ರೈತರ ಕುಮ್ಕಿ ಜಮೀನು ಲೀಸ್‌ ಆದೇಶ ರದ್ಧತಿಗೆ ಶಾಸಕ ಹರೀಶ್ ಪೂಂಜಾ ಆಗ್ರಹ

| Published : Jul 14 2024, 01:31 AM IST / Updated: Jul 14 2024, 01:32 AM IST

ರೈತರ ಕುಮ್ಕಿ ಜಮೀನು ಲೀಸ್‌ ಆದೇಶ ರದ್ಧತಿಗೆ ಶಾಸಕ ಹರೀಶ್ ಪೂಂಜಾ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮಾರ್ಚ್‌ನಲ್ಲಿ ಸರ್ಕಾರ ಆದೇಶ ಹೊರಡಿಸಿದ್ದು, ಮೂರು ತಿಂಗಳ ಒಳಗೆ ಗುತ್ತಿಗೆಗೆ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಿದೆ. ಈಗ ಅವಧಿ ಮುಗಿದರೂ ಇದು ರೈತರ ಪಾಲಿಗೆ ಜಮೀನು ಕಳಕೊಳ್ಳುವ ಭೀತಿಯನ್ನು ದೂರ ಮಾಡಿಲ್ಲ ಎಂದು ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಅವಿಭಜಿತ ದ.ಕ.ಜಿಲ್ಲೆಯಲ್ಲಿ ರೈತರ ಕುಮ್ಕಿ ಜಮೀನನ್ನು ಲೀಸಿಗೆ ನೀಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ರೈತರ ಪಾಲಿಗೆ ಸಂಕಷ್ಟ ತರಲಿದ್ದು, ಈ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಆಗ್ರಹಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಪಟ್ಟಾ ಜಮೀನಿನ ವರ್ಗ ಸ್ಥಳದಿಂದ ನಾಲ್ಕೂವರೆ ಸಂಕಲೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನನ್ನು ಕುಮ್ಕಿ ಎಂದು ಕರೆಯುತ್ತೇವೆ. ಈ ಜಮೀನನ್ನು ರೈತರು ಕೃಷಿಗೆ ಬೇಕಾದ ಸೊಪ್ಪು ಬಳಕೆಗೆ ಮೀಸಲಿರಿಸಲಾಗಿದೆ. ಹಲವು ವರ್ಷಗಳಿಂದ ಈ ಜಮೀನನ್ನು ಕೃಷಿಕರೇ ನೋಡಿಕೊಂಡು ಬರುತ್ತಿದ್ದು, ಈಗ ಸರ್ಕಾರ ಈ ಜಮೀನನ್ನು ಲೀಸ್‌ಗೆ ನೀಡುವ ಬಗ್ಗೆ ಆದೇಶ ಹೊರಡಿಸಿದೆ ಎಂದರು. 2005ಕ್ಕಿಂತ ಮೊದಲು ಈ ಜಮೀನಿನಲ್ಲಿ ಬೆಳೆ ಬೆಳೆಯುತ್ತಿದ್ದವರು ಹಾಗೂ ಒಂದು ಕುಟುಂಬಕ್ಕೆ 25 ಎಕರೆ ಜಮೀನನ್ನು ಗುತ್ತಿಗೆಗೆ ನೀಡಲು ಅವಕಾಶ ಇದೆ. ಸುಮಾರು 30 ವರ್ಷಕ್ಕೆ ಗುತ್ತಿಗೆ ಅವಧಿ ಇದ್ದು, ಏಕಗಂಟಿನಲ್ಲಿ ಮೊತ್ತವನ್ನು ನೀಡಬೇಕು. ಉಪ ಗುತ್ತಿಗೆಗೆ ನೀಡಲು ಅವಕಾಶ ಇಲ್ಲ. ಈ ಬಗ್ಗೆ ಮಾರ್ಚ್‌ನಲ್ಲಿ ಸರ್ಕಾರ ಆದೇಶ ಹೊರಡಿಸಿದ್ದು, ಮೂರು ತಿಂಗಳ ಒಳಗೆ ಗುತ್ತಿಗೆಗೆ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಿದೆ. ಈಗ ಅವಧಿ ಮುಗಿದರೂ ಇದು ರೈತರ ಪಾಲಿಗೆ ಜಮೀನು ಕಳಕೊಳ್ಳುವ ಭೀತಿಯನ್ನು ದೂರ ಮಾಡಿಲ್ಲ ಎಂದು ಅವರು ಹೇಳಿದರು.

