ಚಿಕ್ಕಮಗಳೂರುಸರ್ಕಾರದ ಯೋಜನೆಗಳು ಹಾಗೂ ಸವಲತ್ತು ನೇರವಾಗಿ ಜನರ ಮನೆ ಬಾಗಿಲಿಗೆ ತಲುಪಬೇಕು. ಅಧಿಕಾರಿಗಳು ಕಾಟಾ ಚಾರಕ್ಕೆ ಸಭೆ ನಡೆಸದೆ ಸಾರ್ವಜನಿಕರ ಕುಂದುಕೊರತೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ನಿರ್ದೇಶಿಸಿದರು.
ಲಕ್ಯಾ ಗ್ರಾಮದಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಜನಸಂಪರ್ಕ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸರ್ಕಾರದ ಯೋಜನೆಗಳು ಹಾಗೂ ಸವಲತ್ತು ನೇರವಾಗಿ ಜನರ ಮನೆ ಬಾಗಿಲಿಗೆ ತಲುಪಬೇಕು. ಅಧಿಕಾರಿಗಳು ಕಾಟಾ ಚಾರಕ್ಕೆ ಸಭೆ ನಡೆಸದೆ ಸಾರ್ವಜನಿಕರ ಕುಂದುಕೊರತೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ನಿರ್ದೇಶಿಸಿದರು.
ತಾಲೂಕಿನ ಲಕ್ಯಾ ಗ್ರಾಮದ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಶನಿವಾರ ಪ್ರಜಾಸೇವಾ ಇಲಾಖೆಯಿಂದ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜನರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರವೇ ಅಧಿಕಾರಿಗಳ ತಂಡವನ್ನು ಮನೆಬಾಗಿಲಿಗೆ ಕಳುಹಿಸಿ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ವ್ಯವಸ್ಥೆ ಜಾರಿಗೆ ತಂದಿದೆ. ಶಾಸಕಾಂಗ ಹಾಗೂ ಕಾರ್ಯಾಂಗ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಸರ್ಕಾರದ ಉದ್ದೇಶ ಈಡೇರಲಿದೆ ಎಂದರು.ಕಳೆದ ಮೂರು ವರ್ಷಗಳಲ್ಲಿ ಲಕ್ಯಾ ಹೋಬಳಿ 10 ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಚೆಕ್‌ಡ್ಯಾಂ ಸೇರಿದಂತೆ ₹30.97 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನೂ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದರು.ರೈತರಿಗೆ ಕನಿಷ್ಠ ಆರು ಗಂಟೆ ತ್ರಿಫೇಸ್ ವಿದ್ಯುತ್ ನೀಡಲು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದಾರೆ. ಕಣಿವೆಹಳ್ಳಿ ಹಾಗೂ ಕಳಸಾಪುರ ಭಾಗದ ಅಡೆತಡೆ ನಿವಾರಣೆಯಾಗಿದೆ. ಗಾಣದಾಳು ವಿದ್ಯುತ್ ಉಪಕೇಂದ್ರ 10 ದಿನಗಳಲ್ಲಿ ಚಾರ್ಜ್ ಆಗಲಿದೆ. ಇದರಿಂದ ಹೋಬಳಿ ಸುದೀರ್ಘ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.ಕೇಂದ್ರ ಸರ್ಕಾರದ ಬರ ಘೋಷಣೆ ಮಾನದಂಡ ಸೂಕ್ತವಾಗಿಲ್ಲ. ತಾಲೂಕು ಮಟ್ಟದ ಬದಲಿಗೆ ಹೋಬಳಿವಾರು ಬರಪೀಡಿತ ಪ್ರದೇಶ ಘೋಷಿಸಬೇಕು. ಮಲೆನಾಡು ಭಾಗದಲ್ಲಿ ಮಳೆಯಾಗಿದ್ದರೂ ಲಕ್ಯಾ, ಅಂಬಳೆ ಹಾಗೂ ಕಸಬಾ ಹೋಬಳಿಗಳ ಕೆಲವು ಪ್ರದೇಶ ತೀವ್ರ ಬರ ಎದುರಿಸುತ್ತಿವೆ. ಕಡೂರು ಮತ್ತು ಚಿಕ್ಕಮಗಳೂರು ತಾಲೂಕಿನ ಬಾಕಿ ರಾಗಿ ಬೆಳೆಗಾರರ ಪ್ರೋತ್ಸಾಹ ಧನವನ್ನು ವಾರದೊಳಗೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಶಾಶ್ವತ ನೀರಾವರಿಗೆ ಒತ್ತು: ಗಾಯತ್ರಿ
ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ ಸರ್ಕಾರದ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸ್ಥಳದಲ್ಲೇ ಪರಿಹಾರ ಒದಗಿಸಬೇಕು ಎಂದರು.ಲಕ್ಯಾ ಹಾಗೂ ಸುತ್ತಮುತ್ತಲ ಪ್ರದೇಶಗಳು ಅರೆಮಲೆನಾಡಾಗಿದೆ. ಇಲ್ಲಿನ ರೈತರು ರಾಗಿ, ಹುರುಳಿ ಬೆಳೆಯನ್ನೇ ಅವಲಂಬಿ ಸಿದ್ದಾರೆ. ಮಳೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಶಾಶ್ವತ ನೀರಾವರಿ ಯೋಜನೆಗಳ ಮೂಲಕ ನೀರು ಒದಗಿಸಲು ಸರ್ಕಾರ ಹಾಗೂ ಶಾಸಕರು ಶ್ರಮಿಸಬೇಕು ಎಂದು ಒತ್ತಾಯಿಸಿದರು.ಉಚಿತ ವಿದ್ಯುತ್, ಗೃಹಲಕ್ಷ್ಮೀ, ಶಕ್ತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳು ಜನರ ಜೀವನಕ್ಕೆ ಆಸರೆ. ಅರ್ಹರು ಸೌಲಭ್ಯ ಪಡೆಯಬೇಕು ಎಂದರು.
ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾತನಾಡಿ ಸ್ಥಳೀಯ ಜನರ ಅಗತ್ಯತೆ ಹಾಗೂ ಆಶೋತ್ತರಗಳನ್ನು ಅರಿತು ಯೋಜನೆ ರೂಪಿಸುವುದು ಅಗತ್ಯ. ‘ಪ್ರಜಾಸೇವಾ’ ಕಾರ್ಯಕ್ರಮ ಆಡಳಿತವನ್ನು ಜನರ ಮನೆಬಾಗಿಲಿಗೆ ತಲುಪಿಸುವ ಪ್ರಮುಖ ವೇದಿಕೆಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಮೂರು ವಿಭಾಗಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಸ್ಥಳದಲ್ಲೇ ಅಥವಾ ವಾರದೊಳಗೆ ಪರಿಹರಿಸಬಹುದಾದ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಲಾಗುವುದು. ರಸ್ತೆ ನಿರ್ಮಾಣದಂತಹ ಮೂಲ ಸೌಕರ್ಯ ಬೇಡಿಕೆಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಿ ಪರಿಹರಿಸಲಾಗುವುದು. ನೀತಿ ನಿಯಮಗಳಿಗೆ ಸಂಬಂಧಿಸಿದ ವಿಷಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ ಒನ್ ಮೂಲಕ ಸಲ್ಲಿಸುವ ಅರ್ಜಿಗಳಿಗೆ ಜಿಆರ್‌ಎಸ್‌ಐಪಿ ಸಂಖ್ಯೆ ನೀಡಿ ಸ್ಥಿತಿಗತಿ ಟ್ರ್ಯಾಕ್ ಮಾಡಲಾಗುತ್ತಿದೆ ಎಂದು ತಿಳಿಸಿದರು.ತಹಸೀಲ್ದಾರ್ ರೇಷ್ಮಾಶೆಟ್ಟಿ ಮಾತನಾಡಿ ಲಕ್ಯಾ ಹೋಬಳಿಯಲ್ಲಿ ಸುಮಾರು 300 ಜನರಿಗೆ ಪೋಡಿ ಮಾಡಿಕೊಡಲು ಅನು ಮೋದನೆ ನೀಡಲಾಗಿದೆ. ಪಿಂಚಣಿ ಆದಾಯ ಮಿತಿ ಹೆಚ್ಚಳದ ಬಳಿಕ ಹೋಬಳಿಯಲ್ಲಿ 2,000ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಈಗಾಗಲೇ 700 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. ಉಳಿದ ಅರ್ಜಿಯನ್ನು ಪ್ರತಿ ಬುಧವಾರ ಪರಿಶೀಲಿಸಿ ಶೀಘ್ರ ವಿಲೇವಾರಿ ಮಾಡಲಾಗುವುದು ಎಂದರು.
