ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಕೆಸರು ಬಳಿದು ಅಪಮಾನ ಮಾಡಿರುವ ಘಟನೆ ಬುಧವಾರ ರಾತ್ರಿ ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಜರುಗಿದೆ.ಕೆಲ ತಿಂಗಳ ಹಿಂದೆ ಇದೇ ಗ್ರಾಮದ ವೃತ್ತವೊಂದರಲ್ಲಿ ಅಂಬೇಡ್ಕರ್ ನಾಮಫಲಕ ನೆಡುವ ವಿಚಾರದಲ್ಲಿ ಗ್ರಾಮದ ಪ. ಜಾತಿ ಮತ್ತು ಪಂಗಡದ ಜನರ ನಡುವೆ ತಕರಾರು ಉಂಟಾಗಿ, ನಾಮಫಲಕ ಅಳವಡಿಸಿದ್ದ ಪ. ಜಾತಿಯವರ ಮನೆಗಳ ಮೇಲೆ ಪ. ಪಂಗಡದ ಜನಾಂಗದ ಮಂದಿ ಹಲ್ಲೆ ನಡೆಸಿ, ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಪ್ರಕರಣ ಸಂಬಂಧ ಸುಮಾರು 30 ಹೆಚ್ಚು ಮಂದಿಯ ಮೇಲೆ ದೂರು ದಾಖಲಾಗಿತ್ತು.ಸ್ಥಳೀಯ ಶಾಸಕ ದರ್ಶನ್ ಧ್ರುವನಾರಾಯಣ ಹಾಗೂ ಎಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ಶಾಂತಿ ಸಭೆ ನಡೆಸಿ, ಅಂಬೇಡ್ಕರ್ ಭಾವಚಿತ್ರ ಇರುವ ನಾಮಫಲಕವನ್ನು ಅನಾವರಣಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.ಇದೇ ಅಂಬೇಡ್ಕರ್ ಭಾವಚಿತ್ರವಿರುವ ನಾಮಫಲಕ್ಕೆ ಬುಧವಾರ ರಾತ್ರಿ ಕಿಡಿಗೇಡಿಗಳು ಕೆಸರು ಬಳಿದು ವಿಕೃತಿ ಮೆರೆದು ಅಪಮಾನಗೊಳಿಸಿದ್ದಾರೆ.ಸ್ಥಳಕ್ಕೆ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಡಿವೈಎಸ್ಪಿ ರಘು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಿಸಿಟಿವಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.ಇನ್ನು ವಿಷಯ ತಿಳಿದ ಗ್ರಾಮಸ್ಥರು ಕೆಸರು ಬಳಿದು, ಭಾವಚಿತ್ರವನ್ನು ಹರಿದು ವಿಕೃತಿ ಮೆರೆದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ನಾಮಫಲಕದ ಮುಂದೆ ಪ್ರತಿಭಟಿಸಿದರು.ಡಿವೈಎಸ್ಪಿ ರಘು ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ಗ್ರಾಮದಲ್ಲಿ ರಾಷ್ಟ್ರೀಯ ನಾಯಕರನ್ನು ಅಪಮಾನಗೊಳಿಸಿರುವ ದುರ್ಘಟನೆ ಖಂಡನಿಯ, ಗ್ರಾಮದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯನ್ನು ಪರಿಶೀಲಿಸಿ ಕೃತ್ಯವೆಸಗಿರುವ ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು, ನೀವು ಪ್ರತಿಭಟನೆ ಮುಂದುವರಿಸಿದ್ದಲ್ಲಿ ಭದ್ರತೆಗಾಗಿ ಹೆಚ್ಚಿನ ಪೊಲೀಸರು ಇಲ್ಲೇ ನಿಯೋಜನೆಗೊಂಡು ನಿಮಗೆ ರಕ್ಷಣೆ ಕೊಡುತ್ತಾ ನಾವು ಕಾಲ ಕಳೆಯಬೇಕಾಗುತ್ತದೆ, ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಆರೋಪಿಗಳನ್ನು ಪತ್ತೆ ಹಚ್ಚುವಂತಹ ಕೆಲಸ ಮಾಡಲು ನೀವು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಈ ವೇಳೆ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ತಾಲೂಕಿನಲ್ಲಿ ದಲಿತರ ಮೇಲೆ ಪದೇ ಪದೇ ದೌರ್ಜನ್ಯಗಳು ಹೆಚ್ಚಾಗುತ್ತಿರುವುದು ಖಂಡನಿಯ, ಗ್ರಾಮದಲ್ಲಿ ದಲಿತರು ಅಂಬೇಡ್ಕರ್ ವಿಚಾರವಾಗಿ ಕಲ್ಲು ಹೊಡೆಸಿಕೊಂಡು, ಹಲ್ಲೆಗೆ ಒಳಗಾಗಿ ಸಾಕಷ್ಟು ನೋವು ಅನುಭವಿಸಿದ್ದಾರೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮವಹಿಸಲು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಟ್ಟದ ಅಧಿಕಾರಿಗಳು ನ್ಯಾಯ ಒದಗಿಸುತ್ತೀರಿ ಎಂಬ ಭರವಸೆಯೊಂದಿಗೆ ಗ್ರಾಮಸ್ಥರನ್ನು ಮನವೊಲಿಸಿದ್ದು, ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಮುಂದಿನ ಒಂದು ವಾರದ ಗಡುವಿನ ಒಳಗೆ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿ ಪಡಿಸದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.ಮುಂಜಾಗ್ರತಾ ಕ್ರಮವಾಗಿ 6 ಮಂದಿ ಇನ್ಸ್ ಪೆಕ್ಟರ್, 9 ಎಸ್ಐ, 45 ಮಂದಿ ಪೊಲೀಸ್ ಸಿಬ್ಬಂದಿ, 10 ಗಾರ್ಡ್ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ನಾಗೇಂದ್ರ, ಗ್ರಾಮಸ್ಥರು ಮತ್ತು ಮುಖಂಡರು ಇದ್ದರು.ನಾಗರೀಕ ಸಮಾಜ ತಲೆ ತಗ್ಗಿಸುವ ಸಂಗತಿ: ದರ್ಶನ್ಘಟನೆ ಸಂಬಂಧ ಶಾಸಕ ದರ್ಶನ್ ಧ್ರುವನಾರಾಯಣ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಹಲ್ಲರೆ ಗ್ರಾಮದಲ್ಲಿ ನೆನ್ನೆ ರಾತ್ರಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಣ್ಣು ಬಳಿದು ಅಪಮಾನ ಮಾಡಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವ ಸಂಗತಿ. ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನ, ನಮ್ಮ ಸಂವಿಧಾನ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳ ಮೇಲಿನ ಹಲ್ಲೆಯಾಗಿದೆ ಎಂದು ಖಂಡಿಸಿದರು.ಇಂತಹ ಮಹಾನಾಯಕರಿಗೆ ಅವಮಾನಿಸಿರುವುದು ದೇಶದ್ರೋಹ ಕೃತ್ಯ. ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ, ಈ ಘಟನೆಯ ವಿಷಯ ತಿಳಿದ ಕೂಡಲೇ ಪೊಲೀಸ್ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಕೃತ್ಯವೆಸಗಿದ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ, ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಿ ಕಠಿಣವಾದ ಶಿಕ್ಷೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು.