ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನಲ್ಲಿ ಉಂಟಾಗಿರುವ ಮಳೆ ಹಾನಿಗೆ ಸರ್ಕಾರ ಕೂಡಲೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಶಾಸಕ ಸಿಮೆಂಟ್ ಮಂಜು ಒತ್ತಾಯಿಸಿದರು.ಪಟ್ಟಣದಲ್ಲಿ ತುಂಬಿ ಹರಿಯುತ್ತಿರುವ ಹೇಮಾವತಿ ನದಿ ಹಾಗೂ ಹೊಳೆ ಮಲ್ಲೇಶ್ವರ ದೇವಸ್ಥಾನದ ಗರ್ಭ ಗುಡಿಗೆ ನುಗ್ಗಿರುವ ನೀರು, ವೀಕ್ಷಿಸಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ಸಕಲೇಶಪುರ ತಾಲೂಕಿನಲ್ಲಿ ಎಡೆಬಿಡದೆ ಸುರಿದಿರುವ ಧಾರಾಕಾರ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ, ಬೆಳೆಗಾರರು ಬೆಳೆದ ಕಾಫಿ, ಮೆಣಸು ಅಡಿಕೆ ಭತ್ತ ಮುಂತಾದ ಬೆಳೆಗಳು ಮಳೆಯ ರಭಸಕ್ಕೆ ನೆಲಕ್ಕುರುಳಿದೆ ಎಂದರು.
ತಾಲೂಕಿನಲ್ಲಿ ಹಲವಾರು ಕಿರು ಸೇತುವೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ತಡೆಗೋಡೆ ರಸ್ತೆ ಬದಿಯ ಗುಡ್ಡ ಕುಸಿದು ಬಿದ್ದಿದೆ. ರಸ್ತೆಗಳು ಸಂಪೂರ್ಣ ಹಾಳಾಗಿದೆ. ಮಳೆಯಿಂದಾಗಿ ನೂರಕ್ಕೂ ಹೆಚ್ಚು ಮನೆಗಳು ಹಾನಿ ಉಂಟಾಗಿದೆ. ನಮ್ಮ ತಾಲೂಕಿನಲ್ಲಿ ಹೆಚ್ಚು ಮಳೆ ಸುರಿದಿರುವುದರಿಂದ ಬಯಲುಸೀಮೆ ರೈತರಿಗೆ ಅನುಕೂಲವಾದರೆ ಮಲೆನಾಡು ಭಾಗದಲ್ಲಿ ಪ್ರತಿವರ್ಷ ನಷ್ಟ ಉಂಟಾಗುತಿದೆ, ಸರ್ಕಾರ ಈ ಬಗ್ಗೆ ಗಮನಹರಿಸಿ ಸಕಲೇಶಪುರಕ್ಕೆ ವಿಶೇಷ ಪ್ಯಾಕೇಜ್ ಘೊಷಿಸಿಬೇಕು ಎಂದು ಹೇಳಿದರು.ಈ ಬಗ್ಗೆ ಬೃಹತ್ ನೀರಾವರಿ ಸಚಿವ, ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ರವರೊಂದಿಗೆ ಚರ್ಚಿಸಿ ಮನವಿ ಮಾಡಿದ್ದೇನೆ. ವಿಧಾನಸಭಾ ಅಧಿವೇಶನ ಇದ್ದುದರಿಂದ ಕ್ಷೇತ್ರದ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇಂದಿನಿಂದ ಕ್ಷೇತ್ರದ ಎಲ್ಲಾ ಭಾಗಕ್ಕೂ ಪ್ರವಾಸ ಮಾಡಿ ಮಳೆಯಿಂದ ಉಂಟಾಗಿರುವ ಹಾನಿ ನಷ್ಟದ ಬಗ್ಗೆ ಮಾಹಿತಿ ಪಡೆದು ವರದಿ ಮಾಡಿ ಸರ್ಕಾರಕ್ಕೆ ಪರಿಹಾರ ಬಿಡುಗಡೆ ಮಾಡಲು ಒತ್ತಾಯಿಸಲಾಗುವುದು ಎಂದರು.
