ಶಾಸಕ ಎಚ್‌.ಟಿ. ಮಂಜು ವಿರುದ್ಧ ಅವಹೇಳನಕಾರಿ ಮಾತು: ಜೆಡಿಎಸ್‌ ಖಂಡನೆ

| Published : Feb 20 2025, 12:48 AM IST

ಶಾಸಕ ಎಚ್‌.ಟಿ. ಮಂಜು ವಿರುದ್ಧ ಅವಹೇಳನಕಾರಿ ಮಾತು: ಜೆಡಿಎಸ್‌ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ವೇದಿಕೆಗಳಲ್ಲಿ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ವಿರುದ್ಧ ಮನ್ಮುಲ್ ನೂತನ ನಿರ್ದೇಶಕರಾದ ಡಾಲು ರವಿ ಮತ್ತು ಎಂ.ಬಿ.ಹರೀಶ್ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದನ್ನು ಕೆ.ಆರ್.ಪೇಟೆ ತಾಲೂಕು ಜೆಡಿಎಸ್ ಕಾರ್ಯಕರ್ತರು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಾರ್ವಜನಿಕ ವೇದಿಕೆಗಳಲ್ಲಿ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ವಿರುದ್ಧ ಮನ್ಮುಲ್ ನೂತನ ನಿರ್ದೇಶಕರಾದ ಡಾಲು ರವಿ ಮತ್ತು ಎಂ.ಬಿ.ಹರೀಶ್ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದನ್ನು ತಾಲೂಕು ಜೆಡಿಎಸ್ ಕಾರ್ಯಕರ್ತರು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ ನೇತೃತ್ವದಲ್ಲಿ ಬಹಿರಂಗ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾರ್ಯಕರ್ತರು, ಮನ್ಮುಲ್ ನಿರ್ದೇಶಕರಾದ ಡಾಲು ರವಿ ಮತ್ತು ಎಂ.ಬಿ.ಹರೀಶ್ ತಮ್ಮ ನಡವಳಿಕೆ ಬದಲಿಸಿಕೊಳ್ಳದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆಂದು ಎಚ್ಚರಿಸಿದರು.

ತಾಲೂಕು ಅಧ್ಯಕ್ಷ ಎ.ಎನ್.ಜಾನಕೀರಾಂ ಮಾತನಾಡಿ, ಜೆಡಿಎಸ್ ಕಾರ್ಯಕರ್ತರ ಪಕ್ಷ. ನಮ್ಮ ಪಕ್ಷದ ನಾಯಕರನ್ನು ಅಪಮಾನಿಸಿದರೆ ಅದು ಕಾರ್ಯಕರ್ತರು ಮತ್ತು ಮತದಾರರನ್ನು ಅಪಮಾನಿಸಿದಂತೆ. ಹೋದಲ್ಲಿ ಬಂದಲ್ಲಿ ಶಾಸಕರನ್ನು ಏಕವಚನದಲ್ಲಿ ನಿಂದಿಸಿದ ಮಾತ್ರಕ್ಕೆ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ ಎಂದರು.

ತಾಲೂಕು ಸುಸಂಸ್ಕೃತ ರಾಜಕಾರಣಕ್ಕೆ ಹೆಸರಾಗಿದೆ. ಶಾಸಕರನ್ನು ನಿಂದಿಸುವ ಮೂಲಕ ಕಾರ್ಯಕರ್ತರ ಭಾವನೆ ಕೆರಳಿಸಬೇಡಿ. ಡೈರಿ ಚುನಾವಣೆಯಲ್ಲಿ ನಾವು ಸೋತಿದ್ದೇವೆ. ರಾಜಕಾರಣದಲ್ಲಿ ಸೋಲು ಗೆಲುವು ಸಹಜ. ನೀವು ಮಾಡುವ ಟೀಕೆಗಳು ಆರೋಗ್ಯಕರವಾಗಿರಬೇಕು. ಅದು ಶಾಸಕ ಸ್ಥಾನವನ್ನು ಅಪಮಾನಿಸಬಾರದು. ನಿಮ್ಮ ನಡವಳಿಕೆ ಬದಲಿಸಿಕೊಂಡು ಡೈರಿಗಳ ಅಭಿವೃದ್ಧಿ ಕಡೆ ಗಮನ ಹರಿಸಿ ಎಂದು ಎಚ್ಚರಿಸಿದರು.

ಬಹುತೇಕ ಕಾರ್ಯಕರ್ತರು ಮಾತನಾಡಿ, ಮನ್ಮುಲ್ ನಿರ್ದೇಶಕರಾದ ಡಾಲು ರವಿ ಮತ್ತು ಎಂ.ಬಿ.ಹರೀಶ್ ಅವರ ನಡವಳಿಕೆ ಖಂಡಿಸಿ, ಹಣ ಮತ್ತು ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಧಿಕಾರ ಬಂದಾಗ ಅಹಂ ಸಲ್ಲದು. ಚುನಾವಣೆ ವೇಳೆ ರಾಜಕೀಯ ಲಾಭಕ್ಕಾಗಿ ಜೆಡಿಎಸ್ ಸೇರಿದ ನೀವು ನಮ್ಮಿಂದಲೇ ಜೆಡಿಎಸ್ ಗೆದ್ದಿದೆ ಎನ್ನುವ ಭಾವನೆಯಲ್ಲಿದ್ದೀರಿ ಎಂದರು.

