ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಉಚಿತ ಯೋಜನೆ ನೀಡಿದ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಜನ ಮನ್ನಣೆ ನೀಡಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.ಆಲನಹಳ್ಳಿಯ ಕುದೇರು ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಆಂಧ್ರಪ್ರದೇಶದಲ್ಲಿ ಅನೇಕ ಉಚಿತ ಯೋಜನೆ ನೀಡಿದರೂ ಮನ್ನಣೆ ನೀಡದೆ ಅಲ್ಲಿನ ಜನರು ಮನೆಗೆ ಕಳುಹಿಸಿದರು. ಅಂತೆಯೇ ಕರ್ನಾಟಕದಲ್ಲಿ ಐದು ಗ್ಯಾರಂಟಿ ನೀಡಿದರೂ ಒಂಬತ್ತು ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಫ್ರೀ ಕೊಟ್ಟರೂ ಬೇಡವೆಂದು ಮನೆಗೆ ನಡೆಯಿರಿ ಅಂಥ ಕಳುಹಿಸಿದ್ದಾರೆ ಎಂದರು.
ಸಾಮಾಜಿಕ ನ್ಯಾಯದ ಹರಿಕಾರರಾಗಿ ಸಮಾನತೆ ತಂದುಕೊಟ್ಟ ಬಸವಣ್ಣನ ಹಾದಿಯಲ್ಲಿ ನಡೆಯಬೇಕು. ಮನುಷ್ಯ ಮನುಷ್ಯನಾಗಿ ಉಳಿಯಲು, ಧರ್ಮದ ಹಾದಿಯಲ್ಲಿ ಸಾಗಿದರೆ ಸಮ ಸಮಾಜ ನಿರ್ವಾಣವಾಗಲಿದೆ ಎಂದು ಅವರು ಹೇಳಿದರು.ಕಾಯಕ ಮಾಡಿ ಸಮಾಜಕ್ಕೆ ಕೊಡಬೇಕು. ಆದರೆ, ದುಡಿಯದೆ ಸಂಪಾದಿಸಬೇಕು ಎಂಬ ದುರಾಸೆ ಮಾನವನ ಅವನತಿಗೆ ಕಾರಣವಾಗಲಿದೆ. ಆಂದ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಸರ್ಕಾರ ಇದ್ದಾಗ ಎಲ್ಲಾ ಉಚಿತವಾಗಿ ನೀಡಲಾಯಿತು. ಆದರೆ, ಅಲ್ಲಿ ಫ್ರೀ ಬೇಡ ನಡೆಯಿರಿ ಮನೆಗೆ ಅಂಥ ಕಳುಹಿಸಿಕೊಟ್ಟರು. ದುಡಿದು ಮೂರು ಹೊತ್ತು ಊಟ ವಾಡುವುದು ಮುಖ್ಯ ಹೊರತು ಉಚಿತವಾಗಿ ಮಾಡುವುದು ಧರ್ಮವಲ್ಲ. ಕರ್ನಾಟಕದಲ್ಲೂ 9 ಸ್ಥಾನಗಳನ್ನು ನೀಡಿ ಮನೆಗೆ ಕಳುಹಿಸಿದರು ಎಂದು ಅವರು ಟೀಕಿಸಿದರು.
ರಾಜಕಾರಣದಲ್ಲಿ ದಾರಿ ತೋರುವವರು ಇಲ್ಲದಂತಾಗಿದೆ. ಆದರೆ ಮಠಮಾನ್ಯಗಳು ಜನರಿಗೆ ಮಾರ್ಗದರ್ಶನ ನೀಡುತ್ತಿವೆ. ಧರ್ಮ ಉಳಿದು ಜನರು ನೆಮ್ಮದಿಯಾಗಿ ಇರುವಂತಾಗುತ್ತದೆ. ಜಾತಿಯನ್ನು ನೋಡದೆ ಎಲ್ಲರೊಂದಿಗೆ ಪ್ರೀತಿಯಿಂದ ಇರಲು ನಾನು ಮಠಮಾನ್ಯಗಳಿಗೆ ಮಾಡಿದ ಸೇವೆಯೇ ಕಾರಣ. ಯಾವುದೇ ಬೆಂಬಲ ಇಲ್ಲದೆ ಶಾಸಕ, ಮಂತ್ರಿಯಾಗಿ, ಸಹಕಾರ ಮಹಾಮಂಡಳದ ಅಧ್ಯಕ್ಷರಾಗಲು ಜನರ ವಿಶ್ವಾಸವೇ ಕಾರಣ ಎಂದು ನುಡಿದರು.ನಾನು ಯಡಿಯೂರಪ್ಪ ಅವರು ಸಿಎಂ ಆಗಬೇಕೆಂದು ಅವರೊಂದಿಗೆ ಕೈ ಜೋಡಿಸಿದೆ. ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗ್ತಾರೆ ಅಂದೆ. ಆದರೆ, ಸಿದ್ದರಾಮಯ್ಯ ಅವರು ಜಿಟಿಡಿ ಹೇಳಿದಾಕ್ಷಣ ಸಿಎಂ ಆಗುವುದಕ್ಕೆ ಸಾಧ್ಯನಾ ಅಂದರು. ಹದಿನೈದು ದಿನಗಳಲ್ಲಿ ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಅದೇ ರೀತಿ ಬಿ.ವೈ. ವಿಜಯೇಂದ್ರ ಅವರಿಗೂ ಮುಂದೆ ಉಜ್ವಲ ಭವಿಷ್ಯವಿದೆ. ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶವನ್ನು ದೇವರ ಆಶೀರ್ವಾದದ ಬಲದಿಂದ ದೊರೆಯಲಿದೆ ಎಂದು ಹೇಳಿದರು.
ಡಾ. ಶರತ್ ಚಂದ್ರ ಸ್ವಾಮೀಜಿ ಮಾತನಾಡಿ, ಬಡ, ಮಧ್ಯಮ ವರ್ಗದ ಮಠಗಳು ಸ್ವಂತ ಕಟ್ಟಡವನ್ನು ಕಂಡುಕೊಂಡವು. ಆಚಾರ ವಿಚಾರಗಳನ್ನು ಹೊಂದಬೇಕು. ಗುರು ಮುಖ್ಯ. ಶಿವ ಬೇಕು ಅಂದರೆ ಗುರು ಬೇಕು. ಇತಿಹಾಸದ ದಾಖಲೀಕರಣದ ವಿಚಾರದಲ್ಲಿ ಹಿಂದೆ ಇದ್ದೇವೆ. ಎಲ್ಲಾ ಕ್ಷೇತ್ರದಲ್ಲಿ ದಾಪುಗಾಲು ಇಟ್ಟಿದ್ದರೂ ಇತಿಹಾಸವನ್ನು ಸಮರ್ಪಕವಾಗಿ ಅರಿಯಲಾಗಿಲ್ಲ. 12ನೇ ಶತವಾನ ನಂತರ 15ನೇ ಶತವಾನಕ್ಕೆ ಬಂದು ಬಿಡುತ್ತೇವೆ. ಈ ಎರಡೂ ಶತವಾನಗಳ ನಡುವೆ ಏನಾಯಿತು ಎಂಬುದನ್ನು ಗಮನಿಸಿಲ್ಲ, ದಾಖಲಿಸಿಲ್ಲ ಎಂದರು.