ಇಂಟರ್‌ ಲಾಕ್ ಅಳವಡಿಸುವ ಕಾಮಗಾರಿಗೆ ಚಾಲನೆ

| Published : Feb 26 2025, 01:05 AM IST

ಸಾರಾಂಶ

ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಬಾಬು ಜಗಜೀವನರಾಂ ಸಮುದಾಯ ಭವನ ಕಳೆದ 15 ವರ್ಷಗಳಿಂದ ಅನುದಾನ ಕೊರತೆಯಿಂದಾಗಿ ಕಾಮಗಾರಿ ಪೂರ್ಣಗೊಳ್ಳದೇ ಅರ್ಧಕ್ಕೆ ನಿಂತಿದೆ.

ಕನ್ನಡಪ್ರಭ ವಾರ್ತೆ ಹುಣಸೂರುಪಟ್ಟಣದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕೊಠಡಿ ಮತ್ತು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಹೊರ ಆವರಣದಲ್ಲಿ ಇಂಟರ್‌ ಲಾಕ್ ಅಳವಡಿಸುವ ಕಾಮಗಾರಿಗೆ ಶಾಸಕ ಜಿ.ಡಿ. ಹರೀಶ್‌ ಗೌಡ ಮತ್ತು ವಿಧಾನ ಪರಿಷತ್ ಸದಸ್ಯ ಡಿ. ತಿಮ್ಮಯ್ಯ ಗುದ್ದಲಿಪೂಜೆ ನೆರವೇರಿಸಿದರು.ವಿಧಾನಪರಿಷತ್ ಸದಸ್ಯ ಡಿ. ತಿಮ್ಮಯ್ಯ ಮಾತನಾಡಿ, ನಾನು ಹುಣಸೂರು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವನಾಗಿದ್ದು, ನನ್ನೂರಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಪ್ರತಿವರ್ಷ ಅನುದಾನ ನೀಡಲಿದ್ದೇನೆ.ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಬಾಬು ಜಗಜೀವನರಾಂ ಸಮುದಾಯ ಭವನ ಕಳೆದ 15 ವರ್ಷಗಳಿಂದ ಅನುದಾನ ಕೊರತೆಯಿಂದಾಗಿ ಕಾಮಗಾರಿ ಪೂರ್ಣಗೊಳ್ಳದೇ ಅರ್ಧಕ್ಕೆ ನಿಂತಿದೆ. ಇದೀಗ ಈ ಕಟ್ಟಡ ಕಾಮಗಾರಿಗೆ 20 ಲಕ್ಷ ರು. ಗಳ ಅನುದಾನ ಒದಗಿಸಿದ್ದೇನೆ. ಕಳೆದ ಎರಡು ವರ್ಷಗಳಿಂದ ತಾಲೂಕಿನ ಅಭಿವೃದ್ಧಿ ಕಾಮಗಾರಿಗಳಿಗಾಗಿ 90 ಲಕ್ಷ ರು.ಗಳ ಅನುದಾನದೊಂದಿಗೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇನೆ. ಮುಂದಿನ ದಿನಗಳಲ್ಲೂ ಶಾಸಕ ಜಿ.ಡಿ. ಹರೀಶ್‌ ಗೌಡರೊಡಗೂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಕೈಜೋಡಿಸುತ್ತೇನೆ ಎಂದರು.ಶಾಸಕ ಜಿ.ಡಿ. ಹರೀಶ್‌ ಗೌಡ ಮಾತನಾಡಿ, ಗ್ಯಾರಂಟಿ ಯೋಜನೆಗಳ ನಡುವೆಯೂ ನಾನು ಮತ್ತು ವಿಧಾನ ಪರಿಷತ್‌ ಸದಸ್ಯರು ಹಿರಿಯರು ಆದ ಡಿ. ತಿಮ್ಮಯ್ಯನವರು ಸರ್ಕಾರದ ಅನುದಾನಗಳನ್ನು ಸದ್ಬಳಕೆ ಮಾಡಲು ಮುಂದಾಗಿದ್ದೇವೆ. ಸದರಿ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದು ಕೋಟಿ ರು. ವೆಚ್ಚದಡಿ ಒಸಾಟ್ ಸಂಸ್ಥೆ 6ಕ್ಕೂ ಹೆಚ್ಚು ಸುಸಜ್ಜಿತ ಕೊಠಡಿಗಳು, ಶೌಚಗೃಹಗಳನ್ನು ನಿರ್ಮಿಸಿಕೊಡುತ್ತಿದೆ. 4 ವರ್ಷಗಳ ಹಿಂದೆ ಮುಚ್ಚುವ ಹಂತ ತಲುಪಿದ್ದ ಈ ಶಾಲೆ ಇದೀಗ ಸರ್ಕಾರೇತರ ಸಂಘಸಂಸ್ಥೆಗಳು, ಕರ್ನಾಟಕ ರಕ್ಷಣಾ ವೇದಿಕೆ, ಎಸ್‌ಡಿಎಂಸಿ, ಹಳೆಯ ವಿದ್ಯಾರ್ಥಿಗಳ ಸಂಘಗಳ ಸಹಕಾರದೊಂದಿಗೆ ಮುಖ್ಯಶಿಕ್ಷಕ ಡಾ. ಮಾದುಪ್ರಸಾದ್ ಮತ್ತವರ ತಂಡ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಶಾಲೆಯನ್ನು ಉಳಿಸಿಕೊಂಡಿದೆ ಎಂದರು.ಪಟ್ಟಣದ ಬಾಬು ಜಗಜೀವನರಾಂ ಸಮುದಾಯ ಭವನದ ಕಾಮಗಾರಿ ಸಂಪನ್ನಗೊಳ್ಳಲು ನನ್ನ ಶಾಸಕರ ಅನುದಾನದಡಿ ನಾನೂ 15 ಲಕ್ಷ ರು.ಗಳ ಆರ್ಥಿಕ ನೆರವನ್ನು ನೀಡಲಿದ್ದೇನೆ ಎಂದು ಭರವಸೆ ನೀಡಿದರು. ಇದೇ ವೇಳೆ ಪಕ್ಕದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಹೊರ ಆವರಣದಲ್ಲಿ 5 ಲಕ್ಷ ರು. ವೆಚ್ಚದಡಿ ಇಂಟರ್‌ ಲಾಕ್ (ನೆಲಹಾಸು) ಅಳವಡಿಸಲು ಗುದ್ದಲಿಪೂಜೆ ನೆರವೇರಿತು.ಮುಖಂಡರಾದ ಹರವೆ ಶ್ರೀಧರ್, ಡಿ. ಕುಮಾರ್, ಶಾಲೆಯನ್ನು ದತ್ತು ಪಡೆದಿರುವ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪುರುಷೋತ್ತಮ್, ಎಸ್‌.ಡಿಎಂಸಿ ಅಧ್ಯಕ್ಷ ರಮೇಶ್, ಪ್ರಣಬ್, ಕ್ಷೇತ್ರ ಸಮನ್ವಯಾದಿಕಾರಿ ಹೇಮಲತ, ಮುಖ್ಯಶಿಕ್ಷಕ ಡಾ. ಮಾದು ಪ್ರಸಾದ್, ಪಿಯು ಕಾಲೇಜಿನ ಪ್ರಾಂಶುಪಾಲ ಎ. ರಾಮೇಗೌಡ, ಬಿಆರ್‌.ಪಿ ಪ್ರತಿಭಾ, ಸುಷ್ಮಾ, ರಾಜೇಶ್ವರಿ, ಸೋಮಸುಂದರ್, ಎಸ್‌.ಡಿಎಂಸಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಇದ್ದರು.