ಶಾಸಕ ಹರೀಶ್‌ ಹೇಳಿಕೆಯಿಂದ ಮಹಿಳೆಯರಿಗೆ ಅವಮಾನ

| Published : Sep 06 2025, 01:01 AM IST

ಸಾರಾಂಶ

ಶಾಸಕ ಬಿ.ಪಿ. ಹರೀಶ್ ಬಿಪಿ ಹೆಚ್ಚಿಸಿಕೊಂಡು ನಾಲಿಗೆ ಹರಿಯಬಿಟ್ಟು ಮಾತನಾಡುತ್ತಾರೆ. ಎಸ್‌ಪಿ ಅವರನ್ನು ಪಮೊರಿಯನ್ ನಾಯಿಮರಿಗೆ ಹೋಲಿಸಿರುವುದು ಮಹಿಳೆಯರಿಗೆ ಮಾಡಿದ ಅವಮಾನವಾಗಿದೆ ಎಂದು ಮಾಜಿ ಶಾಸಕ ಎಸ್.ರಾಮಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಜಿಲ್ಲಾ ಎಸ್‌ಪಿ ಅವರನ್ನು ನಾಯಿಗೆ ಹೋಲಿಸಿದ್ದು ಸರಿಯಲ್ಲ: ಮಾಜಿ ಶಾಸಕ ರಾಮಪ್ಪ

- - -

ಕನ್ನಡಪ್ರಭ ವಾರ್ತೆ ಹರಿಹರ

ಶಾಸಕ ಬಿ.ಪಿ. ಹರೀಶ್ ಬಿಪಿ ಹೆಚ್ಚಿಸಿಕೊಂಡು ನಾಲಿಗೆ ಹರಿಯಬಿಟ್ಟು ಮಾತನಾಡುತ್ತಾರೆ. ಎಸ್‌ಪಿ ಅವರನ್ನು ಪಮೊರಿಯನ್ ನಾಯಿಮರಿಗೆ ಹೋಲಿಸಿರುವುದು ಮಹಿಳೆಯರಿಗೆ ಮಾಡಿದ ಅವಮಾನವಾಗಿದೆ ಎಂದು ಮಾಜಿ ಶಾಸಕ ಎಸ್.ರಾಮಪ್ಪ ಆಕ್ರೋಶ ವ್ಯಕ್ತಪಡಿಸಿದ್ದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಪಿ. ಹರೀಶ್ ಅವರು ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಜಿಲ್ಲಾ ಎಸ್‌ಪಿ ಮತ್ತು ಡಿಸಿ ಬಗ್ಗೆ ಹಗುರವಾಗಿ ಉದ್ದಟತನದಿಂದ ಮಾತನಾಡೋದನ್ನು ನಿಲ್ಲಿಸಬೇಕು. ಈ ಹಿಂದೆ ದಾವಣಗೆರೆಯ ಎಸ್‌ಪಿ ಆಗಿದ್ದ ಸೋನಿಯಾ ನಾರಂಗ್ ಆಡಳಿತ ಸಂದರ್ಭದಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಉದ್ದಟತನದ ಮಾತುಗಳಿಗೆ ಏನಾಗಿತ್ತು ಎಂಬುದನ್ನು ಹರೀಶ್ ನೆನಪಿಸಿಕೊಳ್ಳಲಿ ಎಂದರು.

ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ರೈತರು, ಬಡವರ ಜಾಗ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹೇಳುವ ಹರೀಶ್, ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ್ 4 ಬಾರಿ ಸಂಸದರಾಗಿದ್ದರು. ಇವರ ಸಾಧನೆ ಏನು ಎಂಬುದನ್ನು ಮೊದಲು ತಿಳಿಸಲಿ. ಕೈಗಾರಿಕಾ ಯೋಜನೆಗೆ ಮೀಸಲಿಟ್ಟ ಜಾಗ ಪಡೆದು ಕಾಲೇಜನ್ನು ನಿರ್ಮಿಸಿರುವುದು ಅರಿವಿಲ್ಲವೇ ಎಂದು ಪ್ರಶ್ನಿಸಿದರು.

