ಸಾರಾಂಶ
ಬೈಂದೂರು: ಬೇಕರಿ, ಕಾಂಡಿಮೆಂಟ್ಸ್, ಹೋಟೆಲು, ಕಿರಾಣಿ ಅಂಗಡಿ, ಟೀ ಸ್ಟಾಲ್, ಹೂವಿನ ವ್ಯಾಪಾರಿ ಸಹಿತ ಸಣ್ಣ ವ್ಯಾಪಾರ ಮಾಡಿಕೊಂಡಿರುವವರಿಗೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯಿಂದ ಏಕಾಏಕಿ ನೋಟಿಸ್ ಜಾರಿ ಮಾಡಿ, ಅವರನ್ನು ಆತಂಕಕ್ಕೆ ತಳ್ಳಿದ್ದರು. ಈ ರೀತಿ ಮಾಡಿರುವುದು ಸರಿಯಲ್ಲ ಮತ್ತು ಈ ಸಣ್ಣ ವ್ಯಾಪಾರ ವಹಿವಾಟುಗಳನ್ನು ನಡೆಸುವವರಿಗೆ ಯುಪಿಐ ವ್ಯವಹಾರ ಸಂಬಂಧ ಅಗತ್ಯ ತಿಳಿಕೆಯನ್ನು ಇಲಾಖೆಯಿಂದ ನೀಡಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಶ್ನೋತ್ತರದ ವೇಳೆ ಈ ವಿಷಯ ಪ್ರಸ್ತಾಪಿಸಿದ ಶಾಸಕರು, ಇಲಾಖೆಯಿಂದ ಯಾವುದೇ ತಿಳುವಳಿಕೆ ನೀಡದೇ, ತೆರಿಗೆ ನೋಟಿಸು ನೀಡಿರುವುದರಿಂದ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಸಣ್ಣ ವರ್ತಕರಿಗೆ ಸಮಸ್ಯೆ ಆಗಿದೆ. ಎಲ್ಲಾ ಸಣ್ಣ ವ್ಯಾಪಾರಿಗಳ ಹಿತ ಕಾಪಾಡಲು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಣ್ಣ ವ್ಯಾಪಾರಿಗಳಿಗೆ ಸೂಕ್ತ ರಕ್ಷಣೆಯನ್ನು ಸರ್ಕಾರ ನೀಡಬೇಕು ಎಂದರು.ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮುಂಚಿತವಾಗಿ ಯಾವುದೇ ತಿಳಿವಳಿಕೆ ನೀಡದೇ ಏಕಾಏಕಿ ನೋಟಿಸು ನೀಡಿರುವುದರಿಂದ ಹಲವು ಸಣ್ಣ ವ್ಯಾಪಾರಿಗಳಿಗೆ ಸಮಸ್ಯೆ ಆಗಿರುವ ವಿಚಾರ ಸರಕಾರದ ಗಮನದಲ್ಲಿದೆ. ಸಣ್ಣ ವ್ಯಾಪಾರಿಗಳ ಹಿತ ಕಾಪಾಡಲು ಈ ವಿಚಾರವಾಗಿ ಕಾರಣ ಕೇಳುವ ನೋಟಿಸ್ ಪಡೆದ ವರ್ತಕರು ಪ್ರತ್ಯುತ್ತರ ಸಲ್ಲಿಸುವ ಹಾಗೂ ವೈಯುಕ್ತಿಕವಾಗಿ ಅಹವಾಲು ಸಲ್ಲಿಸಲು ಅವಕಾಶ ನೀಡಲಾಗಿದೆ. ವ್ಯಾಪಾರಿಗಳು ಸಲ್ಲಿಸಿದ ಸಾಕ್ಷಿ ದಾಖಲೆಗಳ ಆಧಾರದ ಮೇಲೆ ಇಲಾಖೆಯು ವಾರ್ಷಿಕ ವಹಿವಾಟನ್ನು ಪರಿಶೀಲಿಸಿ, ತೆರಿಗೆ ಬಾಧ್ಯತೆ ಇದೆಯೋ ಹಾಗೂ ನೋಂದಣಿ ಅವಶ್ಯಕತೆ ಇದೆಯೋ ಎಂದು ನಿರ್ಧರಿಸಲಾಗುವುದು ಎಂದರು.ವಿಭಾಗಿಯ ಮಟ್ಟದಲ್ಲಿ ಮತ್ತು ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಚೇರಿಗಳ ಮಟ್ಟದಲ್ಲಿ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. ವಿಭಾಗಿಯ ಮಟ್ಟದಲ್ಲಿ ನೋಂದಣಿ ಜಾಗೃತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.