ಧರ್ಮಸ್ಥಳ ಸಂಸ್ಥೆ ಸೇವಾಕಾರ್ಯಕ್ಕೆ ಶಾಸಕ ಗಣೇಶ್‌ ಶ್ಲಾಘನೆ

| Published : Jan 16 2024, 01:51 AM IST / Updated: Jan 16 2024, 03:43 PM IST

ಧರ್ಮಸ್ಥಳ ಸಂಸ್ಥೆ ಸೇವಾಕಾರ್ಯಕ್ಕೆ ಶಾಸಕ ಗಣೇಶ್‌ ಶ್ಲಾಘನೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಗರೀಕ ಸೇವೆಗಳಲ್ಲಿ ಪ್ರಮುಖವಾದ ಶುದ್ಧ ಕುಡಿಯುವ ನೀರು ಎಲ್ಲರಿಗೂ ದೊರೆಯಬೇಕು ಎಂಬ ಆಶಯದಲ್ಲಿ ನಗರದಲ್ಲಿ ಶುದ್ಧ ನೀರಿನ ಸರಬರಾಜಿಗೆ ಆದ್ಯತೆ ನೀಡಲಾಗುತ್ತಿದೆ. 

ಕನ್ನಡಪ್ರಭ ವಾರ್ತೆ ತುಮಕೂರು

ನಾಗರೀಕ ಸೇವೆಗಳಲ್ಲಿ ಪ್ರಮುಖವಾದ ಶುದ್ಧ ಕುಡಿಯುವ ನೀರು ಎಲ್ಲರಿಗೂ ದೊರೆಯಬೇಕು ಎಂಬ ಆಶಯದಲ್ಲಿ ನಗರದಲ್ಲಿ ಶುದ್ಧ ನೀರಿನ ಸರಬರಾಜಿಗೆ ಆದ್ಯತೆ ನೀಡಲಾಗುತ್ತಿದೆ. 

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ನಗರದ ವಿವಿಧೆಡೆ ಶುದ್ಧ ನೀರಿನ ಶುದ್ಧಗಂಗಾ ಘಟಕಗಳನ್ನು ಸ್ಥಾಪಿಸಿ ನೆರವಾಗುತ್ತಿದ್ದಾರೆ ಎಂದು ಶಾಸಕ ಜಿ. ಬಿ. ಜ್ಯೋತಿಗಣೇಶ್ ಹೇಳಿದರು.

ಸೋಮವಾರ ನಗರದ ೩ನೇ ವಾರ್ಡಿನ ಹೌಸಿಂಗ್ ಬೋರ್ಡ್ ಪ್ರದೇಶದ ಮಾತಾಜಿ ಪಾರ್ಕಿನಲ್ಲಿ ಶಾಸಕರ ಅನುದಾನದಲ್ಲಿ ಧರ್ಮಸ್ಥಳ ಸಂಸ್ಥೆ ಸಹಯೋಗದ ಶುದ್ಧ ಕುಡಿಯುವ ನೀರು ಸರಬರಾಜು ಘಟಕಕ್ಕೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಧರ್ಮಸ್ಥಳ ಸಂಸ್ಥೆಯವರು ಕೆರೆ ಅಭಿವೃದ್ಧಿ, ದೇವಸ್ಥಾನಗಳ ಜೀರ್ಣೋದ್ಧಾರ, ಶುದ್ಧ ನೀರಿನ ಘಟಕಗಳನ್ನು ಸ್ಥಾಪನೆ ಮುಂತಾದ ಹಲವು ಸಮಾಜ ಸೇವಾ ಕಾರ್ಯದಲ್ಲಿ ನೆರವಾಗಿದ್ದಾರೆ ಎಂದರು.

ನಗರದ ವಿವಿಧೆಡೆ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ವ್ಯವಸ್ಥಿತವಾಗಿ ನಿರ್ವಹಣೆ ಮಾಡುತ್ತಿರುವ ಧರ್ಮಸ್ಥಳ ಸಂಸ್ಥೆಯವರು ನಗರದ ಗಾರೆ ನರಸಯ್ಯನ ಕಟ್ಟೆ ಅಭಿವೃದ್ಧಿಗೆ ೨೫ ಲಕ್ಷ ರೂಪಾಯಿ ನೆರವು ನೀಡಿ ಸಹಕರಿಸಿದ್ದಾರೆ. 

ಕೈದಾಳ ದೇವಸ್ಥಾನ ಜೀರ್ಣೋದ್ಧಾರ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಹೆಚ್ಚಿನ ಸೇವೆ ಒದಗಿಸಲಿ ಎಂದು ಆಶಿಸಿದರು.

೩ನೇ ವಾರ್ಡಿನ ನಗರ ಪಾಲಿಕೆ ಸದಸ್ಯ ಲಕ್ಷ್ಮೀನರಸಿಂಹರಾಜು ಮಾತನಾಡಿ, ಈ ಭಾಗದಲ್ಲಿ ಶುದ್ಧ ಕುಡಿಯುವ ನೀರಿಗೆ ಅಭಾವವಿತ್ತು. ಈ ಮೂಲಕ ಈ ಸಮಸ್ಯೆ ಬಗೆಹರಿಯುವಂತಾಗಿದೆ. 

ಮುಂದೆ ವಾರ್ಡಿನ ನಾಗಣ್ಣನ ಪಾಳ್ಯ, ಅರಳಿಮರದ ಪಾಳ್ಯದಲ್ಲಿ ನೀರಿನ ಘಟಕ ಸ್ಥಾಪನೆ ಮಾಡಲು ಶಾಸಕರಿಗೆ ಮನವಿ ಮಾಡಿದರು.

ನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ದಯಾಶೀಲಾ, ಯೋಜನಾಧಿಕಾರಿ ಸಂದೇಶ್, ಸ್ಥಳೀಯ ಮುಖಂಡರಾದ ಶೇಷಾಚಲ, ಶಂಭುಲಿಂಗಯ್ಯ, ದೇವರಾಜು, ಲಿಂಗಣ್ಣ, ರಾಮಣ್ಣ, ನೀಲಕಂಠಯ್ಯ, ಭಾನುಪ್ರಕಾಶ್ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.