ಸಾರಾಂಶ
ಕಾಂಗ್ರೆಸ್ ಮಾಜಿ ಶಾಸಕ ಎ.ವಿ.ಉಮಾಪತಿ ಅವರಿಗೂ ಶಾಸಕ ಎಂ.ಚಂದ್ರಪ್ಪ ಅವರು ಅಯೋಧ್ಯೆ ರಾಮಮಂದಿರದ ಮಂತ್ರಾಕ್ಷತೆ, ಕರಪತ್ರ ವಿತರಿಸಿದರು.
ಕನ್ನಡಪ್ರಭವಾರ್ತೆ ಹೊಳಲ್ಕೆರೆಆಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಪಟ್ಟಣದ ಬಸವಾ ಲೇಔಟ್‌ನಲ್ಲಿ ಶಾಸಕ ಎಂ.ಚಂದ್ರಪ್ಪ ಮಂತ್ರಾಕ್ಷತೆ ಹಾಗೂ ಕರಪತ್ರ ವಿತರಿಸಿದರು.
ನಂತರ ಮಾತನಾಡಿದ ಅವರು, ಆಯೋಧ್ಯೆ ಹಿಂದೂಗಳ ಪವಿತ್ರ ಕ್ಷೇತ್ರ. 500 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಮಮಂದಿರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವಧಿಯಲ್ಲಿ ಸಾಕಾರಗೊಂಡಿದೆ. ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ದೈವಸ್ವರೂಪಿ ಎಂದು ಬಣ್ಣಿಸಿದ್ದಾರೆ. ಕೋಟ್ಯಂತರ ಹಿಂದೂಗಳ ದೇಣಿಗೆಯಿಂದ ರಾಮಮಂದಿರ ನಿರ್ಮಾಣ ಆಗುತ್ತಿದೆ. ನಾನೂ ಕೂಡ 11,11,111 ದೇಣಿಗೆ ನೀಡಿದ್ದೇನೆ ಎಂದರು.ಮಂದಿರ ನಿರ್ಮಾಣದಿಂದ ಆಯೋಧ್ಯೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಲಿದೆ. ರಾಮಜನ್ಮಭೂಮಿಗೆ ತನ್ನದೇ ಆದ ಪಾವಿತ್ರ್ಯ ಇದೆ. ಮೋದಿ ಅವರು ಆಯೋಧ್ಯೆಯ ವಿಮಾನ ನಿಲ್ದಾಣಕ್ಕೆ ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ಹೆಸರಿಡುವ ಮೂಲಕ ಅವರ ಹೆಸರು ಚಿರಸ್ಥಾಯಿ ಮಾಡಿದ್ದಾರೆ. ಜ 22ರಂದು ಪ್ರತಿ ಮನೆಯಲ್ಲಿ ದೀಪ ಹಚ್ಚಿ ಶ್ರೀ ರಾಮನನ್ನು ಪೊಜೆಸುವಂತೆ ಮನವಿ ಮಾಡಿದರು.
ಶಾಸಕ ಎಂ.ಚಂದ್ರಪ್ಪ ಅವರು ಕಾಂಗ್ರೆಸ್ ಮಾಜಿ ಶಾಸಕ ಎ.ವಿ.ಉಮಾಪತಿ ಅವರಿಗೆ ಮಂತ್ರಾಕ್ಷತೆ ವಿತರಿಸಿದರು. ರಾಮ ಎಲ್ಲರಿಗೂ ದೇವರು. ಇದರಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪ್ರಶ್ನೆ ಬರುವುದಿಲ್ಲ ಎಂದು ಉಮಾಪತಿ ಅಭಿಪ್ರಾಯ ವ್ಯಕ್ತಪಡಿಸಿದರು.ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎಂ.ಬಿ. ಸಿದ್ದೇಶ್, ಪ್ರಧಾನ ಕಾರ್ಯದರ್ಶಿ ರೂಪಾ ಸುರೇಶ್, ಪ್ರವೀಣ್, ಮರುಳಸಿದ್ದಪ್ಪ, ಗಿರೀಶ್ , ಲೋಕೇಶ್, ಮಾರುತೇಶ್ .ರಾಜಪ್ಪ ,ಇತರರು ಇದ್ದರು.