- ಸಚಿವ ಎಸ್ಸೆಸ್ಸೆಂ ಬಗ್ಗೆ ಟೀಕೆ ಬದಲು ನಿಮ್ಮ ಕ್ಷೇತ್ರ ಜನಕ್ಕೆ ಸ್ಪಂದಿಸಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಉತ್ತರ ಕ್ಷೇತ್ರದಂತೆ ಹರಿಹರ ಕ್ಷೇತ್ರದ ಬಗ್ಗೆಯೂ ಶಾಸಕ ಬಿ.ಪಿ.ಹರೀಶ ಕಾಳಜಿ ವಹಿಸಿದ್ದರೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿದ್ದವು. ಆದರೆ, ಕ್ಷೇತ್ರಕ್ಕೆ ಹರೀಶ್ ಹೋಗುವುದೇ ಅಪರೂಪವಾಗಿದ್ದು, ಅಭಿವೃದ್ಧಿ ಕಾರ್ಯಗಳು ಎಲ್ಲಿಂದ ಆಗಬೇಕು ಎಂದು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದೀರಿ. ಅದರ ಬದಲು ಬಿ.ಪಿ. ಹರೀಶ ತಮ್ಮ ಹರಿಹರ ಕ್ಷೇತ್ರದ ಅಭಿವೃದ್ಧಿ, ಕ್ಷೇತ್ರದ ಜನರ ಅಶೋತ್ತರಕ್ಕೆ ಸ್ಪಂದಿಸಿ ಕೆಲಸ ಮಾಡಿದ್ದರೆ ಇಷ್ಟರಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಾದರೂ ಆಗುತ್ತಿದ್ದವು ಎಂದರು.ಸಚಿವ ಎಸ್.ಎಸ್.ಮಲ್ಲಿಕಾರ್ಜುನ ವಿರುದ್ಧ ಶಾಸಕ ಹರೀಶ ಇಲ್ಲಸಲ್ಲದ ಆರೋಪ ಮಾಡುತ್ತಿದ್ದರೆ ಯುವ ಕಾಂಗ್ರೆಸ್ ನಿಂದ ತೀವ್ರ ಹೋರಾಟ ನಡೆಸಲಾಗುವುದು. ಮಲ್ಲಿಕಾರ್ಜುನ ಮತಗಳ್ಳತನ ಮಾಡಿದ್ದಾರೆಂದೆಲ್ಲಾ ಹರೀಶ ಆರೋಪ ಮಾಡಿದ್ದಾರೆ. ಹೀಗೆ ದೊಡ್ಡವರ ಬಗ್ಗೆ ಮಾತನಾಡಿದರೆ ಬಿಜೆಪಿಯಲ್ಲಿ ದೊಡ್ಡ ಸ್ಥಾನಮಾನ ಸಿಗಬಹುದೆಂಬ ಲೆಕ್ಕಾಚಾರ ಹರೀಶ ಅವರದಾಗಿರಬಹುದು ಎಂದು ಟೀಕಿಸಿದರು.
ಹರಿಹರದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಎಷ್ಟು ಸಲ ಜಿಲ್ಲಾ ಸಚಿವರನ್ನು ಬಿ.ಪಿ.ಹರೀಶ ಭೇಟಿ ಮಾಡಿ, ಚರ್ಚಿಸಿದ್ದಾರೆ. ಹರಿಹರಕ್ಕೆ ಅಲ್ಲಿನ ಶಾಸಕರು ಹೋಗುವುದೇ ಅಪರೂಪವಾಗಿದೆ. ಪ್ರತಿ ಕೆಲಸದಲ್ಲೂ ಶಾಸಕರಿಗೆ ಕಮೀಷನ್ ಕೊಡಬೇಕಾಗುತ್ತದೆಂಬ ಮಾತು ಅಲ್ಲಿದೆ. ಮೊದಲು ಶಾಸಕ ಬಿ.ಪಿ.ಹರೀಶ ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸುವುದು ಸೂಕ್ತ ಎಂದು ಹೇಳಿದರು.
ದಾವಣಗೆರೆ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ನಿರ್ವಹಣೆಯಿಂದಲೇ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿತ್ತು. ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಲು ಮೂಲ ಕಾರಣ ಕಾಂಗ್ರೆಸ್ ಆಡಳಿತವಾಗಿದೆ. ಸ್ಮಾರ್ಟ್‌ಸಿಟಿಯಡಿ ಬಂದ ಅನುದಾನ ಎಷ್ಟು ದುರ್ಬಳಕೆ ಮಾಡಲು ಸಾಧ್ಯವೋ ಅಷ್ಟನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಬಿಜೆಪಿ ಅಧಿಕಾರ ಅವಧಿಯಲ್ಲೇ ಹರಿಹರದ ಅಭಿವೃದ್ಧಿಗೆ ಹರೀಶರ ಕೊಡುಗೆ ಶೂನ್ಯ. ಇನ್ನಾದರೂ ಅಲ್ಲಿನ ಶಾಸಕರು ಡೋಂಗಿ ನಾಟಕ ನಿಲ್ಲಿಸಲಿ ಎಂದು ಸಲಹೆ ನೀಡಿದರು.