ಸಭೆಯಲ್ಲಿ ಸ್ವೀಕರಿಸಲಾದ 30ಕ್ಕೂ ಹೆಚ್ಚು ಅರ್ಜಿಗಳನ್ನು ಶಾಸಕರು ಸಾರ್ವಜನಿಕರ ಸಮ್ಮುಖದಲ್ಲೇ ಪರಿಶೀಲಿಸಿ ಅಧಿಕಾರಿ ಗಳಿಗೆ ಸೂಕ್ತ ಸೂಚನೆ ನೀಡಿದರು.ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ಉಪ ಅರಣ್ಯ ಸಂರಕ್ಷಣಾ ಧಿಕಾರಿ ಕೆ.ಟಿ.ಬೋರಯ್ಯ, ತಾಪಂ ಇಒ ವಿಜಯಕುಮಾರ್, ಬಗರ್ ಹುಕುಂ ಸಮಿತಿ ಸದಸ್ಯರಾದ ಕೆಂಗೇಗೌಡ, ಶಂಕರ್ ನಾಯಕ್, ಕೆಡಿಪಿ ಸದಸ್ಯ ಸಂತೋಷ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.-- ಬಾಕ್ಸ್ --ಪಿಂಚಣಿ ಸಮಸ್ಯೆಗೆ ಶೀಘ್ರ ಪರಿಹಾರಹಿಂದಿನ ಸರ್ಕಾರದ ಅವಧಿಯಲ್ಲಿ ವಿಧಿಸಲಾಗಿದ್ದ ಕಠಿಣ ನಿಯಮಗಳಿಂದ ಸಂಧ್ಯಾ ಸುರಕ್ಷಾ ಹಾಗೂ ವಿಧವಾ ವೇತನ ಸ್ಥಗಿತಗೊಂಡಿತ್ತು. ವಾರ್ಷಿಕ ಆದಾಯ ಮಿತಿ 32 ಸಾವಿರದಿಂದ 1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಲಕ್ಯಾ ಹೋಬಳಿಯೊಂದರಲ್ಲೇ 2,400ಕ್ಕೂ ಹೆಚ್ಚು ಅರ್ಹರು ಇದರ ಲಾಭದಿಂದ ವಂಚಿತರಾಗಿದ್ದರು. ಈಗಾಗಲೇ 600 ಜನರ ದಾಖಲೆ ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ವಾರದೊಳಗೆ ಅವರ ಖಾತೆಗೆ ಹಣ ಜಮೆಯಾಗಲಿದೆ. ಉಳಿದ 1,800 ಫಲಾನುಭವಿಗಳ ಮನೆ ಗಳಿಗೆ ಕಂದಾಯ ಅಧಿಕಾರಿಗಳು ತೆರಳಿ ದಾಖಲೆ ಸಂಗ್ರಹಿಸಲಿದ್ದು, ತಾಲೂಕು ಕಚೇರಿಗೆ ಅಲೆಯುವ ಅಗತ್ಯವಿಲ್ಲ ಎಂದು ಶಾಸಕ ಎಚ್.ಡಿ,ತಮ್ಮಯ್ಯ ಭರವಸೆ ನೀಡಿದರು.