ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವುದರ ಮೂಲಕ ಮತ್ತೊಂದು ಸಚಿವ ಸ್ಥಾನ ಈ ಬಾರಿ ಸಿಕ್ಕೇ ಸಿಗುತ್ತದೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ: ಸಚಿವ ಸಂಪುಟ ಪುನರ್‌ರಚನೆಗೆ ಒತ್ತಡ ಹೇರುತ್ತಿರುವುದು ಬಹುಚರ್ಚಿತ ವಿಷಯವಾಗಿದೆ. ಈ ನಡುವೆ ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಅವರು ದೆಹಲಿಯಲ್ಲಿಯೇ ಬೀಡುಬಿಟ್ಟು ಸಚಿವ ಸಚಿವ ಸ್ಥಾನಕ್ಕಾಗಿ ಕಸರತ್ತು ನಡೆಸಿದ್ದಾರೆ.

ಈಗಾಗಲೇ ಗದಗ ಕ್ಷೇತ್ರದ ಶಾಸಕ ಎಚ್. ಕೆ. ಪಾಟೀಲರು ಸಚಿವರಾಗಿದ್ದಾರೆ. ಈಗ ಹೆಚ್ಚುವರಿಯಾಗಿ ಮತ್ತೊಂದು ಸಚಿವ ಸ್ಥಾನ ಜಿಲ್ಲೆಗೆ ನೀಡುತ್ತಾರೆಯೇ ಎನ್ನುವುದು ಚರ್ಚೆಯಾಗುತ್ತಿರುವ ವಿಷಯ.

ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವುದರ ಮೂಲಕ ಮತ್ತೊಂದು ಸಚಿವ ಸ್ಥಾನ ಈ ಬಾರಿ ಸಿಕ್ಕೇ ಸಿಗುತ್ತದೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ.

ಈ ಹಿಂದೆ ರೋಣ ನಗರದಲ್ಲಿ ಜರುಗಿದ ಅಭಿವೃದ್ಧಿ ಕಾಮಗಾರಿ ಚಾಲನೆ ಸಂದರ್ಭದಲ್ಲಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಅಭಿಮಾನಿ ಬಳಗ ಒತ್ತಾಯಿಸಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪಾಟೀಲರಿಗೆ ಸಚಿವ ಸ್ಥಾನ ನೀಡುತ್ತೇವೆ ಎಂದು ಬಹಿರಂಗ ವೇದಿಕೆಯಲ್ಲಿಯೆ ಭರವಸೆ ನೀಡಿದ್ದರು.

4 ಬಾರಿ ಗೆಲುವು ಸಾಧಿಸಿರುವ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಬಲವಾಗಿಯೇ ಸಮರ್ಥನೆ ಮಾಡಿಕೊಂಡು ಕೇಳುತ್ತಿದ್ದಾರೆ. ಹಿರಿತನವೂ ಇದೆ. ಹೀಗಾಗಿ ನನಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಡ ಹೇರಲು ದೆಹಲಿಗೆ ತೆರಳಿರುವ ಶಾಸಕರ ಗುಂಪಿನಲ್ಲಿದ್ದಾರೆ.

ರಾಜಕಾರಣ ಮೀರಿಸುತ್ತಿರುವ ಶಿಕ್ಷಕರ ಸಂಘದ ಚುನಾವಣೆ!

ಲಕ್ಷ್ಮೇಶ್ವರ: ತಾಲೂಕಿನಲ್ಲಿ 2026- 2031ನೇ ಸಾಲಿನವರೆಗೆ 5 ವರ್ಷ ಅವಧಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ನಡೆಯುತ್ತಿದ್ದು, ಶಿಕ್ಷಕರೂ ರಾಜಕಾರಣಿಗಳನ್ನು ಮೀರಿಸುವ ರೀತಿಯಲ್ಲಿ ಭರವಸೆ ಕೊಡುತ್ತಿದ್ದು, ಚುನಾವಣೆ ಭಿತ್ತಿಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಬದಲಾವಣೆಗಾಗಿ ನಿಮ್ಮ ಮತ, ನಮ್ಮ ತಂಡ ನಿಮ್ಮ ಧ್ವನಿ ಎಂಬ ಧ್ಯೇಯದೊಂದಿಗೆ ಪ್ರಚಾರ ಮಾಡುತ್ತಿದ್ದು, ಶಿಕ್ಷಕರ ಸಂಘಗಳಲ್ಲಿ ರಾಜಕೀಯ ಗುಮಾನಿ ಮೂಡುತ್ತಿದೆ. ಶಿಕ್ಷಕರ ಬಳಗಕ್ಕೆ ಈ ರೀತಿಯ ಜಿದ್ದಾಜಿದ್ದಿ ಚುನಾವಣೆ ಬೇಕಾಗಿತ್ತಾ? ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಶಿಕ್ಷಕರಲ್ಲಿ ಒಡಕು ತರುವ ಇಂತಹ ಚುನಾವಣೆಗಳು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.ಶಿಕ್ಷಕರು ತಮ್ಮಲ್ಲಿ ಹೊಂದಾಣಿಕೆ ಮಾಡಿಕೊಂಡು ಅವಿರೋಧ ಆಯ್ಕೆ ಮಾಡಿದಲ್ಲಿ ಇತರರಿಗೆ ಮಾದರಿಯಾಗಬಲ್ಲರು. ಆದರೆ ಶಿಕ್ಷಕರು ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ನಾವೂ ಯಾವುದೇ ರಾಜಕೀಯ ಪಕ್ಷಕ್ಕೆ ಕಡಿಮೆ ಇಲ್ಲವೆಂದು ತೋರಿಸುತ್ತಿರುವುದು ಶಾಲಾ ವಾತಾವರಣದ ಮೇಲೆ ದುಷ್ಪರಿಣಾಮ ಬೀರುತ್ತದೆ.ಸಮಾಜಕ್ಕೆ ಮಾದರಿಯಾಗಿ ಇರಬೇಕಾದ ಶಿಕ್ಷಕರು ಚುನಾವಣೆ ಸಜ್ಜಾಗುತ್ತಿರುವುದು ಬೇಸರದ ಸಂಗತಿ. ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ನಾವೂ ಯಾವುದೇ ರಾಜಕೀಯ ಪಕ್ಷಕ್ಕೆ ಕಡಿಮೆ ಇಲ್ಲವೆಂದು ತೋರಿಸುತ್ತಿರುವುದು ಶಾಲಾ ವಾತಾವರಣದ ಮೇಲೆ ದುಷ್ಪರಿಣಾಮ ಬೀರುತ್ತದೆ.