ನರಗುಂದ: ಶಾಸಕ ಸಿ.ಸಿ. ಪಾಟೀಲ ಅವರು ಯಾವಾಗಲೂ ಹಾಲುಮತ ಸಮಾಜದ ಪರವಾಗಿದ್ದಾರೆ. ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುವುದು ಸರಿಯಲ್ಲವೆಂದು ಕರ್ನಾಟಕ ಪ್ರದೇಶ ಕುರುಬರ ಸಮಾಜದ ತಾಲೂಕು ಘಟಕದ ಕಾರ್ಯಾಧ್ಯಕ್ಷ ಚಂದ್ರಶೇಖರ ದಂಡಿನ ಆಕ್ಷೇಪಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಶಾಸಕ ಸಿ.ಸಿ. ಪಾಟೀಲ ಅವರು ಇತ್ತೀಚೆಗೆ ಬಾಗಲಕೋಟೆ ವಿಧಾನಸಭಾ ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಹಾಲುಮತ ಸಮಾಜವನ್ನು ಹೀಯಾಳಿಸಿದ್ದಾರೆಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ನರಗುಂದದಲ್ಲಿ ನಿರ್ಮಾಣವಾಗುತ್ತಿರುವ ಕನಕ ಭವನಕ್ಕೆ ತಮ್ಮ ಶಾಸಕರ ಪ್ರದೇಶ ಆಭಿವೃದ್ಧಿ ನಿಧಿಯಿಂದ ಅನುದಾನ ನೀಡಿದ್ದಲ್ಲದೆ, ವೈಯಕ್ತಿಕವಾಗಿಯೂ ಹಣ ನೀಡಿದ್ದಾರೆ ಎಂದರು.ತಾಲೂಕಿನಲ್ಲಿ ಲಿಂಗಾಯತ ಮತ್ತು ಹಾಲುಮತ ಸಮಾಜದವರು ಸಹೋದರತ್ವ ಭಾವನೆಯಿಂದ ಬಾಳುತ್ತಿವೆ. ಹೀಗಾಗಿ ಶಾಸಕರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುವುದನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ತಾಲೂಕು ಘಟಕದ ಅಧ್ಯಕ್ಷ ನೀಲಪ್ಪ ಗುಡದಣ್ಣವರ, ಪುರಸಭೆ ಮಾಜಿ ಸದಸ್ಯರಾದ ಫಕೀರಪ್ಪ ಸವದತ್ತಿ, ಸುನೀಲ ಕುಷ್ಟಗಿ, ಮಲ್ಲಪ್ಪ ಗೋನಾಳ, ಮಹಾದೇವಪ್ಪ ಗುದಗಿ, ಮಂಜುನಾಥ ಮೆಣಸಗಿ, ಅನಿಲ ಧರಿಯಣ್ಣವರ, ಬೀರಪ್ಪ ದುಂಡಿ, ಬೀರಪ್ಪ ಕಲಹಾಳ, ರಂಗಪ್ಪ, ಬಸವರಾಜ ಕೊಳಲದ, ನೀಲಪ್ಪ ಬೆಳಹುಂಡ, ರಂಗಪ್ಪ ಕಲಕೇರಿ, ಚಳಪ್ಪ ನಾಯ್ಕರ, ಅಶೋಕ ಹೆಬ್ಬಳ್ಳಿ, ಹನುಮಂತ ಕಾಡಪ್ಪನವರ, ಬಸು ಸವದತ್ತಿ, ಸುರೇಶ ಸವದತ್ತಿ, ಹಟ್ಟಿ ಮುಂತಾದವರು ಇದ್ದರು.ಮುಂಡರಗಿ ಕ್ಷೇತ್ರ ಮರಳಿ ಪಡೆಯಲು ಹೋರಾಟ
