ಸಾರಾಂಶ
ಸಿದ್ದಾಪುರ: ಶಿರಸಿ- ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮಂಗಳವಾರ ₹೨ ಕೋಟಿ ವೆಚ್ಚದಲ್ಲಿ ತಾಲೂಕಿನ ಬೇಡ್ಕಣಿ ಹಾಗೂ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ವಿವಿಧೆಡೆ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.ಬೇಡ್ಕಣಿ ಗ್ರಾಪಂ ವ್ಯಾಪ್ತಿಯ ಬೇಡ್ಕಣಿ ಶನೈಶ್ಚರ ದೇವಸ್ಥಾನದ ಎದುರಿನ ರಸ್ತೆ ಹಾಗೂ ಶನೈಶ್ಚರ ದೇವಾಲಯದ ಹಿಂಬದಿಯ ಗುಂಜಗೋಡ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಕಡಕೇರಿಯ ಈಶ್ವರ ದೇವಸ್ಥಾನದ ಹಿಂಬದಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ವಾಜಗದ್ದೆ- ಮತ್ತಿಗಾರ ರಸ್ತೆ, ಭಂಡಾರಕೇರಿ ಮುಖ್ಯ ರಸ್ತೆಯಿಂದ ಕಲ್ಮನೆ ರಸ್ತೆ, ಮಾವಿನಗಟ್ಟ ಏರಿಯಿಂದ ಕೋಡ್ಸರ ಸಹಿಪ್ರಾ ಶಾಲೆ ರಸ್ತೆ, ಸಹಿಪ್ರಾ ಶಾಲೆ ಹಾರ್ಸಿಕಟ್ಟಾದಿಂದ ಈಶ್ವರ ದೇವಸ್ಥಾನದ ರಸ್ತೆ, ಉಯ್ಯಾಲೆಮನೆ ರಸ್ತೆ ಹಾಗೂ ಮುಟ್ಟಳ್ಳಿ, ಓಣಿತೋಟ ಹಾಗೂ ಗಾಳಿಜಿಡ್ಡಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಈ ವೇಳೆ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಶಿರಸಿ- ಸಿದ್ದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಸ್ತೆಗಳ ಸುಧಾರಣೆಗಾಗಿ ಸರ್ಕಾರದಿಂದ ಸಾಕಷ್ಟು ಅನುದಾನ ಮಂಜೂರಾಗಿ ಕಾಮಗಾರಿ ಪ್ರಾರಂಭವಾಗಿವೆ. ನಾನು ಕೇವಲ ಭರವಸೆ ನೀಡುವ ಶಾಸಕನಲ್ಲ. ಕೃತಿಯ ಮೂಲಕ ಮಾಡುವ ಜನಪ್ರತಿನಿಧಿ ಎಂದರು.ಈ ಸಂದರ್ಭದಲ್ಲಿ ಬೇಡ್ಕಣಿ ಹಾಗೂ ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.
ನರೇಗಾ: ಜಿಲ್ಲೆಗೆ ಅತ್ಯುತ್ತಮ ಗ್ರಾಪಂ, ಕಾಯಕ ಬಂಧು ಪ್ರಶಸ್ತಿಕಾರವಾರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ 2023- 24ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಾರಣಕ್ಕಾಗಿ ಅತ್ಯುತ್ತಮ ಗ್ರಾಪಂ ಮತ್ತು ಅತ್ಯುತ್ತಮ ಕಾಯಕ ಬಂಧು ಪ್ರಶಸ್ತಿಗಳನ್ನು ಜಿಲ್ಲೆ ತನ್ನದಾಗಿಸಿಕೊಂಡಿದೆ.
ಬುಧವಾರ ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ನರೇಗಾ ಹಬ್ಬ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಅತ್ಯುತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿಗೆ ಪಾತ್ರವಾದ ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಪಂಗೆ ಹಾಗೂ ಅತ್ಯುತ್ತಮ ಕಾಯಕ ಬಂಧು ಪ್ರಶಸ್ತಿಗೆ ಭಾಜನರಾದ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಪಂ ವ್ಯಾಪ್ತಿಯ ಗಣಪತಿ ಅವರಿಗೆ ಪ್ರಶಸ್ತಿ ನೀಡಿ, ಅಭಿನಂದಿಸಿದರು.ಜಿಪಂ ಯೋಜನಾ ನಿರ್ದೇಶಕ ಕರೀಂ ಅಸದಿ, ದೇವಳಮಕ್ಕಿ ಗ್ರಾಪಂ ಅಧ್ಯಕ್ಷ ಸಂತೋಷ ಲೇಕಾ ಗೌಡ, ಉಪಾಧ್ಯಕ್ಷೆ ಕೋಮಲಾ ಕೃಷ್ಣನಂದ ದೇಸಾಯಿ, ಪಿಡಿಒ ರಘುನಂದನ ಆರ್. ಮಡಿವಾಳ, ಜಿಲ್ಲಾ ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ, ಕಾರ್ಯದರ್ಶಿ ಸೂರಜ್ ಮಿರಾಶಿ, ಚಿಗಳ್ಳಿ ಗ್ರಾಪಂ ಕಾರ್ಯದರ್ಶಿ ಯಲ್ಲಪ್ಪ ಪಾಟೀಲ್, ತಾಲೂಕು ಐಇಸಿ ಸಂಯೋಜಕಿ ಸೌಂದರ್ಯ ಕುರಕುರಿ, ಕಾಯಕ ಬಂಧು ಗಣಪತಿ ಶಿವಾಜಿ ಜಿವಾಜಿ ಮತ್ತಿತರರು ಇದ್ದರು.