ಬಿಡುವು ಕೊಟ್ಟ ಮಳೆ: ಕಳೆದ ಹದಿನೈದು ದಿನಗಳಿಂದ ಸುರಿಯುತಿದ್ದ ಮಳೆ ಶನಿವಾರ ಪೂರ್ತಿ ಬಿಡುವು ನೀಡಿದ್ದರೂ ಮಳೆಯ ಅವಘಡಗಳು ಇನ್ನೂ ನಿಂತಿಲ್ಲ. ಶುಕ್ರವಾರ ರಾತ್ರಿಯಿಂದ ಹೇಮಾವತಿ ನದಿಯ ಹರಿವು ಹೆಚ್ಚಾದ ಪರಿಣಾಮ ಪಟ್ಟಣದ ಅಜಾದ್ ರಸ್ತೆಯಲ್ಲಿ ೫೦ಕ್ಕೂ ಹೆಚ್ಚು ಅಂಗಡಿ ಹಾಗೂ ಮನೆಗಳ ಒಳಗೆ ನೀರು ನುಗ್ಗಿದೆ.ಯಡೆಕುಮೆರಿ ಕಡಗರವಳ್ಳಿ ನಡುವಿನ ೬೩ನೇ ಕಿ.ಮೀನ ರೈಲ್ವೆ ಹಳಿಯ ಮೇಲೆ ಗುಡ್ಡದ ಮಣ್ಣು ಕುಸಿದ ಪರಿಣಾಮ ಶುಕ್ರವಾರ ರಾತ್ರಿಯಿಂದ ರೈಲ್ವೆ ಸಂಚಾರ ರದ್ದು ಪಡಿಸಲಾಗಿದೆ. ರೈಲ್ವೆ ಹಳಿಯ ಮೇಲೆ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ.
ರಾಷ್ಟ್ರಿಯ ಹೆದ್ದಾರಿ ೭೫ರ ದೊಡ್ಡ ತಪ್ಪಲುವಿನಲ್ಲಿ ಮತ್ತೆ ಗುಡ್ಡ ಕುಸಿದು ಕೆಲ ಗಂಟೆಗಳ ಕಾಲ ಸಂಚಾರ ನಿರ್ಬಂಧಿಸಲಾಗಿತ್ತು , ಪರ್ಯಾಯವಾಗಿ ವಾಹನಗಳನ್ನು ಕಾಡುಮನೆ ರಸ್ತೆ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಅವಾಂತರದಿಂದ ಗುಲಗಳೆಯ ಮೂರು ಮನೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ ಪರಿಣಾಮ ಮನೆಯಲ್ಲಿ ಸಾಮಗ್ರಿಗಳು ನೀರುಪಾಲಾಗಿದೆ.ಕೆಲಗಳಲೆ ಗ್ರಾಮದಲ್ಲಿ ಕಿರು ಸೇತುವೆ ಮಳೆಯಿಂದಾಗಿ ಕೊಚ್ಚಿ ಹೋಗಿರುವ ಪರಿಣಾಮ ಸುಮಾರು ಗ್ರಾಮದ ರೈತರ ೪೦೦ ಎಕರೆಯ ಗದ್ದೆ ಹಾಗೂ ತೋಟಗಳಿಗೆ ತೆರಳುವ ಸಂಪರ್ಕ ಕಡಿತ ಗೊಂಡಿದೆ. ದೇವಾಲದಕೆರೆ ಗ್ರಾಮದಲ್ಲಿ ಸುಮಾರು ೫೦ ಎಕರೆ ಭತ್ತದ ಗದ್ದೆ ಜಲಾವೃತಗೊಂಡಿದೆ. ಸಂಕಾಲಪುರ- ಕಾಡುಮನೆ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಓಡಳ್ಳಿ ಸೋಮವಾರ ಪೇಟೆ ರಾಜ್ಯ ಹೆದ್ದಾರಿ ನಡು ಭಾಗದಲ್ಲಿ ಭಿರುಕು ಬಿಟ್ಟಿದೆ. ಯಸಳೂರು ಹೊಬಳಿ ಮತ್ತೂರು ಗ್ರಾಮದ ಕರೆ ಕಟ್ಟೆ ಒಡೆದು ನೂರಾರು ಎಕರೆ ಭತ್ತದ ಗದ್ದೆಗಳಿಗೆ ನೀರು ಹರಿದಿದೆ. ತಾಲೂಕಿನಲ್ಲಿ ಮಳೆಯ ಪ್ರವಾಹ ಕಡಿಮೆಯಾದರೂ ಅವಘಡಗಳು ಹೆಚ್ಚಾಗಿವೆ.