ಬಿಜೆಪಿ ವಿರುದ್ಧ ಹರಿಹಾಯ್ದ ಶಾಸಕ ಗಣೇಶ್

| Published : Apr 21 2024, 02:16 AM IST

ಸಾರಾಂಶ

ಕಾಂಗ್ರೆಸ್‌ನ ಐದು ಗ್ಯಾರಂಟಿಗಳು ಬಂದಿವೆ. ಬಿಜೆಪಿಯ ಅಚ್ಚೇ ದಿನಗಳು ಬರಲೇ ಇಲ್ಲ ಎಂದು ರಾಜ್ಯದ ಪ್ರತಿ ಮನೆ ಮನೆಯಲ್ಲೂ ಜನರು ಹೇಳುತ್ತಿದ್ದಾರೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಹರಿ ಹಾಯ್ದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕಾಂಗ್ರೆಸ್‌ನ ಐದು ಗ್ಯಾರಂಟಿಗಳು ಬಂದಿವೆ. ಬಿಜೆಪಿಯ ಅಚ್ಚೇ ದಿನಗಳು ಬರಲೇ ಇಲ್ಲ ಎಂದು ರಾಜ್ಯದ ಪ್ರತಿ ಮನೆ ಮನೆಯಲ್ಲೂ ಜನರು ಹೇಳುತ್ತಿದ್ದಾರೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಹರಿ ಹಾಯ್ದರು.ತಾಲೂಕಿನ ಪಡಗೂರು, ಕೆಲಸೂರು, ಶಿಂಡನಪುರ, ಅಣ್ಣೂರು ಕೇರಿ, ನೇನೇಕಟ್ಟೆ ಗ್ರಾಮದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಪರ ಜಿಪಂ ವ್ಯಾಪ್ತಿಯ ಕಾಂಗ್ರೆಸ್‌ ಕಾರ್ಯಕರ್ತರ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿಗಳು ರಾಜ್ಯದ ಪ್ರತಿ ಮನೆಗಳಿಗೆ ಒಂದಲ್ಲ ಒಂದು ಗ್ಯಾರಂಟಿಗಳು ತಲುಪಿವೆ ಎಂದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಳೆದ ೧೦ ವರ್ಷಗಳ ಅವಧಿಯಲ್ಲಿ ನೀಡದ್ದ ಭರವಸೆಗಳನ್ನು ಈಡೇರಿಸಲಿಲ್ಲ ಎಂಬುದು ರಾಜ್ಯದ ಪ್ರತಿಯೊಬ್ಬರಿಗೂ ತಿಳಿದ ವಿಷಯ. ಬಿಜೆಪಿಗರು ಹೇಳುವುದು ಸುಳ್ಳು ಎಂಬುದು ಗೊತ್ತಾಗಿದೆ ಎಂದು ಆರೋಪಿಸಿದರು. ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ರು. ರೈತರ ಆದಾಯ ಡಬಲ್‌, ವರ್ಷಕ್ಕೆ ೨ ಕೋಟಿ ಉದ್ಯೋಗ ಕೋಡ್ತೀವಿ ಅಂದ್ರು ಕೊಡಲಿಲ್ಲ. ಉದ್ಯೋಗ ಕೇಳಿದರೆ ಪಕೋಡ ಮಾರಿ ಅಂದೋರಿಗೆ ದೇಶದ ಯುವಕರು ಬಿಜೆಪಿಗೆ ಮತ ಹಾಕಬೇಕಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸುನೀಲ್‌ ಬೋಸ್‌ ಸ್ಪರ್ಧಿಸಿದ್ದು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನನಗೆ ಅತಿ ಹೆಚ್ಚಿನ ಲೀಡ್‌ ಕೊಟ್ಟು ಆಶೀರ್ವಾದ ಮಾಡಿದ್ದೀರಿ. ಸುನೀಲ್‌ ಬೋಸ್‌ಗೆ ನನಗಿಂತ ಹೆಚ್ಚು ಲೀಡ್‌ ಕೊಟ್ಟು ಆಶೀರ್ವಾದ ಮಾಡಬೇಕು ಎಂದರು. ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಮಾತನಾಡಿ, ಕೇಂದ್ರ ಸರ್ಕಾರ ಬೆಲೆ ಏರಿಕೆ ತಡೆಗಟ್ಟುವಲ್ಲಿ ವಿಫಲವಾದ ಸಮಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಕಾರಣ ಜೀವನ ನಿರ್ವಹಣೆಗೆ ಕಷ್ಟವಾಗುತ್ತಿತ್ತು ಎಂಬುದು ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಹೇಳುತ್ತಿದ್ದಾರೆ ಎಂದರು. ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌ ಮಾತನಾಡಿ, ಪ್ರಧಾನಿ ಮೋದಿ ಜನರನ್ನು ಮರಳು ಮಾಡುವ ಮೂಲಕ ಮೋಡಿ ಮಾಡಿ ಮತ ಪಡೆಯುತ್ತಿದ್ದಾರೆ. ಈ ಚುನಾವಣೆಯಲ್ಲಿ ಜನ ಬದಲಾವಣೆ ಬಯಸಿದ್ದು, ಪ್ರಧಾನಿ ಮೋದಿ ಮೋಡಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಜಿಪಂ ಮಾಜಿ ಸದಸ್ಯ ಕೆ.ಎಸ್.ಮಹೇಶ್‌,ಎಪಿಎಂಸಿ ಅಧ್ಯಕ್ಷ ಮೊಳ್ಳಯ್ಯನಹುಂಡಿ ಬಸವರಾಜು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಿ.ಬಿ.ರಾಜಶೇಖರ್‌,ತಾಪಂ ಮಾಜಿ ಉಪಾಧ್ಯಕ್ಷ ನೇನೇಕಟ್ಟೆ ಗಂಗಾಧರಪ್ಪ,ತಾಪಂ ಮಾಜಿ ಸದಸ್ಯ ಬೆಟ್ಟಹಳ್ಳಿ ಕೆಂಪರಾಜು,ಮುಖಂಡರಾದ ಪಡಗೂರು ನಾಗೇಶ್‌,ಕೆ.ಎಂ.ಮಾದಪ್ಪ,ಬೆಟ್ಟಹಳ್ಳಿ ದೀಪು,ಗಂಗಪ್ಪ ಸೇರಿದಂತೆ ಆಯಾಯ ಗ್ರಾಪಂ ವ್ಯಾಪ್ತಿಯ ಮುಖಂಡರು, ಕಾರ್ಯಕರ್ತರು ಇದ್ದರು.

ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಗೆಲ್ಲಿಸಿದರೆ ನನಗೂ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕ್ಷೇತ್ರದ ಮತದಾರರು ವಿಪಕ್ಷಗಳ ಮಾತಿಗೆ ಮರುಳಾಗದೆ ಕಾಂಗ್ರೆಸ್‌ಗೆ ಮತ ನೀಡಿದರೆ ಕ್ಷೇತ್ರದ ಅಭಿವೃದ್ಧಿಯಾಗಲಿದೆ.

-ಎಚ್.ಎಂ.ಗಣೇಶ್‌ ಪ್ರಸಾದ್‌, ಶಾಸಕ