ಸಾರಾಂಶ
ಇಂದಿನ ಆರೋಗ್ಯ, ಜೀವನಶೈಲಿಯಿಂದ ಜನತೆಯ ಆರೋಗ್ಯ ದಿನೇ ದಿನೇ ಹದಗೆಡುತ್ತಿರುವುದರಿಂದ ಎಲ್ಲರೂ ದುಡಿಮೆಗಿಂತ ಮುಖ್ಯವಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ತಾಯಕನಹಳ್ಳಿ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ ಉದ್ಘಾಟನೆ
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ಡಾ. ಎನ್.ಟಿ. ಶ್ರೀನಿವಾಸ್ಕನ್ನಡಪ್ರಭ ವಾರ್ತೆ ಕೂಡ್ಲಿಗಿಇಂದಿನ ಆರೋಗ್ಯ, ಜೀವನಶೈಲಿಯಿಂದ ಜನತೆಯ ಆರೋಗ್ಯ ದಿನೇ ದಿನೇ ಹದಗೆಡುತ್ತಿರುವುದರಿಂದ ಎಲ್ಲರೂ ದುಡಿಮೆಗಿಂತ ಮುಖ್ಯವಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಕಿವಿಮಾತು ಹೇಳಿದರು.
ತಾಲೂಕಿನ ಗಡಿಭಾಗದ ತಾಯಕನಹಳ್ಳಿ ಗ್ರಾಮದಲ್ಲಿ ತುಮಕೂರಿನ ಅಕ್ಷರಾ ಐ ಫೌಂಡೇಶನ್ ಹಾಗೂ ಡಾ. ಎನ್.ಟಿ. ಶ್ರೀನಿವಾಸ್ ಅವರ ವೈದ್ಯ ಸ್ನೇಹಿತರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪಟ್ಟಣ ನಗರ ಪ್ರದೇಶಗಳಿಗಷ್ಟೇ ಆರೋಗ್ಯ ಸೌಲಭ್ಯಗಳು ಸಿಗುತ್ತವೆ. ಆದರೆ ಗ್ರಾಮೀಣ ಜನರ ಆರೋಗ್ಯ ಕಾಳಜಿ ಮಾಡುವ ಉದ್ದೇಶದಿಂದ ನಮ್ಮ ತಂದೆಯ ಸ್ಮರಣಾರ್ಥ ಇಂತಹ ಶಿಬಿರಗಳನ್ನ ಕ್ಷೇತ್ರದಲ್ಲಿ ಆಗಾಗ್ಗೆ ಆಯೋಜನೆ ಮಾಡುತ್ತಿದ್ದೇವೆ. ಇದಕ್ಕೆ ನನ್ನ ವೈದ್ಯ ಸ್ನೇಹಿತರು ನನ್ನ ಬೆನ್ನಿಗೆ ನಿಂತು ಸೇವೆ ಸಲ್ಲಿಸುತ್ತಿದ್ದಾರೆ. ಬಡ ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಸಹ ಶಿಬಿರದಲ್ಲಿ ಕಣ್ಣಿನ ತಪಾಸಣೆ ನಡೆಸಿ ಸೇವೆ ಸಲ್ಲಿಸಿದರು. ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆ ಬಡಜನತೆಯನ್ನು ಆತಂಕಕ್ಕೀಡು ಮಾಡಿದೆ. ನಾನು ಗ್ರಾಮೀಣ ಹಿನ್ನೆಲೆಯಿಂದ ಬಂದಿದ್ದೇನೆ. ಬಡತನದ ಪರಿಚಯವೂ ನನಗೆ ಇದೆ. ನಾನು ಉನ್ನತ ಸ್ಥಾನದ ಹೊಣೆ ಹೊಂದಿದ ಮೇಲೆ ಬಡಜನರ ಸೇವೆ, ಅವರ ಋಣವನ್ನು ಈ ರೀತಿಯ ಆರೋಗ್ಯ ಶಿಬಿರಗಳ ಮೂಲಕವೇ ತೀರಿಸಲು ಸಾಧ್ಯ ಎಂಬುದನ್ನು ಅರಿತಿದ್ದೇನೆ ಎಂದರು.
ಶಾಸಕರ ಪತ್ನಿ ಡಾ. ಕೆ.ಪುಷ್ಪಾ ಶ್ರೀನಿವಾಸ್ ಮಾತನಾಡಿದರು. ಶಿಬಿರದಲ್ಲಿ16 ಹೆಚ್ಚು ತಜ್ಞ ವೈದ್ಯರ ತಂಡ ಹೃದ್ರೋಗ, ಕಣ್ಣಿನ ತಜ್ಞರು, ಮಕ್ಕಳ ತಜ್ಞರು, ಮೂಳೆ ತಜ್ಞರು ಮೂರು ಸಾವಿರಕ್ಕೂ ಅಧಿಕ ಜನರಿಗೆ ತಪಾಸಣೆ ನಡೆಸಿ ಉಚಿತ ಔಷಧಿ ವಿತರಿಸಿದರು. ಕಣ್ಣಿನ ವಿಭಾಗದಲ್ಲಿ 280 ಜನ ಕಣ್ಣಿನ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು. ಈ ಸಂದರ್ಭ ಈ ಭಾಗದ ಹಿರಿಯರನ್ನು ಸನ್ಮಾನಿಸುವ ಮೂಲಕ ಕ್ಷೇತ್ರದ ಜನತೆ ಜೊತೆ ನಾನಿದ್ದೇನೆ ಎಂಬ ಸಂದೇಶ ತಿಳಿಸಿದರು. ವೈದ್ಯ ಸ್ನೇಹಿತರ ತಂಡ, ಸ್ಥಳೀಯ ಗ್ರಾಪಂ ಅಧ್ಯಕ್ಷರು, ಸದಸ್ಯರು, ಈ ಭಾಗದ ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು. ಆರೋಗ್ಯ ಶಿಬಿರದಲ್ಲಿ ಶಾಸಕನೆಂಬ ಹಮ್ಮು ಬಿಮ್ಮು ತೋರದೇ ಸಾಮಾನ್ಯ ವೈದ್ಯನಾಗಿ ಡಾ. ಎನ್.ಟಿ. ಶ್ರೀನಿವಾಸ್ ಶಿಬಿರದಲ್ಲಿ ನೇತ್ರ ತಪಾಸಣೆ ಮಾಡುವ ಮೂಲಕ ಜನತೆಗೆ ಆರೋಗ್ಯ ಸೇವೆ ಸಲ್ಲಿಸಿ ಜನತೆಯ ಗಮನಸೆಳೆದರು.