ಕಳಪೆ ಮಟ್ಟದ ಪಶು ಆಹಾರವನ್ನು ಸರಬರಾಜು ಮಾಡುವವರ ವಿರುದ್ಧ ತನಿಖೆ ಮಾಡಿಸಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಕಳಪೆ ಮಟ್ಟದ ಪಶು ಆಹಾರವನ್ನು ಸರಬರಾಜು ಮಾಡುವವರ ವಿರುದ್ಧ ತನಿಖೆ ಮಾಡಿಸಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ಭರವಸೆ ನೀಡಿದರು. ತಾಲೂಕಿನ ಹೇರೂರು ಗ್ರಾಮದ ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮೂಕ ಪ್ರಾಣಿಗಳು ತಿನ್ನುವ ಆಹಾರದಲ್ಲೂ ಸಹ ಕಳಪೆ ಆಹಾರವನ್ನು ನೀಡುತ್ತಿದ್ದಾರೆ. ಇದರ ಬಗ್ಗೆ ಡೈರಿಯ ಕಾರ್ಯದರ್ಶಿಗಳು ದೂರ ನೀಡಬೇಕು. ಪ್ರಾಣಿಗಳ ಆಹಾರದಲ್ಲಿ ಮೋಸ ಮಾಡುತ್ತಿದ್ದಾರೆ ಎಂದರೆ ಅವರು ಏನಾಗಿ ಸಾಯುತ್ತಾರೆ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಅದರ ಪಾತ್ರದಾರ ಯಾರು ಅವರ ಮೇಲೆ ಕ್ರಮ ತೆಗೆದುಕೊಳ್ಳುವ ವರೆಗೂ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.ತುಮಕೂರು ಹಾಲು ಒಕ್ಕೂಟದ ನಿರ್ದೇಶಕಿ ಭಾರತಿ ಶ್ರೀನಿವಾಸ್ ಮಾತನಾಡಿ, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ನಮ್ಮ ತಾಲೂಕಿನಲ್ಲಿ ಅತಿ ಹೆಚ್ಚು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಮಾಡಲಾಗಿದೆ ಎಂದರು. ವ್ಯವಸ್ಥಾಪಕ ನಿರ್ದೇಶಕ ತಿಮ್ಮನಾಯಕ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ವೆಂಕಟೇಶ್, ಕೆ.ಸುರೇಶ್ , ಶ್ರೀನಿವಾಸ್, ವೆಂಕಟೇಶ್, ನಂಜೇಗೌಡ, ಯೋಗೀಶ್, ಸಣ್ಣರಂಗಯ್ಯ,ಕುಮಾರ್, ಶಂಕರ್ ನಾಗ್, ಮಹೇಶ್, ರಾಜ್ ಇತರರು ಉಪಸ್ಥಿತರಿದ್ದರು.