ಸಾಗರ: ಅತಿವೃಷ್ಟಿಯಿಂದ ಮನೆಕಳೆದುಕೊಂಡ ಕುಟುಂಬಗಳಿಗೆ ನಗರಸಭೆ ವತಿಯಿಂದ ಪರಿಹಾರಧನದ ಚೆಕ್ ಮತ್ತು ವೈಯಕ್ತಿಕ ಧನಸಹಾಯವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ವಿತರಿಸಿದರು.

ಪಟ್ಟಣದ ಗಾಂಧಿನಗರ, ಜೆ.ಸಿ.ರಸ್ತೆ, ಜನ್ನತ್ನಗರ ಇನ್ನಿತರ ಭಾಗಗಳಲ್ಲಿ ಮಳೆಯಿಂದ ಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಹಾರಧನದ ಚೆಕ್ ನೀಡುವ ಜೊತೆಗೆ ಸರ್ಕಾರದಿಂದ ಪರಿಹಾರದ ಭರವಸೆ ನೀಡಿದರು. ಈಚೆಗೆ ಸೊಂಟನೋವಿನಿಂದ ಆತ್ಮಹತ್ಯೆ ಮಾಡಿಕೊಂಡ ಶ್ರೀಧರನಗರದ ೯ನೇ ತರಗತಿ ವಿದ್ಯಾರ್ಥಿ ಆಕಾಶ್ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳುವ ಜೊತೆಗೆ ವೈಯಕ್ತಿಕ ಧನಸಹಾಯ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ, ಮಕ್ಕಳು ಸಮಾಜವನ್ನು ಎದುರಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಆಕಾಶ್‌ನಂತಹ ಮಕ್ಕಳ ಸಾವು ಸಮಾಜವನ್ನು ತಲೆತಗ್ಗಿಸುವಂತೆ ಮಾಡುತ್ತದೆ. ಸೊಂಟ ನೋವು ಎಂದು ಆತ್ಮಹತ್ಯೆ ಮಾಡಿಕೊಂಡಿರುವುದು ಬೇಸರ ತರಿಸಿದೆ. ಎಂತಹ ಆರೋಗ್ಯ ಸಮಸ್ಯೆ ಇದ್ದರೂ ಚಿಕಿತ್ಸೆ ನೀಡಿ ಗುಣಪಡಿಸಲು ಸಾಧ್ಯವಿತ್ತು. ಚಿಕ್ಕವಯಸ್ಸಿನಲ್ಲಿಯೆ ಶಾಲೆಯ ಬಿಡುವಿನ ಅವಧಿಯಲ್ಲಿ ದುಡಿದು ಕುಟುಂಬಕ್ಕೆ ಆಸರೆಯಾಗುತ್ತಿದ್ದ ಆಕಾಶ್ ಸಾವು ಇಡೀ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕುಟುಂಬವನ್ನು ಸಾಕುತ್ತೇವೆ ಎಂದು ಭರವಸೆ ನೀಡಿದ್ದ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಗಮನ ಇರಿಸಿ. ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ. ನಿಮ್ಮ ಸಮಸ್ಯೆ ಏನಾದರೂ ಇದ್ದರೆ ನಮ್ಮ ಗಮನಕ್ಕೆ ತನ್ನಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಲಸೆ ಚಂದ್ರಪ್ಪ, ಅನಿತಾ ಕುಮಾರಿ, ಸುರೇಶ್ ಬಾಬು, ಮಂಡಗಳಲೆ ಗಣಪತಿ, ಸೈಯದ್ ಜಾಕೀರ್, ರವಿಕುಮಾರ್, ತಾರಾಮೂರ್ತಿ, ಪೌರಾಯುಕ್ತ ಎಚ್.ಕೆ.ನಾಗಪ್ಪ ಇನ್ನಿತರರು ಹಾಜರಿದ್ದರು.