ಶಾಸಕ ಹರೀಶ ಅವರ ಪರ ಸುದ್ದಿಗೋಷ್ಟಿ ಮಾಡಲು ಬಂದಿದ್ದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಗ್ಗಳ್ಳಿ ವೀರೇಶ ಸಂಸ್ಕೃತಿ ಬಗ್ಗೆ ಮಾತನಾಡಿದ್ದಾರೆ. ಮೊದಲು ತಮ್ಮ ಶಾಸಕರಿಗೆ ಸಂಸ್ಕೃತಿಯ ಬಗ್ಗೆ ತಿಳಿ ಹೇಳುವ ಜೊತೆಗೆ ಹರಿಹರ ಕ್ಷೇತ್ರದಲ್ಲಿ ಸುತ್ತಾಡಿಸಿ, ಜನಸಂಪರ್ಕ ಸಭೆ, ಜನರಿಂದ ಅಹವಾಲು ಸ್ವೀಕಾರ, ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಕೆಲಸ ಮಾಡಲಿ ಎಂದು ತಾಕೀತು ಹೇಳಿದರು.ದೂಡಾ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ದಿನೇಶ ಕೆ. ಶೆಟ್ಟಿ ಬಿಜೆಪಿ ಶಾಸಕ ಹರೀಶ ವಿರುದ್ಧ ಮಾತನಾಡಿದ್ದಾರೆಂಬ ಆರೋಪವನ್ನು ದೊಗ್ಗಳ್ಳಿ ವೀರೇಶ ಮಾಡಿದ್ದಾರೆ. ದಿನೇಶ ಶೆಟ್ಟರಿಗೆ ಅಂತಹ ಪರಿಸ್ಥಿತಿ ಬಂದಿಲ್ಲ. ಮುಂದೆಯೂ ಬರುವುದಿಲ್ಲ. ದೂಡಾ ಅಧ್ಯಕ್ಷ ಶೆಟ್ಟರ ರಾಜಕೀಯದ ಬಗ್ಗೆ ಆಲೋಚನೆಯನ್ನು ಕೈಬಿಟ್ಟು, ಹರಿಹರ ಕ್ಷೇತ್ರದ ಅಭಿವೃದ್ಧಿಗೆ ಆಲೋಚನೆ ಮಾಡುವತ್ತ ಶಾಸಕ ಹರೀಶ ವರ್ತನೆ, ಹೇಳಿಕೆಗಳನ್ನು ಸರಿಪಡಿಸುವ ಕೆಲಸ ದೊಗ್ಗಳ್ಳಿ ವೀರೇಶ ಇತರರು ಮಾಡಲಿ ಎಂದು ಅವರು ತಿಳಿಸಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವರುಣ್ ಬೆಣ್ಣೆಹಳ್ಳಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ದಾವಣಗೆರೆ ಹೊಸ ರೂಪ ಕೊಡುವ ನಿಟ್ಟಿನಲ್ಲಿ ವೃತ್ತಗಳ ನವೀಕರಣ ಮಾಡುತ್ತಿದ್ದಾರೆ. ಡಾ. ಎಂ.ಸಿ.ಮೋದಿ ವೃತ್ತವನ್ನು ನವೀಕರಿಸಿ, ಹೊಸದಾಗಿ ಫುಟ್‌ಬಾಲ್ ಪುತ್ಥಳಿ ಅನಾವರಣಗೊಳಿಸುವ ಕೆಲಸ ಶುರುವಾಗಿದೆ. ಬಿಜೆಪಿಯವರಂತೆ ಅರೆಬರೆ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುವುದಿಲ್ಲ. ಯಾವುದೇ ಕೆಲಸವಾದರೂ ಶಾಶ್ವತವಾಗಿ ಉಳಿಯುವಂತೆ ಮಾಡುವುದು ನಮ್ಮ ಪಕ್ಷದ ಧ್ಯೇಯ ಎಂದರು.ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಸತೀಶ ಶೆಟ್ಟಿ, ವೀರೇಶ, ಹೇಮಂತ್ ಪಾಪಣ್ಣ, ಇಮ್ರಾನ್ ಅಲಿ ಇತರರು ಇದ್ದರು.
- - --1ಕೆಡಿವಿಜಿ1: ದಾವಣಗೆರೆಯಲ್ಲಿ ಶುಕ್ರವಾರ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಜಾಹಿದ್, ಜಿಲ್ಲಾಧ್ಯಕ್ಷ ವರುಣ್ ಬೆಣ್ಣೆಹಳ್ಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.