್‌ಲೈನ್ ಹಾಳಾಗಿ, ನೀರಿಗೆ ಸಮಸ್ಯೆಯಾಗಿದೆ. ಪದೇ ಪದೇ ಕೆಲಸ ಬಂದ್ ಮಾಡಿಸುತ್ತಿದ್ದಾರೆ. ಅಧ್ಯಕ್ಷರ ಗಮನಕ್ಕೆ ತರುತ್ತಿಲ್ಲ. ಅವರನ್ನು ಪ್ರಶ್ನಿಸಿದರೆ ಮಾಹಿತಿ ಇಲ್ಲ ಹೇಳುತ್ತಿದ್ದಾರೆ. ಪ್ರತಿನಿತ್ಯ ವಾರ್ಡಿನ ಜನರ ಬಳಿ ಹೇಳಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಅಚ್ಚುಕಟ್ಟಾಗಿ ಕಾಮಗಾರಿ ನಿರ್ವಹಿಸಲು ಸೂಚನೆ ನೀಡಬೇಕು ಎಂದು ವಿನಂತಿಸಿದರು.ಸದಸ್ಯ ಆನಂದ ಸಾಲೇರ ಮಾತನಾಡಿ, ನಗರತೋತ್ಥಾನ ಕಾಮಗಾರಿ ಮಂಜೂರಾಗಿರುವಲ್ಲಿ ಪೈಪ್ ಹಾಕಿದಲ್ಲಿ ಸಮಸ್ಯೆಯಿಲ್ಲ. ನರೋತ್ಥಾನ ಕಾಮಗಾರಿ ಇಲ್ಲದ ಕಡೆ ಗತಿ ಏನು? ಅಧಿಕಾರಿಗಳ ಬಳಿ ಕಾಮಗಾರಿಯ ಅಂದಾಜುಪತ್ರ ನೀಡಿ ಎಂದು ಹೇಳಿದರೂ ಕೊಟ್ಟಿಲ್ಲ. ಅವರ ಮನಸ್ಸಿಗೆ ಬಂದಂತೆ ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.ಈ ವೇಳೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ತಹಸೀಲ್ದಾರ್‌ ಶ್ರೀಧರ ಮುಂದಲಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್, ಪೌರಾಯುಕ್ತ ಕಾಂತರಾಜು ಇದ್ದರು.