ಇವರ ಸಂಸದರ ಅವಧಿಯಲ್ಲಿ ಜಿಲ್ಲೆ ಅಭಿವೃದ್ಧಿ ಬಗ್ಗೆ ಲೋಕಸಭಾ ಅಧಿವೇಶನದಲ್ಲಿ ಒಂದು ಬಾರಿಯೂ ಚರ್ಚೆ ಮಾಡಲಿಲ್ಲ. ಆದರೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪ್ರತಿ ಅಧಿವೇಶನದಲ್ಲಿ ಜಿಲ್ಲೆ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತುತ್ತಿರುವುದು ಜನರ ಕಾಳಜಿ ತೋರಿಸುತ್ತದೆ. ಇವರನ್ನು ಮುಂದಿನ ೨೫ ವರ್ಷಗಳ ಕಾಲ ಬಿಜೆಪಿಯವರು ಸೋಲಿಸಲು ಆಗುವುದಿಲ್ಲ ಎಂದರು.

ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ಪಕ್ಷದಲ್ಲಿತ್ತು. ನಾನು ವಿರೋಧ ಪಕ್ಷದಲ್ಲಿದ್ದರೂ ಹರಿಹರ ಕ್ಷೇತ್ರ ಅಭಿವೃದ್ಧಿಗೆ ₹೬೨೮ ಕೋಟಿ ಅನುದಾನ ತಂದು ಅಭಿವೃದ್ಧಿಪಡಿಸಿದ್ದೇನೆ. ಬಿ.ಪಿ. ಹರೀಶ್ ಗೆದ್ದು ಎರಡೂವರೆ ವರ್ಷ ಆಯ್ತು. ಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಹಣ ತಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

ತಾಲೂಕಿನ ಬೈರನಪಾದ ಯೋಜನೆಗೆ ₹೫೮ ಕೋಟಿ ಅನುದಾನದಲ್ಲಿ ಟೆಂಡರ್ ಪ್ರಕ್ರಿಯೆ ತೆರಳುವ ಸಂದರ್ಭದಲ್ಲಿ ಇದೇ ಬಿಜೆಪಿಯವರು ಅಡ್ಡಿಪಡಿಸಿ, ಈ ಯೋಜನೆ ನನೆಗುದಕ್ಕೆ ಬೀಳುವಂತೆ ಮಾಡಿದ್ದಾರೆ. ಎಸ್‌ಪಿ ಮತ್ತು ಡಿಸಿ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ, ಹರೀಶ್ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ರಾಮಪ್ಪ ಎಚ್ಚರಿಸಿದರು.

ಕೆಪಿಸಿಸಿ ಸದಸ್ಯ ಬಿ ರೇವಣಸಿದ್ದಪ್ಪ ಮಾತನಾಡಿ, ಹರಿಹರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಪ್ರಚೋದನಾಕಾರಿ ಮಾತುಗಳ ಬಿಟ್ಟು ಮೊದಲು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನಿಸಿ ಎಂದು ಹರೀಶ್ ಅವರಿಗೆ ತಾಕೀತು ಮಾಡಿದರು.

ದೂಡಾ ಮಾಜಿ ಸದಸ್ಯ ಜಿ.ವಿ. ವೀರೇಶ್, ಬಿ.ಮುಗ್ದುಂ, ಮಹಮ್ಮದ್ ಫೈರೋಜ್, ನಾಗರಾಜ್, ಸೈಯದ್ ಸನಾವುಲ್ಲಾ, ಮಹಮ್ಮದ್ ಗೌಸ್, ಹಂಚಿನ ನಾಗಣ್ಣ ಸೇರಿದಂತೆ ಇತರರಿದ್ದರು.

- - -

(ಕೋಟ್‌) ಹಿಂದೂ ಮುಸ್ಲಿಂ ಬಾಂಧವರು ಸಹೋದರರಂತೆ ಬಾಳಬೇಕು, ದಾವಣಗೆರೆಯಲ್ಲಿ ಯಾವುದೇ ಗಲಭೆಗಳು ಆಗದಿರಲಿ ಎಂಬ ಸದುದ್ದೇಶದಿಂದ ಮಲ್ಲಿಕಾರ್ಜುನ್ ಅವರು ಯಾರೇ ಗಲಾಟೆ ಮಾಡಿದರು ಮತ್ತು ಪ್ರಚೋದನೆ ನೀಡಿದರೂ ಒದ್ದು ಒಳಗೆ ಹಾಕುತ್ತೇನೆ ಎಂದು ಎಚ್ಚರಿಸಿರುವ ಹೇಳಿಕೆ ಸ್ವಾಗತಿಸುತ್ತೇವೆ.

- ಎಸ್‌.ರಾಮಪ್ಪ, ಮಾಜಿ ಶಾಸಕ.

- - -

-03ಎಚ್‌ಆರ್‌ಆರ್02:

ಹರಿಹರ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಮಾಜಿ ಶಾಸಕ ಎಸ್.ರಾಮಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.