ತಾಲೂಕಿನ ಹುಲೇಕಲ್ ಹೋಬಳಿಯ ತೆಪ್ಪಾರ ಗ್ರಾಮದಲ್ಲಿ ಶನಿವಾರ ₹22 ಕೋಟಿ ವೆಚ್ಚದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ಶಾಸಕ ಭೀಮಣ್ಣ ನಾಯ್ಕ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಶಿರಸಿ

ತಾಲೂಕಿನ ಹುಲೇಕಲ್ ಹೋಬಳಿಯ ತೆಪ್ಪಾರ ಗ್ರಾಮದಲ್ಲಿ ಶನಿವಾರ ₹22 ಕೋಟಿ ವೆಚ್ಚದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ಶಾಸಕ ಭೀಮಣ್ಣ ನಾಯ್ಕ ನೆರವೇರಿಸಿದರು.ಬಳಿಕ ಮಾತನಾಡಿದ ಅವರು‌, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ಒಂದು ಮೈಲುಗಲ್ಲಾಗಲಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು

ಅಲ್ಲದೇ ಯಾವುದೇ ಒಂದು ಸರ್ಕಾರಿ ಕಟ್ಟಡ ಅಥವಾ ಅಭಿವೃದ್ಧಿ ಕಾರ್ಯ ನಡೆಯಬೇಕಾದರೆ ಭೂಮಿಯ ಲಭ್ಯತೆ ಅತ್ಯಗತ್ಯ. ತೆಪ್ಪಾರ ಭಾಗದಲ್ಲಿ ವಸತಿ ಶಾಲೆಗೆ ಸೂಕ್ತವಾದ ಜಾಗ ಒದಗಿಸಲು ಸಹಕರಿಸಿದ ಗ್ರಾಮಸ್ಥರ ಔದಾರ್ಯ ದೊಡ್ಡದು. ಶಿಕ್ಷಣದ ಹಿತದೃಷ್ಟಿಯಿಂದ ಜಾಗ ನೀಡಿದ ಇಲ್ಲಿನ ಜನತೆ ಅಭಿನಂದನಾರ್ಹರು‌ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಳೆದ ಅನೇಕ ವರ್ಷಗಳಿಂದ ಈ ವಸತಿ ಶಾಲೆಯು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆಯೂ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಆದರೆ ಇಂದು ₹22 ಕೋಟಿ ವೆಚ್ಚದ ಭವ್ಯ ಕಟ್ಟಡಕ್ಕೆ ಕಾಲ ಕೂಡಿಬಂದಿದೆ. ಇದು ಈ ಭಾಗದ ದಲಿತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ದೊಡ್ಡ ಬಲ ನೀಡಲಿದೆ ಎಂದರು.

ನಮ್ಮ ರಾಜ್ಯ ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಈ ಯೋಜನೆಗೆ ಶೀಘ್ರವಾಗಿ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವ ಮುಖ್ಯಮಂತ್ರಿಗಳಿಗೂ ಹಾಗೂ ಸಚಿವರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಶಿಕ್ಷಣವು ಸಮಾಜದ ಪ್ರಬಲ ಆಯುಧ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಈ ವಸತಿ ಶಾಲೆಯು ಕೇವಲ ಕಟ್ಟಡವಾಗದೆ, ನೂರಾರು ಮಕ್ಕಳ ಭವಿಷ್ಯವನ್ನು ರೂಪಿಸುವ ದೇಗುಲವಾಗಲಿ. ನಮ್ಮ ಸರ್ಕಾರ ಬಡವರ ಶೈಕ್ಷಣಿಕ ಏಳಿಗೆಗೆ ಬದ್ಧವಾಗಿದೆ ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶಗೌಡ, ತಾಪಂ ಇಒ ಚನ್ನಬಸಪ್ಪ ಹಾವಣಗಿ, ಎಸ್.ಕೆ. ಬಾಗ್ವತ, ಪ್ರವೀಣ ಪಾಟೀಲ್ ಹಾಗೂ ಸ್ಥಳೀಯ ಮಾಜಿ ಗ್ರಾಪಂ ಜನಪ್ರತಿನಿಧಿಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.