ಶಾಸಕ ಡಿ. ರವಿಶಂಕರ್ ನೀತಿಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ: ಸಾ.ರಾ.ಮಹೇಶ್ ವಾಗ್ದಾಳಿ

| Published : Jun 20 2024, 01:13 AM IST

ಶಾಸಕ ಡಿ. ರವಿಶಂಕರ್ ನೀತಿಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ: ಸಾ.ರಾ.ಮಹೇಶ್ ವಾಗ್ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕರು ಅಭಿವೃದ್ಧಿ ರಾಜಕೀಯ ಮಾಡದಿದ್ದರೂ ಇಂತಹ ಕೆಟ್ಟ ರಾಜಕಾರಣ ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಹೊಸ ಯೋಜನೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ತಂದು ಜನರಿಗೆ ಅನುಕೂಲ ಕಲ್ಪಿಸಿ ಉದ್ಯೋಗ ಸೃಷ್ಟಿ ಮಾಡುವ ಬದಲು ಈಗಾಗಲೇ ಕೆಲಸ ಮಾಡುತ್ತಿರುವ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವುದು ಎಷ್ಟು ಸರಿ.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಕಳೆದ 15 ವರ್ಷಗಳಿಂದ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದ ದಿನಗೂಲಿ ನೌಕರನನ್ನು ಏಕಾಏಕಿ ಸೇವೆಯಿಂದ ವಜಾ ಮಾಡಿಸಿರುವ ಶಾಸಕ ಡಿ. ರವಿಶಂಕರ್ ನೀತಿಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ವಾಗ್ದಾಳಿ ನಡೆಸಿದರು.

ಪಟ್ಟಣದ ಆಡಳಿತ ಸೌಧದ ಎದುರು ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಶಾಸಕರು ಅಭಿವೃದ್ಧಿ ರಾಜಕೀಯ ಮಾಡದಿದ್ದರೂ ಇಂತಹ ಕೆಟ್ಟ ರಾಜಕಾರಣ ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದರು.

ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಹೊಸ ಯೋಜನೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ತಂದು ಜನರಿಗೆ ಅನುಕೂಲ ಕಲ್ಪಿಸಿ ಉದ್ಯೋಗ ಸೃಷ್ಟಿ ಮಾಡುವ ಬದಲು ಈಗಾಗಲೇ ಕೆಲಸ ಮಾಡುತ್ತಿರುವ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕಳೆದ 13 ತಿಂಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಲೋಕೋಪಯೋಗಿ ಇಲಾಖೆಯಲ್ಲಿ 13 ಕಾಮಗಾರಿಗಳಿಗೆ ಸರ್ಕಾರದಿಂದ ಅನುಮೋದನೆ ದೊರೆತಿರುವುದು ಬಿಟ್ಟರೆ ಈ ಹಿಂದೆ ನಾನು ಶಾಸಕನಾಗಿದ್ದಾಗ ತಂದಿದ್ದ ಅನುದಾನದಲ್ಲಿಯೇ ಈವರೆಗೂ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ನುಡಿದರು.

ಭೇರ್ಯ- ಬಟಿಗನಹಳ್ಳಿ- ಮಿರ್ಲೆ ಗ್ರಾಮದ ಸಂಪರ್ಕ ರಸ್ತೆಗೆ ಸರ್ಕಾರದಿಂದ ಹಣ ಮುಂಜೂರಾಗಿ ಟೆಂಡರ್ ಪ್ರಕ್ರಿಯೆ ನಡೆಯದಿದ್ದರೂ ಕಾಮಗಾರಿಗೆ ಚಾಲನೆ ನೀಡಿ ಮತದಾರರ ಕಣ್ಣಿಗೆ ಮಣ್ಣೆರೆಸುವ ಕೆಲಸ ಮಾಡುತ್ತಿದ್ದು, ಅವರ ಈ ಕೆಟ್ಟ ರಾಜಕೀಯವನ್ನು ನೋಡಿ ಕ್ಷೇತ್ರದ ಜನತೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ ಎಂದು ಜರಿದರು.