ಲೀಸ್‌ನ ಮೊತ್ತ ಎಷ್ಟ?:

ಲೀಸ್‌ಗೆ ಜಮೀನು ಪಡೆಯಬೇಕಾದರೆ ವಾರ್ಷಿಕವಾಗಿ ನಿರ್ದಿಷ್ಟ ಮೊತ್ತವನ್ನೂ ಸರ್ಕಾರ ನಿಗದಿಪಡಿಸಿದೆ.

1 ಎಕರೆಗೆ 1 ಸಾವಿರ ರು., 1ರಿಂದ 5 ಎಕರೆಗೆ 1,500 ರು., 5 ರಿಂದ 10 ಎಕರೆಗೆ 2 ಸಾವಿರ ರು., 10ರಿಂದ 15 ಎಕರೆಗೆ ಪ್ರತಿ ಎಖರೆಗೆ 2,500 ರು., 15ರಿಂದ 20 ಎಕರೆಗೆ 3 ಸಾವಿರ ರು., 20ರಿಂದ 25 ಎಕರೆಗೆ 3,500 ರು. ಮೊತ್ತವನ್ನು ರೈತರು ಏಕಗಂಟಿನಲ್ಲಿ ಪಾವತಿಸಬೇಕಾಗಿದೆ ಎಂದರು.

ಅವಿಭಜಿತ ದ.ಕ.ಜಿಲ್ಲೆಯಲ್ಲಿ ಅಕ್ರಮ ಸಕ್ರಮ ಅರ್ಜಿ ಶೇ.70ರಷ್ಟು ವಿಲೇವಾರಿಗೊಂಡಿದೆ. ಈಗ ಕುಮ್ಕಿ ಹಕ್ಕಿನ ಮೇಲೆ ಸರ್ಕಾರ ಕಣ್ಣಿಟ್ಟಿದ್ದು, ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಮೊತ್ತ ವಸೂಲಿಗೆ ಮುಂದಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಕುಮ್ಕಿ ಹಕ್ಕು ಸಕ್ರಮಗೊಳಿಸಲು ಅಂತಿಮ ಸಿದ್ಧತೆ ನಡೆಸಲಾಗಿತ್ತು. ಒಮ್ಮೆ ಲೀಸ್‌ ನೀಡಿದರೆ ಮತ್ತೆ ಜಮೀನು ಕೃಷಿಕರದ್ದಾಗಿರಲು ಸಾಧ್ಯವಿಲ್ಲ. ಈ ಹಿಂದೆ ಸರ್ಕಾರವೇ ಕುಮ್ಕಿ ಹಕ್ಕು ನೀಡಿದ್ದು, ಈಗ ಕಾಂಗ್ರೆಸ್‌ ಸರ್ಕಾರ ಕಿತ್ತುಕೊಂಡು ಖಜಾನೆ ತುಂಬಿಸಲು ಹೊರಟಿದೆ. ಆದ್ದರಿಂದ ರೈತರ ಹಿತಾಸಕ್ತಿ ಹಿನ್ನೆಲೆಯಲ್ಲಿ ಈ ಸುತ್ತೋಲೆಯನ್ನು ಕೂಡಲೇ ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ರೈತರೊಡಗೂಡಿ ತೀವ್ರ ಹೋರಾಟ ನಡೆಸಲಿದೆ ಎಂದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್‌ ಕಾಮತ್‌, ಡಾ.ಭರತ್‌ ಶೆಟ್ಟಿ, ಭಾಗೀರಥಿ, ಪ್ರತಾಪ್‌ಸಿಂಹ ನಾಯಕ್‌, ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಮುಖಂಡರಾದ ಪ್ರೇಮಾನಂದ ಶೆಟ್ಟಿ, ಸತೀಶ್‌ ಆರ್ವಾರ್‌, ರಾಜಗೋಪಾಲ ರೈ, ವಸಂತ ಪೂಜಾರಿ ಇದ್ದರು.