ಮುಂಡರಗಿ: 2008ರ ಕ್ಷೇತ್ರ ಪುನರ್ ವಿಂಗಡನೆಯಲ್ಲಿ ಮುಂಡರಗಿ ವಿಧಾನಸಭಾ ಮತಕ್ಷೇತ್ರ ರದ್ದಾಗಿ ಅರ್ಧಭಾಗ ರೋಣ ಕ್ಷೇತ್ರಕ್ಕೆ, ಇನ್ನರ್ಧ ಭಾಗ ಶಿರಹಟ್ಟಿ ಕ್ಷೇತ್ರಕ್ಕೆ ಹಂಚಿ ಹೋಗಿದ್ದು, ಇದೀಗ ಕ್ಷೇತ್ರ ಮರು ವಿಂಗಡಣೆಯಾಗುತ್ತಿದ್ದು, ಈ ಬಾರಿ ಮುಂಡರಗಿ ವಿಧಾನಸಭಾ ಮತಕ್ಷೇತ್ರ ಮರಳಿ ಪಡೆಯಲು ಪಕ್ಷಾತೀತವಾಗಿ ಹೋರಾಟ ಮಾಡಲಾಗುವುದು ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ್ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2011ರ ಜನಗಣತಿ ಪ್ರಕಾರ ತಾಲೂಕಿನ ಜನಸಂಖ್ಯೆ 131897 ಇದ್ದು, ಅಂದು ನರಗುಂದ ತಾಲೂಕಿನ ಜನಸಂಖ್ಯೆ 100623 ಇತ್ತು. ಮುಂಡರಗಿ ತಾಲೂಕಿನ ಭೌಗೋಳಿಕ ವಿಸ್ತೀರ್ಣ 891 ಚದರ ಕಿಮೀ ಇದ್ದು, 58 ಗ್ರಾಮಗಳನ್ನು ಹೊಂದಿದೆ. ನರಗುಂದ ತಾಲೂಕಿನ ಬೌಗೋಳಿಕ ವಿಸ್ತೀರ್ಣ 436 ಚದರ ಕಿಮೀ ಇದ್ದು, ಇದು ಒಟ್ಟು 35 ಗ್ರಾಮಗಳನ್ನು ಮಾತ್ರ ಹೊಂದಿದೆ. ಕೆಲವರ ರಾಜಕೀಯ ದುರುದ್ದೇಶ ಮತ್ತು ಇಚ್ಛಾಶಕ್ತಿಯ ಕೊರತೆಯಿಂದಾಗಿ ಮುಂಡರಗಿ ಕ್ಷೇತ್ರ ರದ್ದಾಗಿ 20 ವರ್ಷ ನೋವು ಅನುಭವಿಸುವಂತಾಗಿದೆ.2008ರಲ್ಲಾದ ಕ್ಷೇತ್ರ ಪುನರ್ ವಿಂಗಡಣೆಯ ಪೂರ್ವದಲ್ಲಿ ಮುಂಡರಗಿಯನ್ನು ರಾಜಕೀಯವಾಗಿ ಮುಗಿಸಲು ಅನೇಕ ಕಾಣದ ಕೈಗಳು ಹುನ್ನಾರ ನಡೆಸಿ, ನಮ್ಮದೇ ಕ್ಷೇತ್ರದ ಅನೇಕ ಗ್ರಾಮಗಳನ್ನು ಬೇರೆ ಕ್ಷೇತ್ರಕ್ಕೆ ಹರಿದು ಹಂಚಿದ್ದರಿಂದಾಗಿ ಅಂದು ಕ್ಷೇತ್ರ ಕಳೆದುಕೊಳ್ಳುವಂತಾಯಿತು.ಏ. 16ರಿಂದ 18ರ ವರೆಗೆ ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆ ಕುರಿತು ಸಂಸತ್ ವಿಶೇಷ ಅಧಿವೇಶನ ಕರೆದಿದ್ದು, ಹೊಸ ಜನಗಣತಿ ಪ್ರಕಾರ ಮೀಸಲು ಜಾರಿಗೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಅಂದು ಹೋರಾಟದ ಕೊರತೆಯಿಂದ ಕ್ಷೇತ್ರ ಕಳೆದುಕೊಂಡೆವು. ಪುನಃ ಕ್ಷೇತ್ರ ಉಳಿಸಿಕೊಳ್ಳಲು ತಾಲೂಕಿನಲ್ಲಿ ಪಕ್ಷಾತೀತವಾಗಿ ಎಲ್ಲ ಮುಖಂಡರ, ಸಂಘ- ಸಂಸ್ಥೆಗಳ, ಪ್ರಗತಿಪರ ಹಾಗೂ ಕನ್ನಡಪರ ಮತ್ತು ಹೋರಾಟಗಾರರ ಸಭೆ ಕರೆದು ಚರ್ಚಿಸಿ ಹೋರಾಟ ನಡೆಸುವ ಕುರಿತು ಚರ್ಚಿಸಲಾಗುವುದು ಎಂದು ಗೌಡರ ತಿಳಿಸಿದರು.