ಸಾರಾಂಶ
ಹಳಿಯಾಳ: ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು ಶುಕ್ರವಾರ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾಗಿ ದಾಂಡೇಲಿ- ಅಳ್ನಾವರ ಪ್ಯಾಸೆಂಜರ್ ರೈಲು ಸೇವೆಯನ್ನು ಪುನಃ ಪ್ರಾರಂಭಿಸುವಂತೆ ಆಗ್ರಹಿಸಿದರು.ದಾಂಡೇಲಿ ಔದ್ಯೋಗಿಕ ಹಾಗೂ ಕೈಗಾರಿಕಾ ನಗರವಾಗಿದ್ದು, ಮತ್ತೊಂದೆಡೆ ಪ್ರಸಿದ್ಧ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುತ್ತಿದೆ. ದಶಕಗಳ ನಿರೀಕ್ಷೆಯ ಬಳಿಕ 2019ರಲ್ಲಿ ಅಳ್ನಾವರ- ದಾಂಡೇಲಿ(ಅಂಬೇವಾಡಿ) ಪ್ರಾರಂಭಗೊಂಡ ಪ್ಯಾಸೆಂಜರ್ ರೈಲು ಸೇವೆ, ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಸ್ಥಗಿತಗೊಂಡಿತ್ತು.
ಈಗ ರೈಲು ಮಾರ್ಗದ ವಿದ್ಯುದ್ದಿಕರಣ ಕಾರ್ಯ ಪೂರ್ಣಗೊಂಡಿದ್ದು, ಸುಸಜ್ಜಿತ ನಿಲ್ದಾಣದ ಕಟ್ಟಡವು ಸಿದ್ಧವಾಗಿದೆ. ಈ ಹಿಂದೆಯೂ ರೈಲ್ವೆ ಸಚಿವರಿಗೆ ಮತ್ತು ಸಂಬಂದಿಸಿದ ಅಧಿಕಾರಿಗಳಿಗೆ ದಾಂಡೇಲಿ ಪ್ರಯಾಣಿಕ ರೈಲು ಸೇವೆ ಪುನರಾರಂಭಿಸಲು ಮನವಿ ಮಾಡಿದ್ದೆ. ದಾಂಡೇಲಿ- ಅಳ್ನಾವರ ಪ್ಯಾಸೆಂಜರ್ ರೈಲು ಸೇವೆಯನ್ನು ಪುನಃ ಪ್ರಾರಂಭಿಸಲು ಅನುಕೂಲವಾಗುವಂತೆ ಖುದ್ದಾಗಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ರೈಲ್ವೆ ಸಚಿವರಿಗೆ ಕೋರಿರುವುದಾಗಿ, ಅದಕ್ಕೆ ರೈಲ್ವೆ ಸಚಿವರು ಸ್ಪಂದಿಸುವ ಭರವಸೆ ನೀಡಿದರು ಎಂದು ತಿಳಿಸಿದ್ದಾರೆ.ರೈಲ್ವೆ ಸಚಿವರೊಂದಿಗೆ ಆದ ಭೇಟಿಯ ಸಮಯದಲ್ಲಿ ನೈರುತ್ಯ ರೈಲ್ವೆ ಇಲಾಖೆಯ ಡಿಆರ್‌ಎಂ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ತಿಳಿಸಿದ್ದಾರೆ. ಇಂದು ಮುಂಡಗೋಡದಲ್ಲಿ ಬೃಹತ್ ಉದ್ಯೋಗಮೇಳ
ಮುಂಡಗೋಡ: ಯುವ ಸಮೂಹಕ್ಕೆ ಉದ್ಯೋಗ ಅವಕಾಶವನ್ನು ಹೆಚ್ಚಿಸಲು ಬೃಹತ್ ಉದ್ಯೋಗ ಮೇಳವನ್ನು ಅ. ೫ರಂದು ಪಟ್ಟಣದ ಲೊಯೋಲ ವಿಕಾಸ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹೀರೇಹಳ್ಳಿ ಅವರು ಉದ್ಯೋಗ ಮೇಳವನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಟಿವೈಎಸ್‌ವಿ ರಿಕ್ರುಟೆಕ್‌ನ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಜೀವನ ಕುಮಾರ್, ತಾಪಂ ಕಾರ್ಯನಿರ್ವಹನಾಧಿಕಾರಿ ಟಿ.ವೈ. ದಾಸನಕೊಪ್ಪ, ಫಾ. ಗಿಲ್ಬರ್ಟ್ ಸಾಲ್ಡಾನಾ ಮುಂತಾದವರು ಭಾಗವಹಿಸಲಿದ್ದಾರೆ.ಉದ್ಯೋಗ ಮೇಳದಲ್ಲಿ, ಟಿವೈಎಸ್‌ವಿ ರಿಕ್ರುಟೆಕ್, ಟೊಯೋಟಾ, ಹೊಂಡಾ, ಜಿಯೋ, ಅಮೆಜಾನ್, ಮುತ್ತೂಟ್ ಫೈನಾನ್ಸ್, ಎಸ್‌ಬಿಐ ಲೈಫ್, ಕ್ರೆಡಿಟ್ ಅಕ್ಸೆಸ್, ವಿ- ಜಾಬ್ಸ್, ಸಿಎಂಎಸ್, ಎಲ್‌ಐಸಿ ಮುಂತಾದ ಕಾರ್ಪೋರೇಟ್ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗದಾತರು ಸಂದರ್ಶನ ನಡೆಸಲಿದ್ದಾರೆ.ಎಲ್‌ವಿಕೆಯ ಜೀವನೋಪಾಯ ಮತ್ತು ಕೌಶಲಾಭಿವೃದ್ಧಿ ಕೇಂದ್ರ, ತಾಲೂಕಿನ ವಿವಿಧ ಸಮುದಾಯ ಆಧರಿತ ಸಂಘಟನೆಗಳಾದ ಯುವರತ್ನ ವೇದಿಕೆ, ಜನಸ್ಫೂರ್ತಿ ಸ್ವ- ಸಹಾಯ ಸಂಘಗಳ ಒಕ್ಕೂಟ, ಕಟ್ಟಡ ಕಾರ್ಮಿಕರ ಯುನಿಯನ್, ಭೂ- ಹಕ್ಕುದಾರರ ಹಿತರಕ್ಷಣಾ ವೇದಿಕೆ ಹಾಗೂ ಜನವೇದಿಕೆ, ಲೊಯೋಲ ವಿಕಾಸ ಕೇಂದ್ರದ ಸಹಭಾಗಿತ್ವದೊಡನೆ ಆಯೋಜಿಸಲಾಗಿದೆ.