ಸಾರಾಂಶ
ಕನ್ನಡಪ್ರಭ ವಾರ್ತೆ ಹುಮನಾಬಾದ್
ಬೇಸಿಗೆ ಹಿನ್ನೆಲೆ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮೇವು ಬ್ಯಾಂಕ್ ತೆರೆಯಲು ಕಾರ್ಯಯೋಜನೆ ರೂಪಿಸಿಕೊಳ್ಳುವಂತೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ತಿಳಿಸಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಬೇಸಿಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಹುಮನಾಬಾದ ಕ್ಷೇತ್ರದ ಹುಮನಾಬಾದ, ಚಿಟ್ಟಗುಪ್ಪ ಹಾಗೂ ಬಸವಕಲ್ಯಾಣ ತಹಸೀಲ್ದಾರ, ತಾ.ಪಂ ಅಧಿಕಾರಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿ. ಜನತೆಗೆ ಸ್ಪಂದನೆ ನೀಡದಿದ್ದಲ್ಲಿ ಜನತೆಗೆ ತಪ್ಪು ಸಂದೇಶದಿಂದ ಎಲ್ಲರಿಗೂ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಜನತೆಗೆ ಕುಡಿಯುವ ನೀರು ಪೂರೈಸುವ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಕ್ಷೇತ್ರದ ಬೇರೆ ಬೇರೆ ಕಡೆಗಳಲ್ಲಿ ಕುಡಿಯುವ ನೀರಿನ ತೊಂದರೆ ಕುರಿತು ಮಾಹಿತಿ ಬಂದ ತಕ್ಷಣ ಅದಕ್ಕೆ ತುರ್ತು ಸ್ಪಂದನೆ ನೀಡಬೇಕು. ಕುಡಿಯುವ ನೀರಿನ ಬಗ್ಗೆ ದೂರುಗಳು ಬರದ ಹಾಗೆ ಆಯಾ ತಾಲೂಕಿನ ತಹಸೀಲ್ದಾರರು ಮತ್ತು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ವಿಶೇಷ ಗಮನ ಹರಿಸಬೇಕು. ನೀರಿನ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ತಮ್ಮ ಹಂತದಲ್ಲಿ ಗ್ರಾಮವಾರು ಪರಿಶೀಲನೆ ನಡೆಸಬೇಕು. ಸಣ್ಣಪುಟ್ಟ ದುರಸ್ತಿ ಇರುವುದನ್ನು ವಾರದೊಳಗೆ ಸರಿಪಡಿಸಿ, ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕ ಕಾರ್ಯನಿರ್ವಹಿಸುವಂತೆ ಗಮನ ಹರಿಸಬೇಕು ಎಂದು ಗ್ರಾಮೀಣ ಕುಡಿವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಗಡುವು ವಿಧಿಸಿದರು.ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಮಾತನಾಡಿ, ಪ್ರತಿ ಹಳ್ಳಿಹಳ್ಳಿಗಳಲ್ಲಿ ನೀರಿನ ಮೂಲ ಇರುವುದನ್ನು ಖಚಿತಪಡಿಸಿಕೊಂಡು ಮುಂಜಾಗ್ರತೆ ವಹಿಸಬೇಕು. ಲಭ್ಯತೆ ಇರುವ ಕಡೆಗಳಲ್ಲಿ ವಾಟರ್ ಟ್ಯಾಂಕನ್ನು ಭರ್ತಿ ಮಾಡಲು ಕ್ರಮ ವಹಿಸಬೇಕೆಂದರು.ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಮಾತನಾಡಿ, ಬೋರವೆಲ್‌ಗಳಲ್ಲಿ ಈಗ ಇರುವ ನೀರಿನ ಪ್ರಮಾಣ ಎಷ್ಟು ದಿನಗಳವರೆಗೆ ಲಭ್ಯವಾಗಬಹುದು ಎಂಬುದರ ಬಗ್ಗೆ ಈಗಿನಿಂದಲೇ ಪರಿಶೀಲಿಸಿ ಜಾಗೃತೆ ವಹಿಸಬೇಕು ಎಂದು ಸೂಚಿಸಿದರು.ತಹಸೀಲ್ದಾರ ಅಂಜುಮ್ ತಬಸುಮ್, ಚಿಟ್ಟಗುಪ್ಪ ತಹಸೀಲ್ದಾರ ಮಂಜುನಾಥ ಪಂಚಾಳ, ಹುಮನಾಬಾದ ತಾ.ಪಂ ಅಧಿಕಾರಿ ದೀಪಿಕಾ ನಾಯ್ಕರ್, ಚಿಟಗುಪ್ಪ ಇ.ಒ ಲಕ್ಷ್ಮೀ ಬಿರಾದಾರ, ಬಸವಕಲ್ಯಾಣ ಇ.ಒ ಪುರಸಭೆ ಮುಖ್ಯಾಧಿಕಾರಿಗಳಾದ ಬಾಬಾ ಪಟೇಲ್, ಫೀರೋಜಖಾನ್, ಶಂಕರ ಸೇರಿದಂತೆ ತಾಲುಕು ಮಟ್ಟದ ಅಧಿಕಾರಿಗಳು ಇದ್ದರು. ಶಾಸಕರ ಮಧ್ಯೆ ಮಾತಿನ ಚಕಮಕಿ ಬೇಸಿಗೆ ಪ್ರಾರಂಭದ ಹಿನ್ನೆಲೆ ಜನರಿಗೆ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮಕ್ಕಾಗಿ ತಾಲೂಕು ಆಡಳಿತ ಕಚೇರಿಯಲ್ಲಿ ಕರೆದ ಸಭೆಯಲ್ಲಿ ಶಾಸಕ ಡಾ. ಸಿದ್ದಲಿಂಗಪ್ಪಾ ಪಾಟೀಲ್ ತಡವಾಗಿ ಆಗಮಿಸಿದಕ್ಕೆ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಹಾಗೂ ಭೀಮರಾವ ಪಾಟೀಲ್ ಸಮಯಕ್ಕೆ ಮಹತ್ವ ನೀಡಿ. ನಮಗೂ ಸಭೆಯಲ್ಲಿ ಪಾಲ್ಗೊಂಡು ಇತರೆ ಕಾರ್ಯಕ್ರಮಗಳಿಗೆ ತೆರಳಬೇಕಾಗುತ್ತದೆ ಎಂದರು.ಮುಂಬರುವ ದಿನಗಳಲ್ಲಿ ಸಭೆ ಕರೆದಾಗ ನಿಗದಿತ ಸಮಯಕ್ಕೂ ಮೀರಿ ಅಚಿದರೆ 30 ನಿಮಿಷ ಕಾಲಾವಕಾಶ ನೀಡಿ ಬಳಿಕ ನಾವಾಗಲಿ ಶಾಸಕರಾಗಲಿ ಬರದೆ ಇದ್ದರೆ ಇರುವವರು ಅಧ್ಯಕ್ಷತೆ ವಹಿಸಿ ಸಭೆ ಕಾರ್ಯಕ್ರಮಗಳನ್ನು ಮುಂದುವರೆಸಿ. ಅಧಿಕಾರಿಗಳು ಜನಪ್ರತಿನಿಧಿಗಳ ಕುರಿತು ಸಮಯಕ್ಕೆ ಕಾಯುವಕ್ಕಿಂತಲೂ ಸಾರ್ವಜನಿಕರ ಸಮಸ್ಯೆ ಆಲಿಸಲು ಸಮಯ ನೀಡಲು ಕಾಲವಕಾಶ ನೀಡುವಂತೆ ತಹಸೀಲ್ದಾರ ಅಂಜುಮ್ ತಬಸುಮ್ ಅವರಿಗೆ ಸೂಚಿಸಿದರು.