ರಾಜ್ಯದ ಮುಖ್ಯಮಂತ್ರಿಗಳ ವಿಶೇಷ ಅನುದಾನ ತರಲು 13 ಪರ್ಸೆಂಟ್ ಲಂಚ ಕೊಡಬೇಕು ಎಂದು ಶಾಸಕ ಕೃಷ್ಣಪ್ಪ ಆರೋಪಿಸಿದ್ದು, ಶಾಸಕರು ತಂದಿರುವ 80ಕ್ಕೂ ಹೆಚ್ಚು ಕೆ ಆರ್ ಎಲ್ ಡಿ ಎಲ್ ನ ಕಾಮಗಾರಿಗೆ ಎಷ್ಟು ಲಂಚ ನೀಡಿದ್ದಾರೆ ಎಂದು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಬಿ.ಎಸ್.ವಸಂತಕುಮಾರ್ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ರಾಜ್ಯದ ಮುಖ್ಯಮಂತ್ರಿಗಳ ವಿಶೇಷ ಅನುದಾನ ತರಲು 13 ಪರ್ಸೆಂಟ್ ಲಂಚ ಕೊಡಬೇಕು ಎಂದು ಶಾಸಕ ಕೃಷ್ಣಪ್ಪ ಆರೋಪಿಸಿದ್ದು, ಶಾಸಕರು ತಂದಿರುವ 80ಕ್ಕೂ ಹೆಚ್ಚು ಕೆ ಆರ್ ಎಲ್ ಡಿ ಎಲ್ ನ ಕಾಮಗಾರಿಗೆ ಎಷ್ಟು ಲಂಚ ನೀಡಿದ್ದಾರೆ ಎಂದು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಬಿ.ಎಸ್.ವಸಂತಕುಮಾರ್ ಆಗ್ರಹಿಸಿದ್ದಾರೆ.ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ 25 ಕೋಟಿ ಅನುದಾನ ಮಂಜೂರಾಗಿರುವುದರ ಪೈಕಿ 12.50 ಕೋಟಿಯ ಕಾಮಗಾರಿಯನ್ನು ಕೆ ಆರ್ ಐ ಡಿ ಎಲ್ ಮೂಲಕ ಅನುಷ್ಠಾನಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಶಾಸಕರು ಮನವಿ ಸಲ್ಲಿಸಿದ್ದರು. ಆ ಎಲ್ಲಾ ಕಾಮಗಾರಿಗಳಿಗೆ ಚಾಲನೆ ನೀಡಲು ಭೂಮಿಪೂಜೆಯನ್ನೂ ಮಾಡಿದ್ದಾರೆ. ಕಾಮಗಾರಿ ಕಳಪೆ ಎಂದು ನಾವು ಆರೋಪಿಸಿದ್ದಕ್ಕೆ ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳುವುದು ಪಲಾಯನವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು. ಕಾಮಗಾರಿಗಳು ಕಳಪೆಯಿಂದ ಕೂಡಿದೆ ಎಂದು ಆರೋಪಿಸಿದಾಗ ಜನ ಪ್ರತಿನಿಧಿಯಾಗಿರುವ ನೀವು ಅದರ ಬಗ್ಗೆ ಅಧಿಕಾರಿಗಳಿಗೆ ತನಿಖೆ ನಡೆಸಿ ಎಂದು ಸೂಚಿಸುವುದು ಬಿಟ್ಟು ಉಡಾಪೆಯ ಮಾತುಗಳನ್ನು ಆಡುವುದು ಸರಿಯಲ್ಲ ಎಂದು ಕಿಡಿಕಾರಿದರು. ಅನುಮಾನವಿರುವ ಕಾಮಗಾರಿಗಳ ಬಗ್ಗೆ ಲೋಕಾಯುಕ್ತಕ್ಕೂ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು. ತಮ್ಮ ಆಡಳಿತದಲ್ಲಿ ಯಾವುದೇ ಸಮಸ್ಯೆ ಇಲ್ಲವಾದರೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬನ್ನಿ. ಜನರಿಗೆ ಸತ್ಯಾಸತ್ಯದ ಅರಿವು ಮೂಡಿಸೋಣ ಎಂದು ಶಾಸಕರಿಗೆ ಸವಾಲೆಸೆದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಳಾಲ ನಾಗರಾಜು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗೋಣಿತುಮಕೂರು ಲಕ್ಷ್ಮೀಕಾಂತ್, ಪಟ್ಟಣ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎನ್. ಶಿವರಾಜ್, ಗುಡ್ಡೇನಹಳ್ಳಿ ನಂಜುಂಡಪ್ಪ, ಬಡಗರಹಳ್ಳಿ ರಂಗಸ್ವಾಮಿ ಸೇರಿದಂತೆ ಹಲವರು ಇದ್ದರು.