ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ರೈತರ ಹೊಲಗಳಲ್ಲಿ ಬೆಳೆದ ಮುಂಗಾರು ಬೆಳೆಗಳು ಮಳೆಯ ಕೊರತೆಯಿಂದಾಗಿ ಸಾಕಷ್ಟು ಬೆಳೆ ಹಾನಿಯಾಗಿ ರೈತರು ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ತಾಲೂಕಿನಲ್ಲಿ ಮಳೆ ಅಭಾವದಿಂದ ಶೇ.75ರಷ್ಟು ಬೆಳೆ ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ‌ ಸಲ್ಲಿಸಿದ್ದಾರೆ. ಆದರೆ ವಿಮಾ ಕಂಪನಿಗಳು ಮಧ್ಯಂತರ ಬೆಳೆ ಪರಿಹಾರ ರೈತರಿಗೆ ನೀಡುತ್ತಿಲ್ಲ. ಈ ಕುರಿತು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಶಾಸಕ ಡಾ.ಅವಿನಾಶ ಜಾಧವ್ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನ ನರನಾಳ ಗ್ರಾಮಕ್ಕೆ ಭೇಟಿ ರೈತರ ತೊಗರಿ ಬೆಳೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಂಚೋಳಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಸರಾಸರಿ ಮಳೆಯಾಗದೆ‌ ಇರುವುದರಿಂದ ರೈತರು ಬೆಳೆದ ಬೆಳೆಗಳು ಹೆಸರು, ಉದ್ದು ತೊಗರಿ ಸೋಯಾ ಮೆಕ್ಕೆಜೋಳ ಇನ್ನಿತರ ಬೆಳೆಗಳು ಸಂಪೂರ್ಣವಾಗಿ ಹಾನಿಗೊಂಡಿವೆ ಎಂದು ಈಗಾಗಲೇ ತಾಲೂಕು ಕೃಷಿ ಇಲಾಖೆ ವತಿಯಿಂದ ಸರ್ಕಾರಕ್ಕೆ ಮತ್ತು ವಿಮಾ ಕಂಪನಿಗೆ ವರದಿ ಸಲ್ಲಿಸಿದ್ದಾರೆ. ಆದರೆ ವಿಮಾ ಕಂಪನಿಯವರು ಸರ್ಕಾರಕ್ಕೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದು ತಿಳಿಸಿದರು.

ಚಿಮ್ಮನಚೋಡ್ ನಾಗರಾಳ ಇನ್ನಿತರ ತಾಲೂಕಿನ ಗ್ರಾಮಗಳಲ್ಲಿ ರೈತರು ಬೆಳೆ ಹಾನಿಯಾಗಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ನಮ್ಮ ತಾಲೂಕಿನಲ್ಲಿ ರೈತರು ಬೆಳೆ ಹಾನಿ ಆಗಿದ್ದರೂ ಸಹ ಬೆಳೆ ವಿಮೆ ಪರಿಹಾರ ಹಾಗೂ ಮಧ್ಯಂತರ ಪರಿಹಾರ ಬಂದಿಲ್ಲ ಈ ಕುರಿತು ಜಿಲ್ಲಾಧಿಕಾರಿಗೆ ಭೇಟಿಯಾಗಿ ತಾಲೂಕಿನ ರೈತರ ಸಮಸ್ಯೆ ಬೆಳೆಹಾನಿ ವಿಮೆ ಪರಿಹಾರ ನೀಡುವಂತೆ ತಿಳಿಸುತ್ತೇನೆ. ಅಲ್ಲದೆ ಮುಖ್ಯಮಂತ್ರಿಗೆ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಭೇಟಿ ಮಾಡಿ ಹಿಂದುಳಿದ ಪ್ರದೇಶದ ರೈತರ ಸಮಸ್ಯೆಗೆ ಸ್ಪಂದಿಸುವಂತೆ ಹಾಗೂ ಬೆಳೆ ಹಾನಿ ವಿಮೆ ಪರಿಹಾರ ನೀಡುವಂತೆ ಮನವಿ ಸಲ್ಲಿಸುತ್ತೇನೆ ಎಂದು ಹೇಳಿದರು.

ತಾಲೂಕು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಥೋಡ್ ಮಾತನಾಡಿ, ತಾಲೂಕಿನಲ್ಲಿ ರೈತರು ಬೆಳೆ ಹಾನಿ ಮತ್ತು ಮಳೆ ಕೊರತೆಯಿಂದ ಬಿತ್ತನೆ ಸರಿಯಾಗಿ ಆಗಿಲ್ಲ. ಬೆಳೆ ವಿಮೆಯ ಬಗ್ಗೆ ಮತ್ತು ಬೆಳೆ ಹಾನಿಯ ಬಗ್ಗೆ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಿಗೆ ಸಲ್ಲಿಸಲಾಗಿದೆ ಎಂದು ಶಾಸಕರಿಗೆ ತಿಳಿಸಿದರು. ಚಿಮ್ಮನಚೋಡ ರೈತ ಸಂಪರ್ಕ ಕೃಷಿ ಅಧಿಕಾರಿ ಅಭಿಷೇಕ್‌ ಸುಬೇದಾರ್, ಚಿಂಚೋಳಿ ರೈತ ಸಂಪರ್ಕ ಕೃಷಿ ಅಧಿಕಾರಿ ಇಮ್ರಾನ್ ಅಲಿ ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಭಾಗವಹಿಸಿದರು.