ಶಾಸಕ ಹೆಬ್ಬಾರ ಪುತ್ರ ವಿವೇಕ, ಬೆಂಬಲಿಗರು ಶೀಘ್ರ ಕಾಂಗ್ರೆಸ್ಸಿಗೆ

| Published : Apr 03 2024, 01:32 AM IST / Updated: Apr 03 2024, 06:31 AM IST

ಶಾಸಕ ಹೆಬ್ಬಾರ ಪುತ್ರ ವಿವೇಕ, ಬೆಂಬಲಿಗರು ಶೀಘ್ರ ಕಾಂಗ್ರೆಸ್ಸಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಮತ್ತು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಬಂಧ ಅಷ್ಟೊಂದು ಚೆನ್ನಾಗಿರಲಿಲ್ಲ.

ಶಿರಸಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ಬಿಜೆಪಿ ಕಾರ್ಯಕರ್ತರೇ ಪ್ರಯತ್ನ ಮಾಡಿದ್ದಾರೆ ಎಂದು ಶಾಸಕ ಶಿವರಾಮ ಹೆಬ್ಬಾರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಶಾಸಕರು ಬಿಜೆಪಿ ತೊರೆದು ಪುನಃ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹರಿದಾಡತೊಡಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಹೆಬ್ಬಾರ್ ತಮ್ಮ ಬೆಂಗಲಿಗರೊಂದಿಗೆ ಸಭೆ ನಡೆಸಿದ್ದು, ಪುತ್ರನ ನೇತೃತ್ವದಲ್ಲಿ ಬೆಂಬಲಿಗರನ್ನು ಕಾಂಗ್ರೆಸ್ಸಿಗೆ ಸೇರಿಸಲು ಯೋಜನೆ ರೂಪಿಸಿದ್ದಾರೆ.

ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಮತ್ತು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಬಂಧ ಅಷ್ಟೊಂದು ಚೆನ್ನಾಗಿರಲಿಲ್ಲ. ಉತ್ತರಕನ್ನಡ ಜಿಲ್ಲೆಯ ಉಸ್ತುವಾರಿಯಿಂದ ಹಾವೇರಿ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ಬದಲಾಯಿಸಲು ಸಭಾಧ್ಯಕ್ಷರಾಗಿದ್ದ ಕಾಗೇರಿ ಪ್ರಮುಖ ಕಾರಣ. ಇದೇ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರಿದರೆ ತಮ್ಮ ವರ್ಚಸ್ಸು ಕಡಿಮೆಯಾಗುತ್ತದೆ ಎಂದು ಕಾಗೇರಿ ಪ್ರತಿಯೊಂದಕ್ಕೂ ಅಡ್ಡಗಾಲು ಹಾಕಿದ್ದರು ಎಂದು ಶಿವರಾಮ ಹೆಬ್ಬಾರ್ ಸಾಕಷ್ಟು ಬಾರಿ ಪರೋಕ್ಷವಾಗಿ ಹೇಳಿದ್ದರು. ಈಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರು ಘೋಷಣೆಯಾದ ನಂತರ ಹೆಬ್ಬಾರ್ ಅಸಮಾಧಾನ ಇನ್ನಷ್ಟು ಹೆಚ್ಚಾಗಲು ಕಾರಣವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸೋಲಿಸಲು ತಮ್ಮ ಪ್ರಮುಖ ಬೆಂಬಲಿಗರನ್ನು ಕಾಂಗ್ರೆಸ್ ಮನೆ ಬಾಗಿಲಿಗೆ ಕಳುಹಿಸಲು ಸಿದ್ಧರಾಗಿದ್ದಾರೆ.

ಕೆಡಿಸಿಸಿ ಬ್ಯಾಂಕ್ ವಿಶ್ರಾಂತಿಗೃಹದಲ್ಲಿ ಸಭೆ: ನಗರದ ಕೆಡಿಸಿಸಿ ಬ್ಯಾಂಕ್ ವಿಶ್ರಾಂತಿಗೃಹದಲ್ಲಿ ತಮ್ಮ ಬೆಂಬಲಿಗರೊಂದಿಗೆ ಆಂತರಿಕ ಸಭೆ ನಡೆಸಿದ ಹೆಬ್ಬಾರ್, ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮೊದಲ ಹಂತವಾಗಿ ಪುತ್ರ ವಿವೇಕ ಹೆಬ್ಬಾರ್ ಜತೆ ಪ್ರಮುಖ ಬೆಂಬಲಿಗರನ್ನು ಕಾಂಗ್ರೆಸ್ ಸೇರ್ಪಡೆ ಮಾಡಲು ನಿರ್ಧರಿಸಿದರು. ಬನವಾಸಿ ಭಾಗದ ೯ ಪಂಚಾಯಿತಿ ಪ್ರಮುಖರು, ತಮ್ಮ ಬೆಂಬಲಿಗರ ಜತೆ ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ಬಿಜೆಪಿಗೆ ಬಂದ ನಂತರ ತಮ್ಮ ಗೌರವಕ್ಕೆ ಧಕ್ಕೆ ಮಾಡಲಾಗುತ್ತಿದೆ. ರಾಜಕೀಯ ಪ್ರಭಾವ ಬಳಸಿ ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿ ಕೆಲ ನಾಯಕರಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ಹೆಬ್ಬಾರ್ ಅಸಮಾಧಾನ ಹೊರಹಾಕಿದ್ದಾಗಿ ಸಭೆಯಲ್ಲಿ ಭಾಗವಹಿಸಿದ್ದ ಕೆಲ ಬೆಂಬಲಿಗರು ಮಾಹಿತಿ ನೀಡಿದರು.

ವಾರದೊಳಗಡೆ ಸೇರ್ಪಡೆ ದಿನಾಂಕ ನಿಗದಿ: ಮೊದಲ ಹಂತದಲ್ಲಿ ಹೆಬ್ಬಾರ್ ಪುತ್ರ ವಿವೇಕ ಹೆಬ್ಬಾರ್ ಹಾಗೂ ಪ್ರಮುಖ ಬೆಂಬಲಿಗರು ಕಾಂಗ್ರೆಸ್ ಸೇರಲಿದ್ದಾರೆ. ವಾರದೊಳಗೆ ಸೇರ್ಪಡೆ ಕಾರ್ಯ ಆಗಲಿದ್ದು, ಆದರೆ ಹೆಬ್ಬಾರ್ ಅವರು ಬಿಜೆಪಿಯನ್ನು ಅವರಾಗಿ ಬಿಡುವುದಿಲ್ಲ. ಹೆಬ್ಬಾರ್ ಅವರು ಬಿಜೆಪಿಯ ಯಾವುದೇ ಕಾರ್ಯಕ್ರಮ, ಲೋಕಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿಲ್ಲ. ಹೀಗಾಗಿ ಪಕ್ಷದಿಂದ ಉಚ್ಚಾಟನೆ ಮಾಡುವುದು, ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ಹೆಬ್ಬಾರ್ ಅವರನ್ನು ಉಚ್ಚಾಟನೆ ಮಾಡಿದರೆ ಹೆಬ್ಬಾರ್ ಅವರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಉಚಪಚುನಾವಣೆ ಎದುರಿಸಲು ಕಷ್ಟಸಾಧ್ಯದ ಕಾರಣ ಶಾಸಕರಿದ್ದುಕೊಂಡೇ ಕಾಂಗ್ರೆಸ್‌ಗೆ ಪರೋಕ್ಷ ಬೆಂಬಲ ನೀಡಲು ನಿರ್ಧರಿಸಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡವರು ಮಾಹಿತಿ ನೀಡಿದ್ದಾರೆ.

ಜಿಲ್ಲಾಧ್ಯಕ್ಷರ ಬಳಿ ದಿನಾಂಕ ಪಡೆದು ಬನವಾಸಿಯಲ್ಲಿ ಬೃಹತ್ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಪ್ರತಿ ಪಂಚಾಯಿತಿಯಿಂದ ೧೦೦ರಿಂದ ೧೫೦ ಪ್ರಮುಖ ಕಾರ್ಯಕರ್ತರು ಆಗಮಿಸಲು ತಿಳಿಸಿದ್ದಾರೆ. ರಾಜ್ಯದ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ.