ಸಾರಾಂಶ
ಮಳೆಯಿಂದಾಗಬಹುದಾದ ವಿಪತ್ತುಗಳ ನಿರ್ವಹಣೆಯ ಬಗ್ಗೆ ಕಾಪು ವಿಧಾನಸಭಾ ವ್ಯಾಪ್ತಿಯ ಇಲಾಖಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರೊಂದಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಭೆ ನಡೆಸಿದರು.
ಕಾಪು ಕ್ಷೇತ್ರ ವ್ಯಾಪ್ತಿಯ ಇಲಾಖಾಧಿಕಾರಿ ಹಾಗೂ ಗ್ರಾಪಂ ಅಧ್ಯಕ್ಷರೊಂದಿಗೆ ಶಾಸಕರ ಸಭೆಕನ್ನಡಪ್ರಭ ವಾರ್ತೆ ಕಾಪು
ಮಳೆಯಿಂದಾಗಬಹುದಾದ ವಿಪತ್ತುಗಳ ನಿರ್ವಹಣೆಯ ಬಗ್ಗೆ ಕಾಪು ವಿಧಾನಸಭಾ ವ್ಯಾಪ್ತಿಯ ಇಲಾಖಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರೊಂದಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುರುವಾರ ಕಾಪು ತಾಲೂಕು ಆಡಳಿತ ಸೌಧದಲ್ಲಿ ಸಭೆ ನಡೆಸಿದರು.ಮಳೆಯಿಂದ ಆಗುವ ಆಸ್ತಿಪಾಸ್ತಿ ಹಾನಿಗೆ ಕಂದಾಯ ಮತ್ತು ಇತರ ಇಲಾಖೆಗಳು ಸಮನ್ವಯತೆಯಿಂದ ಸ್ಥಳ ಪರಿಶೀಲನೆ ನಡೆಸಿ ಗರಿಷ್ಠ ಪರಿಹಾರ ನೀಡಬೇಕು. ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರ, ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕು. ಮಳೆ ಕಡಿಮೆಯಾಗುತ್ತಿದ್ದಂತೆ ಲೋಕೋಪಯೋಗಿ ರಸ್ತೆ ಮತ್ತು ಜಿ.ಪಂ. ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಶಾಲಾ ಕಾಲೇಜುಗಳು ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಜಾತಿ, ಆದಾಯ ಪ್ರಮಾಣ ಪತ್ರ ನೀಡಲು ವಿಳಂಬ ಮಾಡದಂತೆ, 9/11 ಅರ್ಜಿ ಮತ್ತು ಇತರ ಕಡತಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.ಮಲೇರಿಯಾ, ಡೆಂಘೀ, ಅತಿಸಾರ ಮುಂತಾದ ಸಾಂಕ್ರಾಮಿಕ ರೋಗಗಳು ಹರಡದಂತೆ, ಮಲಿನ ನೀರು ಮತ್ತು ಮಲಿನ ತ್ಯಾಜ್ಯಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಪುರಸಭಾ ಮುಖ್ಯಾಧಿಕಾರಿಗಳಿಗೆ ಮತ್ತು ಕಡಲ್ಕೊರೆತ ತಡೆಗೆ ಯೋಜನೆ ಸಿದ್ಧಪಡಿಸುವಂತೆ ಬಂದರು ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಸಭೆಯಲ್ಲಿ ಕಾಪು ತಹಸೀಲ್ದಾರ್ ಪ್ರತಿಭಾ ಆರ್., ಪುರಸಭೆಯ ಮುಖ್ಯಾಧಿಕಾರಿ ನಾಗರಾಜ್, ಕಾಪು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಉಡುಪಿ ತಾ.ಪಂ. ಸಹಾಯಕ ನಿರ್ದೇಶಕಿ ಫರ್ಜಾನ, ವಿವಿಧ ಗ್ರಾ.ಪಂ. ಅಧ್ಯಕ್ಷರು, ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.