ನಿಮ್ಮ ಜೇಬಿನ ತುಂಬ ಮತದಾರರಿದ್ದರೆ ನಿಮ್ಮ ರಾಜಕೀಯ ಗುರು ಕೆ.ಬಿ.ಚಂದ್ರಶೇಖರ್ ಸತತ ಮೂರು ಸಲ ಏಕೆ ಸೋಲುತ್ತಿದ್ದರು?. ಡೈರಿ ಚುನಾವಣೆಯಲ್ಲಿ 137 ಮತ ಪಡೆದು ಗೆದ್ದು ಬೀಗುತ್ತಿರುವ ನಿಮಗೆ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಅವರಿಗೆ 84 ಸಾವಿರ ಮತದಾರರು ಮತ ಹಾಕಿ ಶಾಸಕರನ್ನಾಗಿ ಮಾಡಿದ್ದಾರೆ ಎನ್ನುವುದು ನೆನಪಿರಲಿ ಎಂದು ತಿರುಗೇಟು ನೀಡಿದರು.

ಮಾಜಿ ಸ್ಪೀಕರ್ ಕೃಷ್ಣ ಮತ್ತು ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಅವರಂತಹ ರಾಜಕೀಯ ಮುತ್ಸದ್ದಿಗಳನ್ನೆ ಜನ ಮೂಲೆಗೆ ತಳ್ಳಿದರು. ರಾಜಕೀಯ ಲಾಭಕ್ಕಾಗಿ ಜೆಡಿಎಸಗೆ ಬಂದ ನೀವು ಮನ್ಮುಲ್ ಚುನಾವಣೆಯಲ್ಲಿ ಗೆದ್ದ ನಂತರ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತೀರಿ ಎನ್ನುವ ಅರಿವು ನಮಗೆ ಮೊದಲೇ ಇತ್ತು. ಆದ್ದರಿಂದಲೇ ಪಕ್ಷದ ಉಳಿವಿಗಾಗಿ ನಿಮಗೆ ಟಿಕೆಟ್ ನೀಡದೆ ಸ್ವತಃ ಶಾಸಕರೇ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಯಿತು ಎಂದರು.

ಚುನಾವಣೆಯ ಸೋಲು ಕ್ಷೇತ್ರದ ಸಮಸ್ತ ಜೆಡಿಎಸ್ ಕಾರ್ಯಕರ್ತರ ಸೋಲು. ಈ ಸೋಲನ್ನು ನಾವು ಸವಾಲಾಗಿ ಸ್ವೀಕರಿಸಿದ್ದು ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ಗೆದ್ದು ತೋರಿಸುತ್ತೇವೆ. ಚುನಾವಣೆಯಲ್ಲಿ ಗೆದ್ದ ನಂತರ ಒಬ್ಬರು ದುರ್ಯೋಧನ ಮತ್ತೊಬ್ಬರು ರಾವಣ ಪಾತ್ರ ಮಾಡುತ್ತಿದ್ದೀರಿ ಎಂದು ಡಾಲು ರವಿ ಮತ್ತು ಎಂ.ಬಿ.ಹರೀಶ್ ಅವರ ನಡವಳಿಕೆಯನ್ನು ಛೇಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವಿದೆ. ಜಿಲ್ಲಾ ಮಂತ್ರಿಗಳ ಸಹಕಾರ ನಮಗಿದೆ ಎಂದು ರಾಜಕೀಯ ದುರಾಸೆಗೆ ಒಳಗಾಗಿ ಕ್ಷೇತ್ರದ ಶಾಸಕರನ್ನು ಏಕ ವಚನದಲ್ಲಿ ನಿಂದಿಸುತ್ತಾ ಆತ್ಮಸುಖ ಅನುಭವಿಸುತ್ತಿದ್ದೀರಿ. ನೀವು ರಾಜಕಾರಣ ಮಾಡಿ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಶಾಸಕರ ವ್ಯಕ್ತಿಗತ ತೇಜೋವಧೆ ಮಾಡುವುದಕ್ಕೆ ನಮ್ಮ ವಿರೋಧವಿದೆ. ನಿಮ್ಮ ವರ್ತನೆ ಬದಲಾಗದಿದ್ದರೆ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ದಂಗೆ ಏಳಬೇಕಾಗುತ್ತದೆಂದು ಎಚ್ಚರಿಸಿದರು.

ಈ ವೇಳೆ ಮನ್ಮುಲ್ ಪರಾಜಿತ ಅಭ್ಯರ್ಥಿ ನಾಟನಹಳ್ಳಿ ಮಹೇಶ್, ತಾಪಂ ಮಾಜಿ ಸದಸ್ಯರಾದ ಹುಲ್ಲೇಗೌಡ, ಮಲ್ಲೇನಹಳ್ಳಿ ಮೋಹನ್, ಎ.ಎನ್.ಸಂಜೀವಪ್ಪ, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಬಲದೇವ್, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ತಾಲೂಕು ವೀರಶೈವ ಮಹಾಸಭಾ ಘಟಕದ ಮಾಜಿ ಅಧ್ಯಕ್ಷರಾದ ವಿ.ಎಸ್.ಧನಂಜಯ, ತೋಂಟಪ್ಪಶೆಟ್ಟಿ, ಮುಖಂಡರಾದ ಬಲ್ಲೇನಹಳ್ಳಿ ನಂದೀಶ್, ನರಸನಾಯಕ, ರವಿಕುಮಾರ್, ಅಕ್ಕಿಹೆಬ್ಬಾಳು ಶ್ರೀನಿವಾಸ್, ಶೀಳನೆರೆ ಸ್ವಾಮೀಗೌಡ, ಮಾಕವಳ್ಳಿ ವಸಂತಕುಮಾರ್, ಭೈರಾಪುರ ಹರೀಶ್, ವಡ್ಡರಹಳ್ಳಿ ಮಹದೇವೇಗೌಡ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.