ತರೀಕೆರೆಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣ ರಾಜೀನಾಮೆ ಕೊಡಬೇಕು ಮತ್ತು ಅವರನ್ನು ಕೂಡಲೇ ಬಂಧಿಸಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಒತ್ತಾಯಿಸಿದರು.
ಎಸ್.ಐ.ಆರ್.ಅಭಿಯಾನದ ಹೆಸರಲ್ಲಿ ಮತಗಳ್ಳತನ ವಿರೋಧಿಸಿ ಬೃಹತ್ ಪ್ರತಿಭಟನಾ ಪಾದಯಾತ್ರೆ
ಕನ್ನಡಪ್ರಭ ವಾರ್ತೆ ತರೀಕೆರೆಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣ ರಾಜೀನಾಮೆ ಕೊಡಬೇಕು ಮತ್ತು ಅವರನ್ನು ಕೂಡಲೇ ಬಂಧಿಸಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಒತ್ತಾಯಿಸಿದರು.
ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಬುಧವಾರ ಎಸ್.ಐ.ಆರ್.ಅಭಿಯಾನದ ಹೆಸರಲ್ಲಿ ನಡೆಯುತ್ತಿರುವ ಮತ ಗಳ್ಳತನ ವಿರೋಧಿಸಿ ಪಟ್ಟಣದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಹಾತ್ಮಾಗಾಂಧಿ ವೃತ್ತದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.ಎಸ್.ಐ.ಆರ್.ವಿರೋಧಿಸಿ ಬೆಂಗಳೂರಿನಲ್ಲಿ ಚುನಾವಣಾ ಆಯೋಗದ ಕಚೇರಿ ಎದುರು ಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್ ಮತ್ತಿತರ ಮುಖಂಡರು ಬೆಳಗಿನಿಂದ ರಾತ್ರಿ ತನಕ ಪ್ರತಿಭಟಿಸಿದ್ದೇವೆ. ಮುಸ್ಲೀಂ, ಅಹಿಂದ ಮತ್ತು ದಲಿತರ ಲಕ್ಷಾಂತರ ಮತಗಳನ್ನು ಇಲ್ಲದ ಹಾಗೆ ಮಾಡಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕ ಡಿ.ಎಸ್.ಸುರೇಶ್ 10 ವರ್ಷ ಅಧಿಕಾರ ನಡೆಸಿದ್ದಾರೆ. ಅವರ ಅವಧಿಯಲ್ಲಿ ಯಾವ ರಸ್ತೆ ಸರಿ ಇತ್ತು ಎಂದು ಅವರು ಹೇಳಬೇಕು. ರಸ್ತೆಯಲ್ಲಿದ್ದ ಗುಂಡಿ ಮುಚ್ಚುವ ಕಾರ್ಯ ಇವರು ಕೈಗೊಂಡಿರಲಿಲ್ಲ. ಲಕ್ಕವಳ್ಳಿ ರಸ್ತೆ ಅಭಿವೃದ್ಧಿಗೆ ಅನುದಾನ ಹಾಕಿದ್ದೇನೆ. ಕ್ಷೇತ್ರದಾದ್ಯಂತ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ನಮ್ಮ ಅವಧಿಯಲ್ಲಿ ತರೀಕೆರೆ ಪಟ್ಟಣದ ರಸ್ತೆ ಯನ್ನು ಅಭಿವೃದ್ಧಿ ಪಡಿಸಲಾಗಿದೆ. ಕೆಎಸ್.ಆರ್.ಟಿ.ಸಿ. ನೂತನ ಬಸ್ ನಿಲ್ದಾಣ, ಪುರಸಭೆ ನೂತನ ಕಟ್ಟಡ, ರಂಗಮಂದಿರ ನಿರ್ಮಾಣಕ್ಕೆ ಅನುದಾನ, ಭಾವಿಕೆರೆ ಪಾಲಿಟೆಕ್ನಿಕ್ ಕಾಲೇಜು, 120 ಕರೆಗಳಿಗೆ ನೀರು ತುಂಬಿಸುವ ಕಾರ್ಯ, ಸಿ.ಎಂ. ಪರಿಹಾರ ನಿಧಿ ಇತ್ಯಾದಿ ಕ್ಷೇತ್ರದಾದ್ಯಂತ ಅನೇಕ ಅಭಿವೃದ್ಧಿದ್ದಿ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ. ಮಾಜಿ ಶಾಸಕರು ಪೊಳ್ಳು ಹೇಳಿಕೆ ಕೊಡುವುದನ್ನು ಬಿಡಲಿ ಎಂದು ಹೇಳಿದರು.ಕಾಡಾ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ ಕೇಂದ್ರ ಸರ್ಕಾರ ಸ್ವಹಿತಕ್ಕೆ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಇದು ಜನರ ಗಮನದಲ್ಲಿದೆ. ಈಗ ಚುನಾವಣಾ ಆಯೋಗವನ್ನು ಬಳಸಿ ದೇಶದ ಮತದಾರರ ಹಕ್ಕುಗಳನ್ನು ಕಸಿಯುತ್ತಿದೆ. ಈ ಹಿನ್ನಲೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂದಿ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲದ ಜೊತೆಗೆ ಈ ವಿಚಾರ ಪ್ರತಿ ಮನೆಗೆ ತಲುಪಿಸಬೇಕು ಎಂದು ಹೇಳಿದರು.
ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಯು.ಫಾರೂಕ್ ಮಾತನಾಡಿ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರು ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಭಾರಿ ಪ್ರತಿಭಟನೆ ಮಾಡುತ್ತಿದ್ದು ಲಕ್ಷಾಂತರ ಜನ ಬೆಂಬಲಿಸಿದ್ದಾರೆ. ಜ್ಞಾನೇಶ್ ಕುಮಾರ್ ವಜಾಕ್ಕೆ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಇದನ್ನು ಬೆಂಬಲಿಸಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಎಸ್.ಐ.ಆರ್.ಪ್ರಕ್ರಿಯೆಯಲ್ಲಿ ಮತಗಳ್ಳತನ ನಡೆಯುತ್ತಿದ್ದು ಫಾರಂ ನಂ.7ನ್ನು ದುರುಪಯೋಗ ಪಡಿಸಿ ಅರ್ಹ ಮತದಾರರನ್ನು ಮತಪಟ್ಟಿಯಿಂದ ತೆಗೆದು ಹಾಕುತ್ತಿರುವುದು ಸರಿಯಲ್ಲ. ರಾಹುಲ್ ಗಾಂದಿ ಎಸ್.ಐ.ಆರ್.ವಿರುದ್ಧ ಪ್ರತಿಭಟಿಸಿದ ನಂತರ ಎಚ್ಚತ್ತ ಆಯೋಗ ಅಧಾರ ಕಾರ್ಡ್ ಕೊಡಿ ಸರಿಪಡಿಸುತ್ತೇವೆ ಎಂದು ತಿಳಿಸಿದೆ. ಇದು ಪ್ರತಿಭಟನೆಗೆ ದೊರೆತ ಜಯ ಎಂದು ತಿಳಿಸಿದರು.ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಹೇಮಲತಾ ರೇವಣ್ಣ ಮಾತನಾಡಿ ಎಸ್.ಐ.ಆರ್.ಮತ ಪರಿಷ್ಕರಿಣೆಯಲ್ಲಿ ಅಧಿಕಾರಿಗಳು ಕೇಳುತ್ತಿರುವ ದಾಖಲೆ ಒದಗಿಸಲು ಆಗುತ್ತಿಲ್ಲ. ಜನರಿಗೆ ಇದರಿಂದ ಅನ್ಯಾಯ ಮತ್ತು ತೊಂದರೆಯಾಗುತ್ತಿದೆ. ಹತ್ತಾರು ಕೋಟಿ ಮತಗಳು ಡಿಲೀಟ್ ಅಗುತ್ತಿದೆ ಎಂದು ತಿಳಿಸಿದರು.
ಪ್ರತಿಭಟನೆ ನಂತರ ಜ್ಞಾನೇಶ್ ಕುಮಾರ್ ಪ್ರತಿಕೃತಿ ದಹಿಸಲಾಯಿತು. ಕೆಪಿಸಿಸಿ.ಸದಸ್ಯ ಎಚ್.ವಿಶ್ವನಾಥ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಉಪಾಧ್ಯಕ್ಷ ಸಮೀವುಲ್ಲಾ ಷರೀಫ್, ನಗರಾಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಪ್ರಚಾರ ಸಮಿತಿ ಅಧ್ಯಕ್ಷ ಪರುಶುರಾಮ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪರ್ವಿನ್ ತಾಜ್, ಎಸ್.ಸಿ.ಸೆಲ್ ಅಧ್ಯಕ್ಷ ಬಿ.ಜಿ.ಗೌರೀಶ್, ಸೇವಾದಳ ಅದ್ಕ್ಷಕ್ಷ ಟಿ.ಎನ್.ಜಗದೀಶ್ಭಾ ಗವಹಿಸಿದ್ದರು.14ಕೆಟಿಆರ್.ಕೆ.1ಃ
ತರೀಕೆರೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ನಡೆದ ಎಸ್.ಐ.ಆರ್.ಅಭಿಯಾನದ ಹೆಸರಿನಲ್ಲಿ ನಡೆಯುತ್ತಿರುವ ಮತಗಳ್ಳತನ ವಿರೋಧಿಸಿ ಬೃಹತ್ ಪ್ರತಿಭಟನಾ ಸಭೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿದರು. ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಚ್.ಯು.ಫಾರೂಕ್ ಮತ್ತಿತರರು ಇದ್ದರು.