ಮಾಜಿ ಶಾಸಕರು ಅಭಿವೃದ್ಧಿ ಕೆಲಸದ ವಿಚಾರದಲ್ಲಿ ನನ್ನೊಂದಿಗೆ ಕೈಜೋಡಿಸಲಿ ಎಂಬ ಹೇಳಿಕೆಯನ್ನು ಶಾಸಕರು ನೀಡುತ್ತಿದ್ದು, ಅವರು ಪುರಸಭೆ ವಾಣಿಜ್ಯ ಮಳಿಗೆಯ ಹೊಸ ಬಾಡಿಗೆದಾರರಿಂದ ಕೋಟ್ಯಾಂತರ ರುಪಾಯಿ ಪಡೆದಿದ್ದು, ಆ ಹಣವನ್ನು ಉಳಿಸಿಕೊಳ್ಳಲು ಅವರಿಗೆ ನಾನು ಸಹಕಾರ ನೀಡಬೇಕಾ ಎಂದು ವ್ಯಂಗ್ಯವಾಡಿದರು.

ಕಳೆದ ಒಂದು ವರ್ಷದಿಂದ ಶಾಸಕರು ಕ್ಷೇತ್ರದಲ್ಲಿ ಸ್ವಾತಂತ್ರ್ಯದಿಂದ ಕೆಲಸ ಮಾಡಲಿ ಎಂದು ನಾನು ಮತ್ತು ನಮ್ಮ ಪಕ್ಷದ ಕಾರ್ಯಕರ್ತರು ಸುಮ್ಮನಿದ್ದೇವು, ಆದರೆ ಅವರು ಇದೇ ರೀತಿ ಸೇಡಿನ ರಾಜಕಾರಣ ಮಾಡಿದರೆ ನನಗೆ ಮತ್ತು ನಮ್ಮವರಿಗೂ ಮಾತನಾಡಲು ಬರುತ್ತದೆ ಎಂದು ಎಚ್ಚರಿಕೆ ನೀಡಿದರು.

ಹೊಟ್ಟೆ ಪಾಡಿಗಾಗಿ ವಿದ್ಯಾರ್ಥಿ ನಿಲಯಗಳಲ್ಲಿ ಅಡುಗೆ ಸಹಾಯಕಿಯರಾಗಿ ಕೆಲಸ ಮಾಡುವ ಬಡ ಮಹಿಳೆಯರನ್ನು ಕೆಲಸದಿಂದ ಕಿತ್ತುಹಾಕಿ ಅವರ ಕುಟುಂಬ ಬೀದಿ ಪಾಲಾಗುವಂತೆ ಮಾಡಿರುವ ನೀವು ಯಾವ ಪುರುಷಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದೀರಾ ಎಂದು ಡಿ. ರವಿಶಂಕರ್ ವಿರುದ್ಧ ಹರಿಹಾಯ್ದರು.

ಎಚ್.ಡಿ. ಕುಮಾರಸ್ವಾಮಿ ಅವರು ಕ್ಷೇತ್ರದ ಸಂಸದರು ಮತ್ತು ಕೇಂದ್ರದಲ್ಲಿ ಸಚಿವರಾಗಿರುವುದರಿಂದ ಹೊರ ಗುತ್ತಿಗೆ ನೌಕರರಂದು ಸೇವೆಯಿಂದ ಅಮಾನತು ಮಾಡಿರುವ ವಿಚಾರವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆಯಲ್ಲಿಯೂ ಚರ್ಚಿಸಲಿದ್ದು, ಮುಂದೆ ಇಂತಹ ಅನ್ಯಾಯ ನಡೆದರೆ ನಾನು ನಿರಂತರವಾಗಿ ಬೀದಿಗಿಳಿದು ನೊಂದವರ ಪರವಾಗಿ ಹೋರಾಟ ಮಾಡುತ್ತೇನೆಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನೌಕರರು ಮಾತನಾಡಿ, ತಮ್ಮ ಅಳಲನ್ನು ತೋಡಿಕೊಂಡರಲ್ಲದೆ, ಹೀಗಾದರೆ ನಮ್ಮ ಕುಟುಂಬ ನಿರ್ವಹಣೆ ಮಾಡುವ ಪರಿ ಹೇಗೆ ಎಂದು ನುಡಿದು ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಅವರ ಬಳಿ ಬೇಡಿಕೊಂಡರು.

ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿದ ಎಡಿಸಿ ಶಿವರಾಜು ಮಾಜಿ ಸಚಿವ ಸಾ.ರಾ. ಮಹೇಶ್ ಮತ್ತು ವಿಧಾನ ಪರಿಷತ್ ಸಿ.ಎನ್. ಮಂಜೇಗೌಡ ಅವರಿಂದ ಮನವಿ ಸ್ವೀಕರಿಸಿ ಮಾತನಾಡಿ, ಈ ವಿಚಾರವನ್ನು ಇಂದು ಸಂಜೆ ನಾನು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನು ಚೌಕಟ್ಟಿನೊಳಗೆ ಸೇವೆಯಿಂದ ವಜಾಗೊಂಡಿರುವ ಹೊರಗುತ್ತಿಗೆ ನೌಕರರನ್ನು ಮರು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಜಿಪಂ ಮಾಜಿ ಸದಸ್ಯರಾದ ಎಂ.ಟಿ. ಕುಮಾರ್, ಸಿ.ಜೆ. ದ್ವಾರಕೀಶ್, ತಾಪಂ ಮಾಜಿ ಸದಸ್ಯ ಶ್ರೀನಿವಾಸಪ್ರಸಾದ್, ಕೆ.ಆರ್. ನಗರ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ‌.ಕುಮಾರ್, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಮೆಡಿಕಲ್ ರಾಜಣ್ಣ, ಯುವ ಜೆಡಿಎಸ್ ಅಧ್ಯಕ್ಷರಾದ ಕರ್ತಾಳು ಮಧು, ಡಿ.ವಿ. ಗುಡಿ ಯೋಗೇಶ್, ವಕ್ತಾರ ಕೆ.ಎಲ್. ರಮೇಶ್, ಜಿಲ್ಲಾ ಜೆಡಿಎಸ್ ಮುಖಂಡ ಎಚ್.ಕೆ. ಮಧುಚಂದ್ರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದಾಕ್ಷಾಯಿಣಿ, ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ನಂದಿನಿ ರಮೇಶ್, ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಕೆಗ್ಗೆರೆಕುಚೇಲ, ತಾಲೂಕು ಅಧ್ಯಕ್ಷೆ ರಾಜಲಕ್ಷ್ಮಿ, ನಗರಾಧ್ಯಕ್ಣೆ ಭಾಗ್ಯಮ್ಮ, ನಗರ ಕಾರ್ಯದರ್ಶಿ ರುದ್ರೇಶ್, ಕಾರ್ಯದರ್ಶಿ ರೂಪಸತೀಶ್, ಪುರಸಭೆ ಸದಸ್ಯರಾದ ಉಮೇಶ್, ಸಂತೋಷ್ ಗೌಡ, ಕೆ.ಎಲ್. ಜಗದೀಶ್, ಮಾಜಿ ಸದಸ್ಯರಾದ ಕೆ.ಎಸ್. ರೇವಣ್ಣ, ಕೆ.ಆರ್. ಗಿರೀಶ್, ರಾಜ ಶ್ರೀಕಾಂತ್, ಸುಬ್ರಹ್ಮಣ್ಯ, ಜೆಡಿಎಸ್ ಮುಖಂಡರಾದ ಎಂ.ಎಸ್. ಕಿಶೋರ್, ಅನಿಪ್ ಗೌಡ, ರಮೇಶ್, ತ್ಯಾಗರಾಜು, ಬಿ. ರಮೇಶ್, ಎಚ್.ಎಸ್. ಜಗದೀಶ್, ಎಚ್.

ಟಿ.ರಾಜೇಶ್, ಸಿ.ಬಿ. ಲೋಕೇಶ್, ಬಾಲಾಜಿ ಗಣೇಶ್, ಎಚ್.ಕೆ. ಕೀರ್ತಿ, ಬಿ.ಆರ್. ಕುಚೇಲ, ಪುಟ್ಟರಾಜು, ಶಂಭು, ಹರೀಶ್, ಸೂರಿ, ಎಚ್.ಆರ್. ಮಧುಚಂದ್ರ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.