ಮತ್ತೆ ಅಮೆರಿಕಾಗೆ ತೆರಳಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ..!

| Published : May 05 2024, 02:06 AM IST

ಮತ್ತೆ ಅಮೆರಿಕಾಗೆ ತೆರಳಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ..!
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷೇತ್ರದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಡುತ್ತಿದೆ. ಶಾಸಕರು ಕ್ಷೇತ್ರದಲ್ಲಿ ಇದ್ದಾಗಲೇ ಅಧಿಕಾರಿಗಳು ಸಾರ್ವಜನಿಕರು, ರೈತ ಸಮಸ್ಯೆಗಳನ್ನು ಆಲಿಸುವುದು ಕಷ್ಟ. ಇನ್ನೂ ಅಮೆರಿಕಾಗೆ ತೆರಳಿದರೆ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಲು ಸಾಧ್ಯವೇ?.

ಕನ್ನಡಪ್ರಭ ವಾರ್ತೆ ಪಾಂಡವಪುರ

ಭೀಕರ ಬರಗಾಲದಿಂದ ಕ್ಷೇತ್ರದ ಜನತೆ, ರೈತ ಸಮುದಾಯ ಸಂಕಷ್ಟದಲ್ಲಿರುವಾಗ ಜನರೊಂದಿಗೆ ಇದ್ದು ಸಮಸ್ಯೆ ಪರಿಹರಿಸಬೇಕಾದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತೆ ಅಮೆರಿಕಾಕ್ಕೆ ತೆರಳಿದ್ದಾರೆ.

ಮೇಲುಕೋಟೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ 11 ತಿಂಗಳಲ್ಲಿ 6ನೇ ಬಾರಿಗೆ ದರ್ಶನ್ ಪುಟ್ಟಣ್ಣಯ್ಯ ಅವರು ಅಮೆರಿಕಾಗೆ ತೆರಳಿದ್ದು ಸಾರ್ವಜನಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಮಾ.22ರಂದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆ ನಡೆಸಿ ಅಂದೇ ಸಂಜೆ ಅಮೆರಿಕಾಗೆ ತೆರಳಿದ್ದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚುನಾವಣೆ ಸಂದರ್ಭದಲ್ಲಿ ವಾಪಸ್ಸಾಗಿದ್ದರು. ಬಳಿಕ ಮತದಾನ ಮುಗಿಯುತ್ತಿದ್ದಂತೆಯೇ ಮತ್ತೆ ಅಮೆರಿಕಾಗೆ ತೆರಳಿದ್ದಾರೆ.

ವಿಡಿಯೋ ಕಾಲ್ ಮೂಲಕ ರೈತಸಂಘ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಮತದಾನ ಮಾಡಿದ ಬಗ್ಗೆ ಕೃತಜ್ಞತೆ ಸಲ್ಲಿಸಿ ಫ್ಲೈಟ್ ಏರಿದ್ದಾರೆ. ಕಳೆದ ಚುನಾವಣೆ ವೇಳೆ ಅಮೆರಿಕಾದಲ್ಲಿರುವ ಎಲ್ಲಾ ಕಂಪನಿ ಮಾರಾಟ ಮಾಡಿ ವಾಪಸ್ಸಾಗಿದ್ದೇನೆ. ಮತ್ತೆ ಅಮೆರಿಕಾಗೆ ಹೋಗಲ್ಲ. ಇಲ್ಲಿಯೇ ಇದ್ದು ಜನರ ಸೇವೆ ಮಾಡುತ್ತೇನೆ ಎಂದು ಕ್ಷೇತ್ರದ ಮತದಾರರಿಗೆ ಅಭಯ ನೀಡಿದ್ದರು.

ಆದರೆ, ಚುನಾವಣೆಯಲ್ಲಿ ಗೆದ್ದ ಕೇವಲ ಒಂದು ವರ್ಷದಲ್ಲಿಯೇ 6 ನೇ ಬಾರಿಗೆ ಶಾಸಕರು ಅಮೆರಿಕಾಗೆ ತೆರಳಿರುವುದಕ್ಕೆ ಕ್ಷೇತ್ರದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

ಕ್ಷೇತ್ರದ ಜನತೆ ಭೀಕರ ಬರಗಾಲದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಜನ-ಜಾನುವಾರುಗಳು ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಕುಡಿಯುಲು ನೀರಿಲ್ಲದೆ ಜನರು ಪರದಾಡುವಂತಾಗಿದೆ. ಕೆರೆಕಟ್ಟೆಗಳು ಒಣಗಿವೆ. ಬೆಳೆ ಒಣಗುತ್ತಿದ್ದು ರೈತರು ಸಂಕಷ್ಟದಲ್ಲಿದ್ದಾರೆ.

ಇಂತಹ ಸಂದಿಗ್ನಿ ಪರಿಸ್ಥಿತಿಯಲ್ಲಿ ಕ್ಷೇತ್ರದಲ್ಲಿಯೇ ಇದ್ದು ಜನರ ಕಷ್ಟ ಸುಖಗಳನ್ನು ಆಲಿಸಿ ಜನರ ಸಮಸ್ಯೆಗೆ ಸ್ಪಂಧನೆ ನೀಡಬೇಕಿದ್ದ ಶಾಸಕರು ಪದೇಪದೇ ಅಮೆರಿಕಾ ತೆರಳಿ ಕುಳಿತುಕೊಂಡರೆ ಕ್ಷೇತ್ರದಲ್ಲಿ ಜನರ ಕಷ್ಟಗಳನ್ನು ಕೇಳೋರ್ಯಾರು ಎಂದು ಸಾರ್ವಜನಿಕರು ದೂರಿದ್ದಾರೆ.

ಕ್ಷೇತ್ರದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಡುತ್ತಿದೆ. ಶಾಸಕರು ಕ್ಷೇತ್ರದಲ್ಲಿ ಇದ್ದಾಗಲೇ ಅಧಿಕಾರಿಗಳು ಸಾರ್ವಜನಿಕರು, ರೈತ ಸಮಸ್ಯೆಗಳನ್ನು ಆಲಿಸುವುದು ಕಷ್ಟ. ಇನ್ನೂ ಅಮೆರಿಕಾಗೆ ತೆರಳಿದರೆ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಚುನಾವಣೆ ಮುನ್ನಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಕ್ಷೇತ್ರದಲ್ಲಿಯೇ ಇದ್ದು ಜನರ ಸಮಸ್ಯೆ ಆಲಿಸುತ್ತೇನೆ ಎಂಬ ಮಾತಿನಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.