ಮತದಾರರ ಹಕ್ಕುಗಳನ್ನು ಮತ್ತು ಮೌಲ್ಯಗಳನ್ನು ರಕ್ಷಣೆ ಮಾಡಲು ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ದೇಶಕ್ಕೆ ಅತ್ಯುನ್ನತ ಸಂವಿಧಾನವನ್ನು ದೇಶದ ಜನರಿಗೆ ಅರ್ಪಿಸಿದ್ದಾರೆ.

ಶಿರಸಿ: ದೇಶದ ತನಿಖಾ ಸಂಸ್ಥೆಗಳು ಯಾರದ್ದೋ ಒತ್ತಡಕ್ಕೆ ಬಲಿಯಾಗದೇ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಅದೇ ರೀತಿ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯಬಾರದು ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು ಒತ್ತಾಯಿಸಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷಾಂತರ ಮತದಾರರ ಹೆಸರನ್ನು ಸರಿಯಾದ ವಿಳಾಸವಿಲ್ಲವೆಂದು ಮತದಾರರ ಪಟ್ಟಿಯಿಂದ ಹೊರಗೆ ಉಳಿಯುವಂತಾಗಿದೆ. ಕೇಂದ್ರ ಚುನಾವಣೆ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಕೇಂದ್ರದ ಜತೆ ಕೈಜೋಡಿಸಿದ್ದಾರೆ. ಅವರನ್ನು ಕೂಡಲೇ ಚುನಾವಣಾ ಆಯೋಗದ ಹುದ್ದೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.ಮತದಾರರ ಹಕ್ಕುಗಳನ್ನು ಮತ್ತು ಮೌಲ್ಯಗಳನ್ನು ರಕ್ಷಣೆ ಮಾಡಲು ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ದೇಶಕ್ಕೆ ಅತ್ಯುನ್ನತ ಸಂವಿಧಾನವನ್ನು ದೇಶದ ಜನರಿಗೆ ಅರ್ಪಿಸಿದ್ದಾರೆ. ಸಂವಿಧಾನವನ್ನು ಯಾರೂ ಅಲಗಾಡಿಸಲು ಸಾಧ್ಯವಿಲ್ಲ. ಸಂವಿಧಾನದ ಆಶಯಗಳಿಗನುಗುಣವಾಗಿ ಕೆಲಸ ಮಾಡಬೇಕಿದೆ ಎಂದರು.ವೋಟ್ ಚೋರಿ ಆಂದೋಲನವು ದೇಶವ್ಯಾಪಿ ನಡೆಯುತ್ತಿದೆ. ಶಿರಸಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಟಿ. ನಾಯ್ಕ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಆಂದೋಲನದಲ್ಲಿ ನಾನು ಕೂಡ ಭಾಗವಹಿಸಿದ್ದೆ ಎಂದರು.ಈ ಹೋರಾಟ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಮತ್ತು ಮೌಲ್ಯಗಳಿಗಾಗಿ ಹಾಗೂ ಹಕ್ಕು ಬಾಧ್ಯತೆಗಳಿಗಾಗಿ ನಡೆಯುತ್ತಿದೆ. ಅಲ್ಲದೆ ಜಿಲ್ಲೆಯಲ್ಲಿ ಬರಗಾಲ ಯಾವತ್ತೂ ಇರಲಿಲ್ಲ. ಕಳೆದ 15 ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬರಗಾಲ ಕಾಣಿಸಿಕೊಳ್ಳುತ್ತಿದೆ ಎಂದರು.ಜಿಲ್ಲೆಯ 6 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ ಮತ್ತು ಇಂತಹ ಭೀಕರ ಬರಗಾಲದಲ್ಲಿ ಕುಡಿಯುವ ನೀರು ಮತ್ತು ಜನರಿಗೆ ಉದ್ಯೋಗ ನೀಡುವ ಜವಾಬ್ದಾರಿ ಸರ್ಕಾರದ್ದಾಗಿದೆ. ಇದರ ಕುರಿತು ಸರ್ಕಾರ ಸೂಕ್ತವಾದ ನಿರ್ಣಯಗಳನ್ನು ಕೈಗೊಳ್ಳಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ದೀಪಕ್ ಹೆಗಡೆ ದೊಡ್ದೂರು, ತಾಲೂಕು ಗುತ್ತಿಗೆದಾರ ಸಂಘದ ಅಧ್ಯಕ್ಷ ಗಣೇಶ ದಾವಣಗೆರೆ, ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ್ ಶೆಟ್ಟಿ ಸೇರಿದಂತೆ ಅನೇಕರು ಇದ್ದರು.