ಮೀನುಗಾರಿಕೆ ಹರಾಜು ಪ್ರಕ್ರಿಯೆಗೆ ಶಾಸಕ ಗೋವಿಂದಪ್ಪ ಆಕ್ಷೇಪ
KannadaprabhaNewsNetwork | Published : Oct 14 2023, 01:00 AM IST
ಮೀನುಗಾರಿಕೆ ಹರಾಜು ಪ್ರಕ್ರಿಯೆಗೆ ಶಾಸಕ ಗೋವಿಂದಪ್ಪ ಆಕ್ಷೇಪ
ಸಾರಾಂಶ
ವಿವಿ ಸಾಗರ ಜಲಾಶಯದಲ್ಲಿ ಪ್ರಕ್ರಿಯೆಗೆ ಬಿ.ಜಿ.ಗೋವಿಂದಪ್ಪ ಆಕ್ಷೇಪ
ಕನ್ನಡಪ್ರಭ ವಾರ್ತೆ ಹೊಸದುರ್ಗ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಮೀನುಗಾರಿಕೆ ನಡೆಸಲು ಹರಾಜು ಪ್ರಕ್ರಿಯೆಗೆ ಮುಂದಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರ ನಡೆಗೆ ಶಾಸಕ ಬಿ.ಜಿ.ಗೋವಿಂದಪ್ಪ ಆಕ್ಷೇಪ ವ್ಯಕ್ತಪಡಿಸಿದರು ತಾಲೂಕಿನ ಶ್ರೀರಾಂಪುರದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಿದ್ದ ಶಾಸಕರಿಗೆ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರ ತಂಡ ಮುತ್ತಿಗೆ ಹಾಕಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಕುರಿತು ಸುದ್ದಿಗಾರ ರೊಂದಿಗೆ ಮಾತನಾಡಿ, ನಾನು ಸ್ಥಳೀಯ ಮೀನುಗಾರರ ಪರವಾಗಿದ್ದೇನೆ. ಒಂದು ವೇಳೆ ಸಚಿವರು ಹಠಕ್ಕೆ ಬಿದ್ದು ಮೀನುಗಾರಿಕೆಯನ್ನು ಹರಾಜು ಮಾಡಲು ಮುಂದಾದರೆ ನಾನೇ ಮುಂದೆ ನಿಂತು ಮೀನು ಹಿಡಿಸುತ್ತೇನೆ. ನನ್ನ ಮೇಲೆ ಬೇಕಾದರೆ ಕೇಸು ಹಾಕಿಕೊಳ್ಳಲಿ ಎಂದು ಎಚ್ಚರಿಸಿದರು. ಯಾರೋ ಒಬ್ಬನನ್ನ ಶ್ರೀಮಂತ ಮಾಡುವ ಉದ್ದೇಶದಿಂದ ಹತ್ತಾರು ವರ್ಷಗಳಿಂದ ಮೀನುಗಾರಿಕೆ ನಡೆಸಿ ಜೀವನ ನಡೆಸುತ್ತಿರುವ ಜಲಾಶಯದ ಹಿಂಭಾಗದ ಜನರ ಬದುಕು ಹಾಳಾಗಲು ನಾನು ಬಿಡುವುದಿಲ್ಲ. ಇಲ್ಲಿಯವರೆಗೆ ಹೇಗೆ ಪರವಾನಗಿ ಪದ್ಧತಿಯ ಮೇಲೆ ಮೀನುಗಾರಿಕೆ ನಡೆಯುತ್ತಿದೆ ಅದೇ ರೀತಿ ಮುಂದುವರೆಯಲಿ. ಇದರಲ್ಲಿ ಯಾವ ಬದಲಾವಣೆಯು ಬೇಡ ಎಂದರು. ಸ್ಥಳದಲ್ಲಿಯೇ ದೂರವಾಣಿ ಮೂಲಕ ಬೆಂಗಳೂರಿನ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಿಗೆ ಕರೆ ಮಾಡಿ ಯಾವುದೇ ಕಾರಣಕ್ಕೂ ಹರಾಜು ಪ್ರಕ್ರಿಯೆ ಮುಂದುವರಿಸಬಾರದು. ಈ ಬಗ್ಗೆ ನಾನು ಯಾವುದೇ ತರದ ಹೋರಾಟಕ್ಕೂ ಸಿದ್ಧನಿದ್ದೇನೆ. ನಾನು ಜನಸಾಮಾನ್ಯರ ಪರವಾಗಿದ್ದೇನೆ. ಹಾಗೆ ನೀವು ಜನಸಾಮಾನ್ಯರ ಪರವಾಗಿ ನಿಲ್ಲಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಈ ವೇಳೆ ಮೀನುಗಾರಿಕೆ ಸಹಕಾರ ಸಂಘದ ಅಧ್ಯಕ್ಷ ಜಿ ಪ್ರಸಾದ್, ಉಪಾಧ್ಯಕ್ಷ ಕೃಪಾಕರ, ಕಾರ್ಯದರ್ಶಿ ಕುಮಾರಸ್ವಾಮಿ ಸೇರಿದಂತೆ ಸಂಘದ ಸದಸ್ಯರುಗಳು ನಿರ್ದೇಶಕರುಗಳು ಹಾಜರಿದ್ದರು.