ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ,ಸಡಗರದಿಂದ ಆಚರಿಸಲು ನಿರ್ಧಾರ

| Published : Aug 09 2024, 12:31 AM IST

ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ,ಸಡಗರದಿಂದ ಆಚರಿಸಲು ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗ್ಗೆ 9ಕ್ಕೆ ಕಾರ್ಯಕ್ರಮ ನಡೆಯುವ ಬಯಲು ರಂಗ ಮಂದಿರದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಿದ್

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಆ. 15 ರಂದು ಗುರುವಾರ ನಡೆಯಲಿರುವ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲು ತೀರ್ಮಾನಿಸಲಾಯಿತು.

ಪಟ್ಟಣದ ತಾಲೂಕು ಕಚೇರಿಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಶಾಸಕ ಡಿ. ರವಿಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರ ಸಲಹೆ ಪಡೆದು ಅಂತಿಮವಾಗಿ ಈ ನಿರ್ಧಾರ ಕೈಗೊಳ್ಳಲಾಯಿತು.

ಶಾಸಕ ಡಿ. ರವಿಶಂಕರ್ ಮಾತನಾಡಿ, ಅಂದು ಬೆಳಗ್ಗೆ 7.30ಕ್ಕೆ ಪಟ್ಟಣದ ಕೃಷ್ಣರಾಜೇಂದ್ರ ಪದವಿ ಪೂರ್ವ ಕಾಲೇಜಿನ ಬಳಿಯಿಂದ ಪಟ್ಟಣದ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ದೇಶಾಭಿಮಾನಿಗಳ ಸಮ್ಮುಖದಲ್ಲಿ ಪಥಸಂಚಲನ ಆರಂಭಿಸಿ ಅಂಬೇಡ್ಕರ್ ಪುತ್ಥಳಿಯ ಮುಂಭಾಗ ಸಾಗಿ ಹಾಸನ-ಮೈಸೂರು ರಸ್ತೆ ಮೂಲಕ ಪುರಸಭೆ ಬಯಲು ರಂಗ ಮಂದಿರಕ್ಕೆ ಸಾಗಿ ಬರಬೇಕೆಂದು ಸೂಚನೆ ನೀಡಿದರು.

ಬೆಳಗ್ಗೆ 9ಕ್ಕೆ ಕಾರ್ಯಕ್ರಮ ನಡೆಯುವ ಬಯಲು ರಂಗ ಮಂದಿರದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಿ ರಾಷ್ಟ್ರೀಯ ಹಬ್ಬದ ಯಶಸ್ಸಿಗೆ ಹೆಗಲು ಕೊಟ್ಟು ದುಡಿಯಬೇಕೆಂದು ಆದೇಶಿಸಿದರು.

ಪಥ ಸಂಚನಲದಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಬಯಲು ರಂಗ ಮಂದಿರದ ಆವರಣದಲ್ಲಿ ಧ್ವಜಾರೋಹಣಕ್ಕಿಂತ ಮುಂಚಿತವಾಗಿ ಉಪಹಾರ ನೀಡಬೇಕೆಂದು ತಿಳಿಸಿದ ಶಾಸಕರು ಪ್ರತಿಯೊಬ್ಬ ಸರ್ಕಾರಿ ನೌಕರರು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ತಾಕೀತು ಮಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹತ್ತು ಮಂದಿ ಸಾಧಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡುವುದರ ಜತೆಗೆ ಪಟ್ಟಣದ ಎಲ್ಲ ಸರ್ಕಾರಿ ಕಚೇರಿಗಳಿಗೂ ದೀಪಾಲಂಕಾರ ಮಾಡಬೇಕೆಂದು ನುಡಿದ ಅವರು ಅಂಗಡಿ ಮುಗ್ಗಟ್ಟುಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ತಮ್ಮ ಕಟ್ಟಡಗಳಿಗೆ ದೀಪಾಲಂಕಾರ ಮಾಡಿ ರಾಷ್ಟ್ರೀಯ ಹಬ್ಬದ ಮೆರಗನ್ನು ಹೆಚ್ಚಿಸಬೇಕೆಂದು ಹೇಳಿದರು.

ಸಾಲಿಗ್ರಾಮ ತಹಸೀಲ್ದಾರ್ ಎಸ್.ಎನ್. ನರಗುಂದ, ಕೆ.ಆರ್. ನಗರ ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ ಮಾತನಾಡಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ನಿರ್ದೇಶಕ ಕೆ.ಎನ್. ಪ್ರಸನ್ನಕುಮಾರ್, ಪುರಸಭೆ ಸದಸ್ಯ ಪ್ರಕಾಶ್, ಮಾಜಿ ಸದಸ್ಯ ಕೆ. ವಿನಯ್, ಕಾಂಗ್ರೆಸ್ ಮುಖಂಡರಾದ ನಂದೀಶ್, ಕಂಠಿಕುಮಾರ್, ರಾಜಯ್ಯ, ಬಿ.ಎಂ.ಗಿರೀಶ್, ಚಂದ್ರು, ಎಚ್.ಎಸ್. ಸ್ವಾಮಿ, ವಿ. ಸುರೇಶ್, ತಿಮ್ಮಶೆಟ್ಟಿ, ರೈತ ಮುಖಂಡರಾದ ಎಂ.ಜೆ. ಕುಮಾರ್, ಎ. ತಿಮ್ಮೇಗೌಡ, ಬಿಇಒ ಆರ್. ಕೃಷ್ಣಪ್ಪ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ಎಲ್. ವಿನೀತ್ ಇದ್ದರು.