ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಲಕ್ಷ್ಮೀಸಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅಂದಾಜು 4.20 ಕೋಟಿ ರು. ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.ಲಕ್ಷ್ಮೀಸಾಗರ ಗ್ರಾಮದಲ್ಲಿ 2.50 ಕೋಟಿ ರು, ಮಹದೇಶ್ವರಪುರ ಗ್ರಾಮದಲ್ಲಿ 1.20 ಕೋಟಿ ರು., ನೀಲನಹಳ್ಳಿಯಲ್ಲಿ 25 ಲಕ್ಷ ರು. ಹಾಗೂ ಸಣಬ ಗ್ರಾಮದಲ್ಲಿ 25 ಲಕ್ಷ ರು. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸರ್ಕಾರದ ವಿಶೇಷ ಯೋಜನೆಯಲ್ಲಿ ಅಂದಾಜು 4.20 ಕೋಟಿ ರು. ವೆಚ್ಚದಲ್ಲಿ ಒಂದು ಗ್ರಾಪಂ ವ್ಯಾಪ್ತಿಯ ವಿವಿಧ ಹಳ್ಳಿಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದೇವೆ. ಗ್ರಾಮಗಳು ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಗ್ರಾಮಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.ವಿಸಿ ನಾಲೆ ಏರಿಯಗಳ ಮೇಲೆ ತಡೆಗೋಡೆ ನಿರ್ಮಿಸಲು ಈಗಾಗಲೇ ಕ್ರಮ ವಹಿಸಲಾಗಿದೆ. ವಿಸಿ ನಾಲೆ ಆಧುನೀಕರಣದ ಜತೆಯಲ್ಲಿಯೇ ತಡೆಗೋಡೆಗಳ ನಿರ್ಮಾಣವು ಮಂಜೂರಾಗಿದೆ. ನಾಲೆ ಆಧುನೀಕರಣ ಸ್ಥಗಿತಗೊಂಡಿರುವ ಕಾರಣದಿಂದಾಗಿ ತಡೆಗೋಡೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ತ್ವರಿತವಾಗಿ ತಡೆಗೋಡೆ ನಿರ್ಮಿಸಲು, ಸಿಡಿಎಸ್ ನಾಲೆಗಳಿಗೂ ಸಹ ತಡೆಗೋಡೆ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಸಣಬ ಗ್ರಾಮದಲ್ಲಿ ರಸ್ತೆ ಪೂಜೆ ನೆರವೇರಿಸಲು ಆಗಮಿಸಿದ ಶಾಸಕರು, ಕೆಲವು ಮಹಿಳೆಯರು ಗ್ರಾಮದಲ್ಲಿ ಮಧ್ಯ ಮಾರಾಟ ಹೆಚ್ಚಾಗಿದೆ. ಇದರಿಂದ ಕುಟುಂಬ ಹಾಳಾಗುತ್ತಿವೆ. ಹಾಗಾಗಿ ಮದ್ಯ ಮಾರಾಟ ಸ್ಥಗಿತಕ್ಕೆ ಕ್ರಮವಹಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.ಪ್ರತಿಕ್ರಿಯಿಸಿದ ಶಾಸಕರು ನಾನು ಈಗಾಗಲೆ ಅಕ್ರಮ ಮಧ್ಯೆ ಮಾರಾಟಕ್ಕೆ ಕಡಿವಾಣ ಹಾಕಲು ಅಬಕಾರಿ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳು ಒಂದೆರಡು ದಿನ ಬಂದು ಮಧ್ಯೆ ಮಾರಾಟ ಸ್ಥಗಿತಗೊಳಿಸಬಹುದು. ಇದು ಅದಕ್ಕೆ ಶಾಶ್ವತ ಪರಿಹಾರವಲ್ಲ, ಮಧ್ಯೆ ಮಾರಾಟ ಸ್ಥಗಿತಕ್ಕೆ ಗ್ರಾಮಸ್ಥರೆ ಒಗ್ಗಡಿ ಕೆಲಸ ಮಾಡಬೇಕು ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಮೀನಾಕ್ಷಮ್ಮ, ಉಪಾಧ್ಯಕ್ಷ ಕೆಂಪೇಗೌಡ, ಸದಸ್ಯರಾದ ಎಲ್.ಸಿ.ಕುಮಾರ್, ಭಾರತಿ, ಚಂದ್ರಕಲಾ, ಜಯಲಕ್ಷ್ಮಿ ಮುಖಂಡರಾದ ರಂಗಸ್ವಾಮಿ ಎಲ್.ಸಿ.ರಾಜಣ್ಣ, ಎಲ್.ಎಸ್.ಜಗದೀಶ್, ಎಲ್.ಡಿ.ಸಂಜಯ್, ಎಲ್.ಬಿ.ರವಿ, ಸತೀಶ್, ದೇವರಾಜು, ಮಂಜುನಾಥ್, ಪುಟ್ಟ, ತಿಮ್ಮೇಗೌಡ, ಅಶೋಕ್, ಅರಸು ಮಹೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ವಿನುತ, ಶಿವಣ್ಣ, ಮಹೇಶ್, ಬೆಟ್ಟೇಗೌಡ, ಯೋಗರಾಜು ಸೇರಿದಂತೆ ಆಯಾ ಗ್ರಾಮದ ಜಯಮಾನರು, ಮುಖಂಡರು ಭಾಗವಹಿಸಿದ್ದರು.